ರಾಮನಾಥಪುರ : ಪಟ್ಟಣದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ವೇದಪಾರಾಯಣದ ಅಂಗವಾಗಿ ಮೂರನೇ ದಿನವಾದ ಗುರುವಾರ ವಿಶೇಷ ಪೂಜೆಗಳು ಹಾಗೂ ಬೆಳ್ಳಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ದೇವರಿಗೆ ಕಳೆದ ಮೂರು ದಿನಗಳಿಂದ ವೇದಪಾರಾಯಣ ನಡೆಯುತ್ತಿದ್ದು, ಮೂರನೇ ದಿನವಾದ ಇಂದು ಬೆಳಿಗ್ಗೆ ಕಲಶಾಭಿಷೇಕ, ಪಂಚಾಮೃತಾಭಿಷೇಕ ಹಾಗೂ ಅಲಂಕಾರ ಸಹಿತ ಮಹಾಪೂಜೆಗಳು ದೇವಾಲಯದ ತಂತ್ರಿಗಳಾದ ವೇ. ಭಾರತೀ ರಮಣ ಆಚಾರ್ಯ ಅವರ ನೇತೃತ್ವದಲ್ಲಿ ನೆರವೇರಿದವು.
ಬಳಿಕ ರಾಮನಾಥಪುರದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಬೆಳ್ಳಿ ರಥೋತ್ಸವ, ಸರ್ವಸೇವೆ ಉತ್ಸವ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ಅಂತ್ಯದಲ್ಲಿ ಮಹಾಮಂಗಳಾರತಿ ನೆರವೇರಿಸಲಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಸುಬ್ರಹ್ಮಣ್ಯಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಈ ಹಿಂದೆ ಹಲವು ವರ್ಷಗಳಿಂದ ದೇವಾಲಯದಲ್ಲಿ ಪೂಜೆ ಮಾಡಿಸಿದ ಭಕ್ತರಿಗೆ ಮಾತ್ರ ದಾಸೋಹದ ವ್ಯವಸ್ಥೆ ಇತ್ತು. ಆದರೆ ಕಳೆದ 15 ದಿನಗಳಿಂದ ಪ್ರತಿದಿನ ಮಹಾಪೂಜೆ ನಂತರ ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ದೇವಾಲಯಕ್ಕೆ ಆಗಮಿಸುವ ಎಲ್ಲ ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ.
ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆ, ಸೇವಾ ಕಾರ್ಯಕ್ರಮಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ದೇವಾಲಯದ ವ್ಯವಸ್ಥಾಪಕ ವೇ. ಸೋಮಶೇಖರ್ ಅವರನ್ನು **9964546947 ಅಥವಾ 8660436527** ಸಂಖ್ಯೆಯಲ್ಲಿ ಹಾಗೂ ಸಹಾಯಕ ವ್ಯವಸ್ಥಾಪಕ ವೇ. ಅಭಿಷೇಕ್ ಅವರನ್ನು **9482033754** ಸಂಖ್ಯೆಯಲ್ಲಿ ಸಂಪರ್ಕಿಸುವಂತೆ ದೇವಾಲಯದ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ.
ವರದಿ : ಕುಮಾರಸ್ವಾಮಿ ರಾಮನಾಥಪುರ
