ಕೊರಟಗೆರೆ :- ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಡೆಗಟ್ಟುವಲ್ಲಿ ಮಣ್ಣಿನ ಸಂರಕ್ಷಣೆ, ಅರಣ್ಯೀಕರಣ ಹಾಗೂ ಕೆರೆಗಳ ಸಂರಕ್ಷಣೆ ಅತ್ಯಂತ ಮಹತ್ವದ್ದಾಗಿದೆ ಎಂದು ಕೊರಟಗೆರೆ ರೋಟರಿ ಕ್ಲಬ್ ಅಧ್ಯಕ್ಷ ನರಸಿಂಹಮೂರ್ತಿ ಹೇಳಿದರು.
ಹೊಳವನಹಳ್ಳಿಯಲ್ಲಿ ಅಸರ್ ಹಾಗೂ ಗ್ರಾಮ ವಿಕಾಸ ಸಂಸ್ಥೆಯ ಮಾರ್ಗದರ್ಶನದಲ್ಲಿ ಹವಾಮಾನ ಕ್ರಿಯಾ ಆಂದೋಲನ ಕರ್ನಾಟಕದ ವತಿಯಿಂದ ರಚಿಸಲಾಗಿರುವ ಕಲ್ಪತರು ಹವಾಮಾನ ಕ್ರಿಯಾ ಸಮಿತಿಗಳ ಒಕ್ಕೂಟ ಆಯೋಜಿಸಿದ್ದ ಮಣ್ಣು ಸಂರಕ್ಷಣೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿಯ ಜೀವಾಳವಾಗಿರುವ ಮಣ್ಣು ಮುಂದಿನ ಪೀಳಿಗೆಗೂ ಉಳಿಯಬೇಕಾಗಿದೆ. ಮಣ್ಣಿನ ಸಂರಕ್ಷಣೆ ಕೃಷಿಯ ಉಳಿವಿಗೆ ಅತ್ಯಗತ್ಯ. ಮುಂದಿನ ಪೀಳಿಗೆಗಾಗಿ ಹಳ್ಳಿಗಳನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯೋನ್ಮುಖರಾಗಬೇಕು. ಈ ಕಾರ್ಯದಲ್ಲಿ ರೋಟರಿ ಕ್ಲಬ್ ಕಲ್ಪತರು ಹವಾಮಾನ ಕ್ರಿಯಾ ಸಮಿತಿಗಳ ಒಕ್ಕೂಟದೊಂದಿಗೆ ಕೈಜೋಡಿಸಲಿದೆ ಎಂದು ಹೇಳಿದರು.

ಹವಾಮಾನ ಕ್ರಿಯಾ ಆಂದೋಲನ ಕರ್ನಾಟಕದ ರಾಜ್ಯ ಸಂಯೋಜಕ ರಾಜಾ ಹುಣಸೂರು ಪ್ರಾಸ್ತಾವಿಕವಾಗಿ ಮಾತನಾಡಿ, ಅಸರ್ ಮತ್ತು ಗ್ರಾಮ ವಿಕಾಸ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ‘ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಹಳ್ಳಿಯನ್ನು ಉಳಿಸೋಣ’ ಅಭಿಯಾನವನ್ನು ಹವಾಮಾನ ಕ್ರಿಯಾ ಸಮಿತಿಗಳ ಮೂಲಕ ನಡೆಸಲಾಗುತ್ತಿದೆ ಎಂದರು.
ನೆಲ, ಜಲ, ಅರಣ್ಯ, ಜೀವಸಂಪತ್ತು ಹಾಗೂ ಗ್ರಾಮೀಣ ಜೀವನೋಪಾಯ ಚಟುವಟಿಕೆಗಳನ್ನು ಸಂಘಟಿತವಾಗಿ ಸಂರಕ್ಷಿಸುವ ಉದ್ದೇಶದಿಂದ ಕೊರಟಗೆರೆ ತಾಲೂಕು ಮಟ್ಟದ ಕಲ್ಪತರು ಹವಾಮಾನ ಕ್ರಿಯಾ ಸಮಿತಿಗಳ ಒಕ್ಕೂಟ ರಚಿಸಲಾಗಿದೆ. ಭಯೋಚಾರ್ ತಯಾರಿಕೆ, ಮರ-ಗಿಡಗಳ ಬೆಳೆಸುವಿಕೆ, ಸಾವಯವ ಕೃಷಿಕರ ಸಂಘಟನೆ, ಸ್ಥಳೀಯ ತಳಿಯ ಜಾನುವಾರುಗಳ ಸಂರಕ್ಷಣೆ, ಬೀಜ ಬ್ಯಾಂಕ್ಗಳ ಸ್ಥಾಪನೆ ಹಾಗೂ ಕೃಷಿ ಆಧಾರಿತ ಉದ್ಯಮಗಳ ಉತ್ತೇಜನ ಸೇರಿದಂತೆ ಹಲವು ಹವಾಮಾನ ಕ್ರಿಯಾ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯ ಸಂಯೋಜಕ ಲೋಕೇಶ್ ಎಂ. ಮಾತನಾಡಿ, ಮಣ್ಣಿನ ಆರೋಗ್ಯ, ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದಾಗುವ ದುಷ್ಪರಿಣಾಮಗಳು, ಸಮಗ್ರ ಹಾಗೂ ಸಾವಯವ ಕೃಷಿ ಮತ್ತು ಸಾವಯವ ಇಂಗಾಲದ ಮಹತ್ವ ಕುರಿತು ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಹೊಳವನಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುನೀತಾ, ತೋಟಗಾರಿಕೆ ಇಲಾಖೆಯ ಅಧಿಕಾರಿ ಕೆಂಪೇಗೌಡ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿ ದತ್ತ ಅವರು ಇಲಾಖೆಯ ವಿವಿಧ ಕಾರ್ಯಕ್ರಮಗಳು ಮತ್ತು ರೈತರಿಗೆ ಲಭ್ಯವಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಬಿದಲೂಟಿ ಗ್ರಾಮದ ಹವಾಮಾನ ಕ್ರಿಯಾ ಸಮಿತಿ ಅಧ್ಯಕ್ಷ ಚನ್ನವೀರ ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಹವಾಮಾನ ಕ್ರಿಯಾ ಆಂದೋಲನದ ತುಮಕೂರು ಜಿಲ್ಲಾ ಸಂಯೋಜಕ ರವಿಕುಮಾರ್ ಕೆ.ಎನ್., ಕೊರಟಗೆರೆ ತಾಲೂಕು ಹವಾಮಾನ ಕ್ರಿಯಾ ಸಮಿತಿಯ ಪದಾಧಿಕಾರಿಗಳು, ಮಣ್ಣು ಸಂರಕ್ಷಕರಾದ ಶಿಲ್ಪಾ, ಲಕ್ಷ್ಮಿ, ಜಾನಕಮ್ಮ, ಅಲುವೇಲಮ್ಮ, ಮಂಜುಳಾ, ಶಾಂತಮ್ಮ, ರಾಮಕ್ಕ, ಜಯಲಕ್ಷ್ಮಿ ಹಾಗೂ ಚಿಕ್ಕಮ್ಮಣ್ಣಿ, ಪ್ರಗತಿಪರ ರೈತರಾದ ಚಂದ್ರಶೇಖರ, ಬಾಲಸುಬ್ರಹ್ಮಣ್ಯ ಮತ್ತು ತಿಮ್ಮರೆಡ್ಡಿ, ರೈತ ಸಂಘದ ಅಧ್ಯಕ್ಷ ಕೆಂಪರಾಜು, ಪತ್ರಕರ್ತ ಪ್ರಸನ್ನ ಹಾಗೂ ನಿವೃತ್ತ ಬ್ಯಾಂಕ್ ಅಧಿಕಾರಿ ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ 100ಕ್ಕೂ ಹೆಚ್ಚು ಹವಾಮಾನ ಕ್ರಿಯಾ ಸಮಿತಿ ಸದಸ್ಯರು, ರೈತರು, ಯುವಕರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
-ಶ್ರೀನಿವಾಸ್ ಕೊರಟಗೆರೆ.
