ಕೆ.ಆರ್. ಪೇಟೆ: ಪುರಸಭಾ ವ್ಯಾಪ್ತಿಯ ಹೊಸಹೊಳಲು ಗ್ರಾಮದಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಕಾರ್ಯಕ್ರಮವು ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು.
ಆರಾಧನಾ ಮಹೋತ್ಸವದಲ್ಲಿ ಸಮಾಜ ಸೇವಕ,ಕೊಡುಗೈದಾನಿ ಆರ್ ಟಿ ಓ ಮಲ್ಲಿಕಾರ್ಜುನ್ ಭಾಗವಹಿಸಿ ರಾಯರ ದರ್ಶನ ಪಡೆದು ಬಳಿಕ ಮಾತನಾಡಿದ ಅವರು ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿರುವ ರಾಯರು ತನ್ನ ಭಕ್ತಾದಿಗಳನ್ನು ತಾವಾಗಿಯೇ ಕರೆಸಿಕೊಳ್ಳುವುದನ್ನು ಕೇಳಿದ್ದೇವೆ.ಇಂದು ಹೊಸಹೊಳಲು ಗ್ರಾಮದಲ್ಲಿ ರಾಯರ 355ನೇ ರಾಘವೇಂದ್ರ ಸ್ವಾಮಿಗಳ ಆರಾಧನಾ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿದ್ದಕ್ಕೆ ಹಾಗೂ ರಾಯರ ದರ್ಶನ ಮಾಡಲು ಅವಕಾಶ ಮಾಡಿಕೊಟ್ಟ ತಮ್ಮೆಲ್ಲರಿಗೂ ಹಾಗೂ ನಮ್ಮ ಕುಟುಂಬದ ಮೇಲೆ ರಾಯರ ಆಶೀರ್ವಾದ ಸದಾ ಇರಲಿ ಪ್ರಾರ್ಥಿಸಿದರು.
ಇದೇ ಸಮಯದಲ್ಲಿ ಆರ್ ಟಿ ಓ ಮಲ್ಲಿಕಾರ್ಜುನ್ ಅವರನ್ನು ಕಾರ್ಯಕ್ರಮದ ಆಯೋಜಕರು ಸನ್ಮಾನಿಸಿದರು.
ತಾಲ್ಲೂಕಿನ ಹೊಸಹೊಳಲು ಗ್ರಾಮದ ಹೊಸ ಬೀದಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಆರಾಧನಾ ಮಹೋತ್ಸವದ ಅಂಗವಾಗಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ವಿಗ್ರಹವನ್ನು ಸುಂದರವಾಗಿ ಅಲಂಕರಿಸಿದ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಗ್ರಾಮದ ನೂರಾರು ಮಹಿಳೆಯರು ಪೂರ್ಣಕುಂಭದೊಂದಿಗೆ ಪಾಲ್ಗೊಂಡು ಭಕ್ತಿಭಾವ ಮೆರೆದು ಸಾಗಿದರು.
ಬೆಳಗಿನ ಜಾವದಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಆರಂಭಗೊಂಡಿದ್ದು, ದಿನವಿಡೀ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆಯಿಂದ ನೆರವೇರಿದವು. ಚನ್ನರಾಯಪಟ್ಟಣದ ಅರ್ಚಕರಾದ ಪ್ರಕಾಶ್ ಅವರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಹಾಗೂ ಆರಾಧನಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಯರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ಮೆರವಣಿಗೆಯ ಸಂದರ್ಭದಲ್ಲಿ ಮಹಿಳೆಯರು ಪೂರ್ಣಕುಂಭ ಹೊತ್ತು ಸಾಗಿದ್ದು, ಭಕ್ತಿಗೀತೆಗಳು ಹಾಗೂ ಧಾರ್ಮಿಕ ಘೋಷಣೆಗಳು ಮೊಳಗಿದವು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ವಿವಿಧ ಬಡಾವಣೆಗಳಿಂದ ಆಗಮಿಸಿದ್ದ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆರಾಧನಾ ಮಹೋತ್ಸವದ ಸಂಭ್ರಮವನ್ನು ಹೆಚ್ಚಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಹಾಗೂ ಆರ್ಟಿಓ ನೌಕರರ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಅವರು ಭಾಗವಹಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದ ಮುಖಂಡರು, ಮಹಿಳೆಯರು, ಯುವಕರು ಹಾಗೂ ಭಕ್ತರು ಉಪಸ್ಥಿತರಿದ್ದು, ಮಹೋತ್ಸವವನ್ನು ಯಶಸ್ವಿಗೊಳಿಸಿದರು. ಆರಾಧನಾ ಮಹೋತ್ಸವವು ಧಾರ್ಮಿಕ ಭಕ್ತಿ, ಸಾಂಸ್ಕೃತಿಕ ಒಗ್ಗಟ್ಟು ಹಾಗೂ ಗ್ರಾಮಸ್ಥರ ಸಹಕಾರಕ್ಕೆ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಹೆಚ್ ಆರ್ ನಂದಕುಮಾರ್, ಹೆಚ್.ಎಲ್.ಬಿ.ಸಿ ರಾಮಚಂದ್ರು, ವೆಂಕಟೇಶ್, ಜ್ಯೋತಿ,ಐಸಿಎಲ್ ಮಂಜುನಾಥ್, ರಾಘು,ಶೀಲಾ,ಸುನಿಲ್ಪುಟ್ಟ,ರಾಣಿ, ಪುರಸಭಾ ಮಾಜಿ ಸದಸ್ಯರಾದ ಹೆಚ್ ಆರ್ ಲೋಕೇಶ್,ಪ್ರವೀಣ್,ಸಾಮಿಲ್ ರಘು,ನಂದಕುಮಾರ್,ಶ್ರೀನಿವಾಸ್, ಹೆಚ್ಎನ್ ಬಾಲಕೃಷ್ಣ, ಶ್ರೀಧರ್, ಸೌಮ್ಯ ಸೇರಿದಂತೆ ಇತರರು ಹಾಜರಿದ್ದರು.
– ಶ್ರೀನಿವಾಸ್ ಆರ್.
