ರಾಮನಾಥಪುರ, ಅ. 16: ಕಾವೇರಿ ನದಿ ಸಂರಕ್ಷಣೆ ಹಾಗೂ ಸ್ವಚ್ಛತೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ 16ನೇ ವರ್ಷದ ಕಾವೇರಿ ನದಿ ಜಾಗೃತಿ ರಥಯಾತ್ರೆಯ ಅಂಗವಾಗಿ ಅಕ್ಟೋಬರ್ 27ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ರಾಮನಾಥಪುರದ ಚತುರ್ಯುಗಮೂರ್ತಿ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಕಾವೇರಿ ನದಿಯ ವಹ್ನಿ ಪುಷ್ಕರಣಿಯಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ಹಾಗೂ ಮಹಾ ಆರತಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ಸಚಿವರು ಹಾಗೂ ಶಾಸಕ ಎ. ಮಂಜು ಸಮ್ಮತಿ ಸೂಚಿಸಿದ್ದಾರೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಳಬೋಯಿ ತಿಳಿಸಿದರು.
ರಾಮನಾಥಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಖಿಲ ಭಾರತ ಸನ್ಯಾಸಿ ಸಂಘ, ಕೊಡಗು ಮತ್ತು ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ನಮಾಮಿ ಕಾವೇರಿ ಸಂಘಟನೆಗಳ ಸಹಯೋಗದಲ್ಲಿ ಸ್ವಚ್ಛ ಕಾವೇರಿಗಾಗಿ 16ನೇ ವರ್ಷದ ಜಾಗೃತಿ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 26ರಂದು ತಲಕಾವೇರಿಯಲ್ಲಿ ಸಂಕಲ್ಪದೊಂದಿಗೆ ಆರಂಭವಾಗುವ ಯಾತ್ರೆ ನವೆಂಬರ್ 18ರವರೆಗೆ ಕಾವೇರಿ ನದಿ ತಟದಲ್ಲಿ ಸಾಗಲಿದೆ ಎಂದು ತಿಳಿಸಿದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಮಠಾಧೀಶರು ಹಾಗೂ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಮಾರ್ಗದರ್ಶಕರಾದ ಶ್ರೀ ಸದಾಶಿವ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಸಾಧು-ಸಂತರು ಮತ್ತು ಕಾರ್ಯಕರ್ತರು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳ ಸಾಧು-ಸಂತರು ಹಾಗೂ ಸ್ವಯಂಸೇವಕರು ಸುಮಾರು ಒಂದು ತಿಂಗಳ ಕಾಲ ನದಿ ತಟದಲ್ಲಿ ಸಂಚರಿಸಿ, ಕಾವೇರಿ ನದಿಯ ಮಹತ್ವ, ಸ್ವಚ್ಛತೆ ಮತ್ತು ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಕಾವೇರಿ ಸಂರಕ್ಷಣೆಗೆ ಸರ್ಕಾರ ಆದ್ಯತೆ ನೀಡಲಿ: ಶಾಸಕ ಎ. ಮಂಜು
ಕಾವೇರಿ ನದಿ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಕಲುಷಿತಗೊಳ್ಳುತ್ತಿದ್ದು, ಜಲಮೂಲಗಳೂ ಬರಡಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕಳೆದ 15 ವರ್ಷಗಳಿಂದ ಕಾವೇರಿ ನದಿಯ ಉಗಮಸ್ಥಳವಾದ ತಲಕಾವೇರಿಯಿಂದ ತಮಿಳುನಾಡಿನ ಪೂಂಪುಹಾರ್ವರೆಗೆ ಜಾಗೃತಿ ಯಾತ್ರೆ ನಡೆಸುವ ಮೂಲಕ ನದಿ ತಟದ ಜನರಲ್ಲಿ ಸಂರಕ್ಷಣೆಯ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಶಾಸಕ ಎ. ಮಂಜು ಅಭಿಪ್ರಾಯಪಟ್ಟರು.
ಕಾವೇರಿ ನದಿ ಮಲಿನಗೊಳ್ಳುವುದನ್ನು ತಡೆಯಲು ತಕ್ಷಣದ ಕ್ರಮಗಳನ್ನು ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನದಿಯ ಸ್ವಚ್ಛತೆಗಾಗಿ ಸರ್ಕಾರ ರೂಪಿಸಿರುವ ಒಳಚರಂಡಿ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಗಂಗಾ ನದಿ ಸಂರಕ್ಷಣೆಯ ಮಾದರಿಯಲ್ಲಿ ಕಾವೇರಿ ನದಿಯ ಸಂರಕ್ಷಣೆಗೂ ‘ನಮಾಮಿ ಕಾವೇರಿ’ ಯೋಜನೆಯನ್ನು ರೂಪಿಸಬೇಕು. ಕಾವೇರಿ ನದಿ ಜಲಾನಯನ ಪ್ರದೇಶದ ಪ್ರತಿಯೊಬ್ಬರೂ ನದಿ ಸಂರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.
ಅ. 26ರಂದು ತಲಕಾವೇರಿಯಿಂದ ಯಾತ್ರೆಗೆ ಚಾಲನೆ
ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಳಬೋಯಿ ಮಾತನಾಡಿ, ಅಕ್ಟೋಬರ್ 26ರಂದು ತಲಕಾವೇರಿ ಕ್ಷೇತ್ರದಲ್ಲಿ ಸಂಕಲ್ಪ ಕಾರ್ಯಕ್ರಮದೊಂದಿಗೆ ಜಾಗೃತಿ ರಥಯಾತ್ರೆಗೆ ಚಾಲನೆ ನೀಡಲಾಗುವುದು. ಅಂದು ಸಂಜೆ 4 ಗಂಟೆಗೆ ಕುಶಾಲನಗರದಲ್ಲಿ ಕಾವೇರಿ ಮಾತೆಗೆ ಮಹಾ ಆರತಿ ನೆರವೇರಿಸಲಾಗುವುದು. ಅಕ್ಟೋಬರ್ 27ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ರಾಮನಾಥಪುರದ ವಹ್ನಿ ಪುಷ್ಕರಣಿಯಲ್ಲಿ ವಿಶೇಷ ಪೂಜೆ ಹಾಗೂ ಮಹಾ ಆರತಿ ನಡೆಯಲಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲೆಯ ಭಾಗಮಂಡಲ, ಕುಶಾಲನಗರ, ಕಣಿವೆ ಸೇರಿದಂತೆ ಕಾವೇರಿ ನದಿ ಹರಿಯುವ ವಿವಿಧ ಸ್ಥಳಗಳಲ್ಲಿ ಆರತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಇದರೊಂದಿಗೆ ಸಾರ್ವಜನಿಕರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನದಿ ಸಂರಕ್ಷಣೆ, ಜಲಮೂಲಗಳ ಮಹತ್ವ ಮತ್ತು ಪರಿಸರ ಸ್ವಚ್ಛತೆಯ ಕುರಿತು ಅರಿವು ಮೂಡಿಸಲಾಗುವುದು. ನವೆಂಬರ್ 18ರಂದು ತಮಿಳುನಾಡಿನ ಪೂಂಪುಹಾರ್ನಲ್ಲಿ ಕಾವೇರಿ ನದಿ ಬಂಗಾಳ ಕೊಲ್ಲಿಯನ್ನು ಸೇರುವ ಸ್ಥಳದಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಪವಿತ್ರ ತೀರ್ಥ ವಿಸರ್ಜನೆ ಸಮಾರಂಭದೊಂದಿಗೆ ಯಾತ್ರೆ ಸಮಾಪನಗೊಳ್ಳಲಿದೆ ಎಂದರು.
ಕಾವೇರಿ ನದಿ ಸಂರಕ್ಷಣೆಗೆ ಜಿಲ್ಲಾಡಳಿತ ಮುಂದಾಗಲಿ
ಕೊಡಗು ಜಿಲ್ಲೆಯ ಮೂಲಕ ಹರಿಯುವ ಕಾವೇರಿ ನದಿಯ ತಟದಲ್ಲಿರುವ ಗ್ರಾಮಗಳು ಮತ್ತು ಪಟ್ಟಣಗಳ ತ್ಯಾಜ್ಯ ನೇರವಾಗಿ ನದಿಗೆ ಸೇರುತ್ತಿರುವುದರಿಂದ ನೀರಿನ ಗುಣಮಟ್ಟ ಕುಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ಸಂರಕ್ಷಣೆಗೆ ಜಿಲ್ಲಾಡಳಿತ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ನದಿಯ ಗಡಿ ಗುರುತಿಸುವ ಕಾರ್ಯ ಕೈಗೊಳ್ಳುವುದರ ಜತೆಗೆ, ನದಿಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಅಗತ್ಯ ಕ್ರಮಗಳನ್ನು ಜರುಗಿಸಬೇಕು ಎಂದು ಕಾಳಬೋಯಿ ಒತ್ತಾಯಿಸಿದರು.
ಈ ಕುರಿತು ಸಮಿತಿಯ ಪ್ರಮುಖರ ನಿಯೋಗವು ಕ್ಷೇತ್ರ ಶಾಸಕರ ಮೂಲಕ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕಾವೇರಿ ನದಿ ಸಂರಕ್ಷಣೆಗೆ ಸೂಕ್ತ ಯೋಜನೆ ರೂಪಿಸುವಂತೆ ಮನವಿ ಸಲ್ಲಿಸಲಿದೆ ಎಂದರು.
ರಾಮನಾಥಪುರದಲ್ಲಿ 156ನೇ ತಿಂಗಳ ಹುಣ್ಣಿಮೆ ಮಹಾ ಆರತಿ
ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಅಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಮಾತನಾಡಿ, 16ನೇ ವರ್ಷದ ಕಾವೇರಿ ನದಿ ಜಾಗೃತಿ ರಥಯಾತ್ರೆಯ ಸಂದರ್ಭದಲ್ಲಿ ರಾಮನಾಥಪುರದಲ್ಲಿ ಕಾವೇರಿ ಮಾತೆಗೆ 156ನೇ ತಿಂಗಳ ಹುಣ್ಣಿಮೆ ಮಹಾ ಆರತಿ ಕಾರ್ಯಕ್ರಮವೂ ನಡೆಯಲಿದೆ. ಈ ಧಾರ್ಮಿಕ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಮಿತಿಯ ಖಜಾಂಚಿ ರಘು, ಸಂಘಟನಾ ಕಾರ್ಯದರ್ಶಿ ಶಿವಪ್ಪ, ತಾಲೂಕು ಅಧ್ಯಕ್ಷ ಸಿದ್ದರಾಜು ಹಾಗೂ ಖಜಾಂಚಿ ಕೇಶವ ಅವರು ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸುವಂತೆ ಕೋರಿದರು.
ವರದಿ : ಕುಮಾರಸ್ವಾಮಿ,ರಾಮನಾಥಪುರ
