ತುಮಕೂರು- ನಗರದ ಮರಳೂರು ಗ್ರಾಮ ದೇವತೆ ಅಮ್ಮನವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಮುಖ್ಯದ್ವಾರ ಲೋಕಾರ್ಪಣೆ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಅದ್ದೂರಿಯಿಂದ ನಡೆಯಿತು.
ನೂತನವಾಗಿ ನಿರ್ಮಿಸಲಾಗಿರುವ ಮರಳೂರಿನ ಮುಖ್ಯದ್ವಾರವನ್ನು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ನಂತರ ಮಾತನಾಡಿದ ಶ್ರೀಗಳು, ತುಮಕೂರು ನಗರದಲ್ಲಿ ಮರಳೂರು ಮೂಲತಃ ಹಳೆಯೂರು. ಇದು ದಕ್ಷಿಣ ದಿಕ್ಕಿನಲ್ಲಿದ್ದು, ಒಳ್ಳೆಯ ಜನರಿದ್ದಾರೆ. ಈ ಭಾಗದ ಜನತೆ ಸಜ್ಜನ ಶಾಸಕರನ್ನು ಮಾಜಿ ಪಾಲಿಕೆ ಸದಸ್ಯರನ್ನು ಪಡೆದಿದ್ದಾರೆ. ಈ ಭಾಗದಲ್ಲಿ ಉತ್ತಮವಾಗಿ ಧಾರ್ಮಿಕ ಕಾರ್ಯಗಳು ಹಾಗೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಪ್ರಶಂಸಿಸಿದರು.
ದೇವಾಲಯಗಳು ಧಾರ್ಮಿಕ ಕೇಂದ್ರಗಳಾಗಿವೆ. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ದೇವಸ್ಥಾನಗಳು ನಿರ್ಮಾಣವಾಗುತ್ತಿರುವುದರಿಂದ ಜನರಲ್ಲಿ ಭಕ್ತಿ ಭಾವನೆ ಮೂಡಲು ಸಹಕಾರಿಯಾಗುತ್ತದೆ. ಪ್ರತಿ ಗ್ರಾಮಗಳಲ್ಲಿ ದೇವಸ್ಥಾನದ ಜತೆಗೆ ಶಾಲೆಗಳು ಅಭಿವೃದ್ಧಿ ಆಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಜ್ಯೋತಿಗಣೇಶ್ ಮಾತನಾಡಿ, ತುಮಕೂರು ನಗರದಲ್ಲಿ ಮರಳೂರು ಅತ್ಯಂತ ಹಳೆಯದಾದ ಊರು. ತುಮಕೂರು ನಗರ ಈ ಭಾಗದಲ್ಲಿ ವಿಸ್ತರಣೆಯಾಗಲು ಮರಳೂರಿನ ಜನರ ಕೊಡುಗೆ ಅಪಾರವಾಗಿದೆ. ಈ ಭಾಗದ ಜನರ ಭೂಮಿಯಿಂದಲೇ ತುಮಕೂರಿನ ಈ ಭಾಗ ಬೆಳೆದಿದೆ ಎಂದರು.
ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್,ಹೆಚ್.ನಿಂಗಪ್ಪ, ಸನತ್, ಪಾಲಿಕೆ ಮಾಜಿ ಸದಸ್ಯ ಧರಣೇಂದ್ರಕುಮಾರ್, ಪತ್ರಬರಹಗಾರರಾದ ಪ್ರಾಣೇಶ್ ಹಾಗೂ ಮರಳೂರಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ : ಕೆ ಬಿ ಚಂದ್ರಚೂಡ್
