ಕೊರಟಗೆರೆ:- ಸಾಂಪ್ರದಾಯಿಕ ಕೃಷಿ ಪದ್ಧತಿಯೊಂದಿಗೆ ವೈಜ್ಞಾನಿಕ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಲ್ಲಿ ರೈತರು ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಸಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರುದ್ರಪ್ಪ ಎಂ.ಆರ್. ಹೇಳಿದರು.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಶಕುನಿತಿಮ್ಮನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಚಿಕ್ಕನಹಳ್ಳಿ ವತಿಯಿಂದ 2026–27ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್.ಕೆ.ವಿ.ವೈ.) ಅಡಿಯಲ್ಲಿ ಆಯೋಜಿಸಿದ್ದ ರೈತರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಗುಣಮಟ್ಟದ ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಆಯ್ಕೆ ಮಾಡಿಕೊಂಡು, ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡಬೇಕು. ಸರಿಯಾದ ಸಮಯದಲ್ಲಿ ಮತ್ತು ಸೂಕ್ತ ಅಂತರದಲ್ಲಿ ಬಿತ್ತನೆ ಮಾಡುವುದರಿಂದ ಬೆಳೆ ಇಳುವರಿ ಹೆಚ್ಚಿಸಬಹುದು.
ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಸಗೊಬ್ಬರಗಳನ್ನು ಸಮತೋಲನವಾಗಿ ಬಳಸಬೇಕು. ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಂಠಿತವಾಗುವ ಸಾಧ್ಯತೆ ಇರುವುದರಿಂದ ಸಾವಯವ ಹಾಗೂ ಜೈವಿಕ ಗೊಬ್ಬರಗಳ ಬಳಕೆಗೆ ರೈತರು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಬೆಳೆಯ ಬೆಳವಣಿಗೆಯ ಹಂತಕ್ಕೆ ಅನುಗುಣವಾಗಿ ನೀರು ಮತ್ತು ಗೊಬ್ಬರ ನಿರ್ವಹಣೆ, ಕಳೆ ನಿಯಂತ್ರಣ ಹಾಗೂ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕೈಗೊಂಡರೆ ಬೆಳೆ ನಷ್ಟವನ್ನು ತಡೆಗಟ್ಟಬಹುದು. ಕೀಟನಾಶಕಗಳನ್ನು ಅಗತ್ಯಕ್ಕೆ ಅನುಗುಣವಾಗಿ, ಶಿಫಾರಸಿನ ಪ್ರಮಾಣದಲ್ಲಿ ಮಾತ್ರ ಬಳಸಬೇಕು ಎಂದು ಅವರು ತಿಳಿಸಿದರು.
ಹೀರೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ರಮೇಶ್ ಮಾತನಾಡಿ, ಪ್ರತಿಯೊಂದು ಬೆಳೆಯ ಉತ್ತಮ ಬೆಳವಣಿಗೆಗೆ ಮಣ್ಣಿನ ಆರೋಗ್ಯ ಪ್ರಮುಖವಾಗಿದೆ. ಕನಿಷ್ಠ ಮೂರು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿ, ಮಣ್ಣಿನಲ್ಲಿರುವ ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ಅಂಶಗಳ ಆಧಾರದ ಮೇಲೆ ಗೊಬ್ಬರ ಬಳಕೆಗೆ ಶಿಫಾರಸು ಪಡೆಯಬೇಕು. ಮಣ್ಣಿನ ಫಲವತ್ತತೆ ಕಾಪಾಡಲು ಹಸಿರೆಲೆ ಗೊಬ್ಬರ ಹಾಗೂ ಕೊಟ್ಟಿಗೆ ಗೊಬ್ಬರದ ಬಳಕೆ ಅಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆರ್.ಕೆ.ವಿ.ವೈ. ಯೋಜನೆಯಡಿ ರೈತರಿಗೆ ದೊರೆಯುವ ಸೌಲಭ್ಯಗಳು, ಕೃಷಿ ಯಂತ್ರೋಪಕರಣಗಳ ಸಹಾಯಧನ, ಬೀಜ–ಗೊಬ್ಬರ ವಿತರಣೆ, ಕೀಟನಾಶಕಗಳ ಸುರಕ್ಷಿತ ಬಳಕೆ ಹಾಗೂ ಸಮಗ್ರ ಕೃಷಿ ಪದ್ಧತಿ ಕುರಿತು ರೈತರಿಗೆ ತರಬೇತಿ ನೀಡಲಾಯಿತು.
ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಸುನೀತಾ ಡಿ, ಹೋಬಳಿಯ ಕೃಷಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಮುಖಂಡರು ಹಾಗೂ ಶಕುನಿತಿಮ್ಮನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳ 80ಕ್ಕೂ ಹೆಚ್ಚು ರೈತರು ಸೇರಿದಂತೆ ಶಿವಕುಮಾರ್, ಕೆಂಪರಗಯ್ಯ, ಕಾಳಿಚರಣ್, ಲಚ್ಚಿರಾಮ, ದೊಡ್ಡಯ್ಯ, ಶಿವಕುಮಾರ್, ಶ್ರೀನಿವಾಸ್, ರಂಗನಾಥ್,ದಾಸಪ್ಪ, ರಂಗಶಾಮಯ್ಯ, ರಂಗಯ್ಯ, ಲಕ್ಷ್ಮಮ್ಮ , ವೀರಭದ್ರಯ್ಯ, ವೀರಮಲ್ಲಯ್ಯ ,ರಂಗಧಾಮಯ್ಯ, ದೇವರಾಜ್, ಚಂದ್ರಿ , ಶಂಕರನಾಯ್ಕ್
ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದರು.
-ಶ್ರೀನಿವಾಸ್ ಕೊರಟಗೆರೆ.
