ರಾಮನಾಥಪುರ, ಆ.27: ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಕಾವೇರಿ ನದಿ ತೀರದ ರಾಮನಾಥಪುರದಲ್ಲಿರುವ ಶ್ರೀ ಉತ್ತರಾದಿ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವು ಗುರುವಾರ ಪ್ರಥಮ ದಿನದ ಉದ್ಘಾಟನೆಯೊಂದಿಗೆ ಆರಂಭಗೊಂಡಿತು.

ಆಗಸ್ಟ್ 27ರಿಂದ 31ರವರೆಗೆ ನಡೆಯಲಿರುವ ಐದು ದಿನಗಳ ಆರಾಧನಾ ಮಹೋತ್ಸವಕ್ಕೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎಸ್. ನರಸಿಂಹಮೂರ್ತಿ ಚಾಲನೆ ನೀಡಿ ಮಾತನಾಡಿದರು.
ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವು ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿಯಾಗಿದ್ದು, ಪ್ರತಿನಿತ್ಯ ನೂರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಮಠಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದು ರಾಮನಾಥಪುರದ ಧಾರ್ಮಿಕ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.

ಮಠಗಳು ಉತ್ತಮವಾಗಿ ಅಭಿವೃದ್ಧಿಯಾದರೆ ಅದು ಗ್ರಾಮದ ಹಿರಿಮೆಯ ಪ್ರತೀಕವಾಗುತ್ತದೆ. ಇಂತಹ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಭಕ್ತರು ಮತ್ತು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ನರಸಿಂಹಮೂರ್ತಿ ಹೇಳಿದರು.
ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕ ವೇದಮೂರ್ತಿ ಕನಕಾಚಾರ್ಯರ ನೇತೃತ್ವದಲ್ಲಿ ಆರಾಧನಾ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಮಠದ ವ್ಯವಸ್ಥಾಪಕ ವೇ. ಕನಕಾಚಾರ್ಯ, ನಿವೃತ್ತ ಪ್ರಾಂಶುಪಾಲ ಆರ್.ಕೆ. ಶ್ರೀನಿವಾಸಮೂರ್ತಿ, ರಾ.ಸು. ನಾಗರಾಜು, ಶ್ರೀಮಠದ ಭಕ್ತ ಬಳಗದ ಸದಸ್ಯರಾದ ವಾಣಿ ನಾಗರಾಜು, ಮೋಕ್ಷ, ವಿರೂಪಾಕ್ಷ, ಧರ್ಮ, ಪ್ರಕಾಶ್, ಕಾವೇರಿ ನದಿ ಸ್ವಚ್ಛತಾ ಸಮಿತಿ ಅಧ್ಯಕ್ಷ ಕುಮಾರಸ್ವಾಮಿ, ಕಾರ್ಯದರ್ಶಿ ಕಾಳಬೋಯಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ಕುಮಾರಸ್ವಾಮಿ ರಾಮನಾಥಪುರ
