ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ಜಿಲ್ಲೆಯ ಹೆಸರಾಂತ ಸಾಹಿತಿಗಳಾದ ಡಾ. ಗೊರೂರು, ಡಾ. ಎಸ್.ಎಲ್. ಭೈರಪ್ಪ ಹಾಗೂ ಶ್ರೀಮತಿ ಭಾನು ಮುಷ್ತಾಕ್ ಅವರ ಸಾಹಿತ್ಯವನ್ನು ಒಳಗೊಂಡ ‘ಸಾಹಿತ್ಯ ಸಹವಾಸ’ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಸಂಘಟಿಸಿತ್ತು. ಈ ಮೂವರು ಸಾಹಿತಿಗಳ ಸಾಹಿತ್ಯವನ್ನು ಮೂರು ವಿಭಿನ್ನ ನೆಲೆಯಲ್ಲಿ ಪ್ರೇಕ್ಷಕ ಪ್ರಭುಗಳಿಗೆ ತಲುಪಿಸುವಲ್ಲಿ ಕಾರ್ಯಕ್ರಮ ಯಶಸ್ಸು ಸಾಧಿಸಿತು.
ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕೇವಲ ಸಾಹಿತಿಗಳಾಗಿ ಉಳಿಯಲಿಲ್ಲ. ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ, ಆ ದಿಕ್ಕಿನಲ್ಲಿ ತಮ್ಮ ಬದುಕನ್ನು ರೂಪಿಸಿಕೊಂಡವರು. ತಾವು ಜನ್ಮ ತಳೆದ ಊರು, ನದಿ ಮತ್ತು ಗ್ರಾಮೀಣ ಬದುಕನ್ನು ಹಾಸ್ಯಪ್ರಜ್ಞೆಯ ಮೂಲಕ ಪ್ರಬಂಧ ಸಾಹಿತ್ಯದಲ್ಲಿ ಚಿತ್ರಿಸಿದವರು. ಆ ಕಾಲದ ಬದುಕನ್ನು ಇಂದಿನ ಬದುಕಿನೊಂದಿಗೆ ಹೋಲಿಸಿ ಮಾತನಾಡಿದವರು ಡಾ. ರಶ್ಮಿ ಪಿ. ಅವರು.

ಇವರು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮತ್ತು ಪು.ತಿ. ನರಸಿಂಹಾಚಾರ್ ಅವರ ಲಲಿತ ಪ್ರಬಂಧಗಳ ತೌಲನಿಕ ಅಧ್ಯಯನ ಕುರಿತ ಪ್ರಬಂಧಕ್ಕೆ ಇದೇ ಆಗಸ್ಟ್ 17ರಂದು ಪಿಎಚ್ಡಿ ಪದವಿ ಪಡೆದಿದ್ದಾರೆ. ಗೊರೂರರ ಸಾಹಿತ್ಯದ ಸಮಕಾಲೀನ ದೃಷ್ಟಿಕೋನ ವಿಷಯವಾಗಿ ಪ್ರಬಂಧ ಮಂಡಿಸುವ ವೇಳೆ ಪ್ರಚಲಿತ ಬದುಕಿನ ಕುರಿತು ಮಾತನಾಡಿದರು. ಆ ಕಾಲಘಟ್ಟದ ಬದುಕನ್ನು ಓದಿ ತಿಳಿದಿರುವುದು ಖರೆ. ಆದರೆ ನಮ್ಮೂರ ಜನರನ್ನು ಭೇಟಿ ಮಾಡಿ ಮಾತನಾಡಿಸಿ, ಅವರ ಅನುಭವಗಳನ್ನು ಒಳಗೊಂಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎನಿಸಿತು.

ಶ್ರೀಮತಿ ವಾಸಂತಿ ಮೂರ್ತಿ ಅವರು ಹೊಸ ತಲೆಮಾರಿಗೆ ಗೊರೂರರ ಸಾಹಿತ್ಯದ ಕುರಿತು ಕೆಲವು ಆಲೋಚನೆಗಳು ಮತ್ತು ಯೋಜನೆಗಳ ವಿಷಯವಾಗಿ ಮಾತನಾಡಿದ ವಿಡಿಯೊವನ್ನು ಪ್ರದರ್ಶಿಸಲಾಯಿತು. ಅವರು ಕೆನಡಾದಲ್ಲಿ ನೆಲೆಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಡಾ. ಗೊರೂರರ ಜನ್ಮದಿನವಾದ ಜುಲೈ 4ರ ಸಂದರ್ಭದಲ್ಲಿ ಭಾರತಕ್ಕೆ ಬಂದು ಡಾ. ಗೊರೂರು ಸಾಹಿತ್ಯಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯ ಪ್ರತಿಷ್ಠಾನ ಟ್ರಸ್ಟ್ನನ್ನೂ ನೋಂದಣಿ ಮಾಡಿಸಿದ್ದಾರೆ.
ಇವರು ತಮ್ಮ ತಂದೆಯೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು. ಜೊತೆಗೆ ಸರ್ಕಾರಕ್ಕೆ ಕೆಲವು ಮನವಿಗಳನ್ನು ಮಾಡಿದರು. ಹಾಸನದ ಹೇಮಗಂಗೋತ್ರಿಯಲ್ಲಿ ಗೊರೂರು ಅಧ್ಯಯನ ಪೀಠ ಸ್ಥಾಪಿಸಬೇಕು. ಬೆಂಗಳೂರಿನ ರಾಜಾಜಿನಗರದಲ್ಲಿರುವ, ಗೊರೂರರು ವಾಸವಿದ್ದ ಸ್ಥಳದ ಸಮೀಪದ ಮೆಟ್ರೊ ನಿಲ್ದಾಣಕ್ಕೆ ಗೊರೂರರ ಹೆಸರು ಇಡಬೇಕು ಹಾಗೂ ಗೊರೂರು ಅವರ ಮನೆಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು ಸ್ಮಾರಕವಾಗಿ ರೂಪಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆಗಳಾಗಿದ್ದವು.

ಶ್ರೀಮತಿ ಭಾನು ಮುಷ್ತಾಕ್ ಅವರು ಲಂಕೇಶ್ ಪತ್ರಿಕೆಯ ವರದಿಗಾರ್ತಿಯಾಗಿ ಕೆಲಸ ಮಾಡಿದ ಜೊತೆಗೆ ವಕೀಲ ವೃತ್ತಿಯನ್ನೂ ನಿರ್ವಹಿಸಿದವರು. ಅವರ ‘ಎದೆಯ ಹಣತೆ’ ಕಥಾ ಸಂಕಲನವನ್ನು ಮಡಿಕೇರಿಯ ದೀಪಾ ಭಾಸ್ತಿ ಅವರು ‘ಹಾರ್ಟ್ ಲ್ಯಾಂಪ್’ ಹೆಸರಿನಲ್ಲಿ ಇಂಗ್ಲಿಷ್ಗೆ ಅನುವಾದಿಸಿದ್ದಾರೆ. ಈ ಕೃತಿಗೆ 2025ರ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದ್ದು, ಇದು ಕನ್ನಡ ಸಾಹಿತ್ಯ ಲೋಕಕ್ಕೆ ದೊರೆತ ದೊಡ್ಡ ಗೌರವವಾಗಿದೆ.
ಗೋಷ್ಠಿ-1ರಲ್ಲಿ ಶ್ರೀಮತಿ ಭಾನು ಮುಷ್ತಾಕ್ ಅವರೊಂದಿಗೆ ಬೆಂಗಳೂರಿನ ದಯಾನಂದ ಸಾಗರ್ ವಿಶ್ವವಿದ್ಯಾಲಯದ ಡಾ. ರೇಖಾದತ್ತ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರು ಸಂವಾದ ನಡೆಸಿದರು. ಬಾನು ಮೇಡಂ ಅವರು ಬೂಕರ್ ಪ್ರಶಸ್ತಿ ಸ್ವೀಕರಿಸಲು ಹೋದ ದಿನ ತಮ್ಮ ಸೂಟ್ಕೇಸ್ ಕಳೆದುಕೊಂಡ ಫಜೀತಿಯನ್ನು ಹೇಳುವಾಗ ಡಾ. ಗೊರೂರರ ‘ಅಮೆರಿಕಾದಲ್ಲಿ ಗೊರೂರು’ ಕೃತಿ ನೆನಪಾಗುತ್ತದೆ. ಈ ಕೃತಿಗೆ 1980ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

‘ಎದೆಯ ಹಣತೆ’ ಕೃತಿಯ ಕುರಿತು ಭಾನು ಮೇಡಂ, ಇದು ತಮ್ಮ ಬದುಕಿನ ಅತ್ಯಂತ ಸಂತೋಷದ ಸಂದರ್ಭವಾಗಿದ್ದು, ತಮ್ಮ ಬದುಕು ಮತ್ತು ಬರಹ ಅತ್ಯಂತ ಕ್ರಿಯಾಶೀಲವಾಗಿ ಕವಲೊಡೆದ ಕಾಲಘಟ್ಟ ಎಂದು ಹೇಳಿದರು. ಬೂಕರ್ ಪ್ರಶಸ್ತಿಯು ಕೈಗೆಟುಕಲಾರದ ಗಗನಕುಸುಮ ಎಂದೇ ತಾವು ಭಾವಿಸಿದ್ದೆ ಎಂದರು.
ಪ್ರಶಸ್ತಿಯ ಆರಂಭಿಕ ಹಂತದ ಸ್ಪರ್ಧೆಯೇ ಅನೇಕ ಸವಾಲುಗಳಿಂದ ಕೂಡಿತ್ತು. ಯಾವುದೇ ಭಾಷೆಯಿಂದ ಇಂಗ್ಲಿಷ್ಗೆ ಅನುವಾದಗೊಂಡ ಕೃತಿಯಾಗಿರಬೇಕು. ಆಯಾ ವರ್ಷದ ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಪ್ರಕಟವಾಗಿರಬೇಕು. ಇಂಗ್ಲೆಂಡ್ ಅಥವಾ ಐರ್ಲೆಂಡ್ನ ಪ್ರಕಾಶನ ಸಂಸ್ಥೆಯಿಂದ ಪ್ರಕಟವಾಗಿರಬೇಕು ಎಂಬ ಅರ್ಹತೆಗಳಿದ್ದವು. ಹೀಗೆ ಅರ್ಹತೆ ಪಡೆದು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪುಸ್ತಕಗಳ ಸಂಖ್ಯೆ 154.

ಜ್ಯೂರಿಗಳ ತಂಡ 13 ಪುಸ್ತಕಗಳನ್ನು ಆಯ್ಕೆ ಮಾಡಿತ್ತು. ಆ ಪಟ್ಟಿ ಬಿಡುಗಡೆಯಾದಾಗ ನನಗೆ ವಿಶೇಷವಾಗಿ ಏನೂ ಅನಿಸಲಿಲ್ಲ. ಆದರೆ ಮರುದಿನದಿಂದ ನನ್ನ ಮಕ್ಕಳ ಫೋನ್ ಕರೆಗಳು ಆರಂಭವಾದವು. ಪತ್ರಕರ್ತರ ಸಂದರ್ಶನಗಳೂ ನಡೆದವು ಎಂದು ಅವರು ನೆನಪಿಸಿಕೊಂಡರು.
ಪುಸ್ತಕ ಸಂಸ್ಕೃತಿ ಕ್ಷೀಣಿಸುತ್ತಿದೆ ಎಂಬ ಅಪವಾದವನ್ನು ಸುಳ್ಳು ಮಾಡುವ ರೀತಿಯಲ್ಲಿ ತಮ್ಮ ಪುಸ್ತಕಗಳು ಓದುಗರ ಕೈ ಸೇರುತ್ತಿವೆ ಎಂದ ಅವರು, ಪುಸ್ತಕ ಪ್ರೀತಿಯ ನೈಜ ಅನುಭವ ನನಗೆ ಇಂಗ್ಲೆಂಡ್ನಲ್ಲಿ ದೊರೆಯಿತು ಎಂದರು. ಅಲ್ಲಿನ ಜನರ ಪುಸ್ತಕ ಪ್ರೀತಿ ಹಾಗೂ ಲೇಖಕರ ಬಗೆಗಿನ ಅಭಿಮಾನ ತಮ್ಮಲ್ಲಿ ಅಚ್ಚರಿ ಮೂಡಿಸಿತು. ಪುಸ್ತಕ ಮತ್ತು ಕಲೆಯನ್ನು ಜೀವಂತವಾಗಿಡಲು ಅವರು ಮಾಡುವ ಪ್ರಯತ್ನ ಅತ್ಯಂತ ಸ್ಫೂರ್ತಿದಾಯಕವಾಗಿದೆ ಎಂದರು.
ಡಾ. ಎಸ್.ಎಲ್. ಭೈರಪ್ಪನವರು ಕಾದಂಬರಿಕಾರರಾಗಿ ಜನಪ್ರಿಯರು. ಅವರ ಕೃತಿಗಳು ಇಂಗ್ಲಿಷ್ ಸೇರಿದಂತೆ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಅವರಿಗೆ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ 2023ರಲ್ಲಿ ಲಭಿಸಿದೆ. ಅವರ ‘ಗೃಹಭಂಗ’, ‘ವಂಶವೃಕ್ಷ’, ‘ನಾಯಿ ನೆರಳು’, ‘ದಾಟು’ ಕಾದಂಬರಿಗಳನ್ನು ನನ್ನ ಓದಿನ ದಿನಗಳಲ್ಲಿಯೇ ಓದಿದ್ದೆನು.

ಅವರ ‘ವಂಶವೃಕ್ಷ’ ಕಾದಂಬರಿಯ ನಾಟಕ ರೂಪಾಂತರವನ್ನು ಮೈಸೂರಿನ ಕಲಾಸುರುಚಿ ತಂಡದವರು ನಾಗಭೂಷಣ್ ಪಿ. ಅವರ ನಿರ್ದೇಶನದಲ್ಲಿ ಪ್ರದರ್ಶಿಸಿದರು. ಹಿಂದಿ ರೂಪಾಂತರ ಪ್ರತಿಭಾ ಅಗರವಾಲ್ ಅವರದ್ದು. ಅದನ್ನು ಮತ್ತೆ ಕನ್ನಡಕ್ಕೆ ಶಾರದಾ ವೆಂಕಟಸುಬ್ಬಯ್ಯ ಅವರು ರೂಪಾಂತರಿಸಿದ್ದಾರೆ.
‘ವಂಶವೃಕ್ಷ’ ಒಂದು ವಂಶದ ಪರಂಪರೆಯ ಕಥೆ. ಈ ಪರಂಪರೆಯಲ್ಲಿ ಕಂಡುಬರುವ ಬಿರುಕುಗಳ ಕಥೆ ಇಂದಿನ ನಮ್ಮ ಬದುಕಿನಲ್ಲಿಯೂ ಪ್ರತಿಫಲಿಸುತ್ತದೆ.
ನಂಜನಗೂಡಿನ ಶ್ರೀನಿವಾಸ ಶ್ರೋತ್ರಿಯವರು ಆತ್ರೇಯ ಗೋತ್ರಕ್ಕೆ ಸೇರಿದ ಸಂಸ್ಕಾರ ಮತ್ತು ಸಂಪ್ರದಾಯನಿಷ್ಠ ಮನೆತನದವರು. ಈ ಪಾತ್ರದಲ್ಲಿ ಎನ್. ಧನಂಜಯ ಅವರು ತಮ್ಮ ಗಾಂಭೀರ್ಯಭರಿತ ನಡೆ, ನುಡಿ ಮತ್ತು ಅಭಿನಯದ ಮೂಲಕ ಜೀವ ತುಂಬಿದರು. ಅವರ ಧರ್ಮಪತ್ನಿ ಭಾಗೀರಥಿ ಪಾತ್ರದಲ್ಲಿ ದೀಪಾ ರವಿಶಂಕರ್ ಕೂಡ ಅಷ್ಟೇ ಗಮನ ಸೆಳೆದರು.
ಇವರ ಮಗ ನಂಜುಂಡ ಆಕಸ್ಮಿಕವಾಗಿ ಕಪಿಲಾ ನದಿಯಲ್ಲಿ ಜಾರಿಬಿದ್ದು ಸಾವಿಗೀಡಾಗುತ್ತಾನೆ. ಸೊಸೆ ಕಾತ್ಯಾಯಿನಿ ಚಿಕ್ಕ ವಯಸ್ಸಿನಲ್ಲೇ ವಿಧವೆಯಾಗುತ್ತಾಳೆ. ಆಕೆಯ ಓದಿನ ಆಕಾಂಕ್ಷೆಗೆ ಮಾವ ಅಡ್ಡಿಯಾಗದೆ ಕಾಲೇಜಿಗೆ ಕಳುಹಿಸುತ್ತಾನೆ. ಈ ಪಾತ್ರವನ್ನು ಅದಿತಿ ಸಮರ್ಥವಾಗಿ ನಿಭಾಯಿಸಿದರು.

ಕಾಲೇಜಿನಲ್ಲಿ ರಾಜಾರಾವ್ ಎಂಬ ಅಧ್ಯಾಪಕರ ಪರಿಚಯ ಪ್ರೇಮಕ್ಕೆ ತಿರುಗಿ, ಕಾತ್ಯಾಯಿನಿ ಗಂಡನ ಮನೆ ತೊರೆಯುತ್ತಾಳೆ. ಇತ್ತ ನಂಜುಂಡ ಮತ್ತು ಕಾತ್ಯಾಯಿನಿಯ ಮಗ ಚೀನಿ ತನ್ನ ತಾತ ಶ್ರೀನಿವಾಸ ಶ್ರೋತ್ರಿಯವರ ಆರೈಕೆಯಲ್ಲಿ ಬೆಳೆದು ದೊಡ್ಡವನಾಗುತ್ತಾನೆ.
ಶ್ರೀನಿವಾಸ ಶ್ರೋತ್ರಿಯವರಿಗೆ ತಮ್ಮ ಹುಟ್ಟಿನ ರಹಸ್ಯ ಮನೆಯಲ್ಲಿಯೇ ಇದ್ದ ಲಕ್ಷ್ಮಿಯಿಂದ ತಿಳಿಯುತ್ತದೆ. ತಾನು ಶ್ರೋತ್ರಿಯ ವಂಶದವನಲ್ಲ, ತನ್ನದು ಆತ್ರೇಯ ಗೋತ್ರವೂ ಅಲ್ಲ; ಬದಲಾಗಿ ಶಾಮದಾಸನೆಂಬ ಹರಿಕಥೆದಾಸರೊಂದಿಗೆ ತನ್ನ ತಾಯಿಗೆ ಇದ್ದ ಅನೈತಿಕ ಸಂಬಂಧದಿಂದ ಹುಟ್ಟಿದವನು ಎಂಬ ಸತ್ಯ ತಿಳಿದು ಅವರು ಹತಾಶರಾಗುತ್ತಾರೆ.
ತಾವು ಆವರೆಗೆ ನಂಬಿಕೊಂಡು ಬಂದಿದ್ದ ಆಚಾರ, ವಿಚಾರ ಮತ್ತು ಸಂಸ್ಕಾರಗಳೆಲ್ಲವೂ ಎಷ್ಟು ಸುಳ್ಳು ಎಂಬ ಕಟು ಸತ್ಯ ಅರಿವಾದಾಗ ಅವರ ಸ್ವಾಭಿಮಾನದ ಕಟ್ಟಡದ ತಳಹದಿಯೇ ಕುಸಿಯುತ್ತದೆ. ಜಿಗುಪ್ಸೆಗೊಂಡ ಶ್ರೋತ್ರಿಯವರು ವಾರಸುದಾರರು ಸಿಗದ ಕಾರಣ ತಮ್ಮ ಎಲ್ಲ ಆಸ್ತಿಯನ್ನೂ ದಾನ ಮಾಡುತ್ತಾರೆ.

ಇತ್ತ ಕಾತ್ಯಾಯಿನಿ ಓದಿನ ನಂತರ ಕಾಲೇಜು ಅಧ್ಯಾಪಕಿಯಾಗಿರುತ್ತಾಳೆ. ಅದೇ ಕಾಲೇಜಿಗೆ ಸೇರುವ ಚೀನಿ ಆಕೆಯನ್ನು ಗುರುತಿಸಲೂ ಇಷ್ಟಪಡದೆ ಕಾಲೇಜು ತೊರೆಯುತ್ತಾನೆ. ಮರುಮದುವೆಯಾದ ಕಾತ್ಯಾಯಿನಿ ಮಕ್ಕಳಾಗದೆ, ಕರ್ತವ್ಯ ಮತ್ತು ಧರ್ಮಗಳ ತೊಳಲಾಟದಲ್ಲಿ ಸಿಲುಕಿ ಸಾವನ್ನಪ್ಪುತ್ತಾಳೆ.
ಮುಂದೆ ಶ್ರೋತ್ರಿಯವರು ರಾಜಾರಾವ್ ಅವರನ್ನು ಭೇಟಿಯಾದಾಗ, ಆತ ತನ್ನ ಚಿಕ್ಕಪ್ಪನ ಮೊಮ್ಮಗನೇ ಎಂಬುದು ತಿಳಿದು ಖಿನ್ನರಾಗುತ್ತಾರೆ. ಪ್ರಬುದ್ಧ ಮನಸ್ಸಿನ, ಪರಿಪಕ್ವ ವ್ಯಕ್ತಿತ್ವದ ಶ್ರೀನಿವಾಸ ಶ್ರೋತ್ರಿಯವರು ಲೌಕಿಕ ಬದುಕಿನ ವ್ಯಾಮೋಹವನ್ನು ತೊರೆದು ಬೆಳಕಿನ ಪಥದತ್ತ ಸಾಗುತ್ತಾರೆ.
ನಾಟಕ ಪ್ರಯೋಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಸನ್ನಿವೇಶಕ್ಕೆ ಪೂರಕವಾದ ಹಾಡುಗಳನ್ನು ಸಂಯೋಜಿಸಿದ್ದು, (ರಚನೆ: ಪ್ರೊ. ಡಿ.ಎ. ಶಂಕರ್) ಗಂಭೀರ ನಾಟಕಕ್ಕೆ ರಂಜನೆಯನ್ನು ನೀಡಿದೆ. ಸುಮನಾ, ನಿಸರ್ಗಾ ಮತ್ತು ವಿಸ್ಮಯ ತಂಡದ ಹಾಡುಗಾರಿಕೆಗೆ ವಿದ್ವಾನ್ ಪುಟ್ಟಣ್ಣಯ್ಯ ವೈ.ಎಂ. ಅವರ ಸಂಗೀತ ಸಾಥ್ ನೀಡಿದರು. ಅವರ ಹಾರ್ಮೋನಿಯಂ ವಾದನ ಕೀಬೋರ್ಡ್ನ್ನೂ ಮೀರಿಸುವಂತಿತ್ತು. ಮಹದೇವ್ ಅವರು ತಬಲಾ ಸಾಥ್ ನೀಡಿದರು.
ನಾಟಕದಲ್ಲಿ ಬರುವ ಲಕ್ಷ್ಮಿ ಪಾತ್ರದಲ್ಲಿ ವಿಜಯಲಕ್ಷ್ಮಿ ಎಂ., ಚೀನಿ ಪಾತ್ರದಲ್ಲಿ ಬಾಲಾಜಿ ಎಂ.ಎನ್. ಹಾಗೂ ಸದಾಶಿವರಾವ್ ಪಾತ್ರವನ್ನು ಮಂಜುನಾಥ್ ಎಂ.ಎನ್. ನಿಭಾಯಿಸಿದರು. ರಾಜಾರಾವ್ ಪಾತ್ರದಲ್ಲಿ ಉಲ್ಲಾಸ್ ಎಚ್.ಎಸ್. ಹಾಗೂ ಅನಂತ ಮೇಷ್ಟ್ರು ಪಾತ್ರವನ್ನು ಪ್ರದೀಪ್ ಎಂ. ನಿರ್ವಹಿಸಿದರು.

ಬೆಳಕಿನ ವಿನ್ಯಾಸವನ್ನು ಮಧುಸೂದನ್ ನೀನಾಸಂ ನಿರ್ವಹಿಸಿದ್ದು, ರಂಗಸಜ್ಜಿಕೆಯನ್ನು ನರಸಿಂಹಕುಮಾರ್ ಮಾಡಿದ್ದರು.
ಕಾರ್ಯಕ್ರಮದ ಉದ್ಘಾಟನೆ ಹಾಗೂ ಆಶಯ ನುಡಿಯಲ್ಲಿ ಸಾಹಿತಿ ಮತ್ತು ವಿಮರ್ಶಕ ಕೆ. ಸತ್ಯನಾರಾಯಣ ಅವರು ಮೂವರು ಸಾಹಿತಿಗಳ ಒಟ್ಟಾರೆ ಸಾಹಿತ್ಯವನ್ನು ತಮ್ಮ ನಿಗದಿತ ಸಮಯದ ಮಿತಿಯಲ್ಲಿಯೇ ಅರ್ಥಪೂರ್ಣವಾಗಿ ಕಟ್ಟಿಕೊಟ್ಟರು.
ಮುಖ್ಯ ಸಂವಹನಾಧಿಕಾರಿ ಸುಧೀಶ್ ವೆಂಕಟೇಶ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಸ್ಥೆಯ ಮಹೇಶ್ ಕುಮಾರ್ ಸಿ.ಎಸ್., ರಾಘವೇಂದ್ರ ಹೇರ್ಳೆ ಹಾಗೂ ಎಸ್.ವಿ. ಮಂಜುನಾಥ್ ಅವರ ಕಾರ್ಯತತ್ಪರತೆ ಶ್ಲಾಘನೀಯವಾಗಿತ್ತು. ಮೂವರು ಸಾಹಿತಿಗಳ ಚಿತ್ರಪಟಗಳ ಸಂಗ್ರಹ ಮತ್ತು ಪ್ರದರ್ಶನದ ವ್ಯವಸ್ಥೆಯೂ ಮೆಚ್ಚತಕ್ಕದ್ದಾಗಿತ್ತು.
ಇದು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ, ಬೆಂಗಳೂರು ಆಯೋಜಿಸಿರುವ 8ನೇ ‘ಸಾಹಿತ್ಯ ಸಹವಾಸ’ ಕಾರ್ಯಕ್ರಮವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಶೇಷವಾಗಿ ಬೇರೆ ಬೇರೆ ಜಿಲ್ಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ರೂಪಿಸಲು, ಈ ಕಾರ್ಯಕ್ರಮದ ಯಶಸ್ಸು ಸಂಸ್ಥೆಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಲಿದೆ ಎಂಬುದು ಸಂಸ್ಥೆಯ ಆಶಯವಾಗಿದೆ. ಈ ಉದ್ದೇಶಕ್ಕೆ ಕಾಲೇಜುಗಳು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸಬೇಕಾಗಿದೆ.
ಗೊರೂರು ಅನಂತರಾಜು, ಹಾಸನ
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,
3ನೇ ಕ್ರಾಸ್, ಹಾಸನ–573201.
