ಹಾಸನ: ಜಿಲ್ಲಾಡಳಿತ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ. ಅಧಿಕಾರಿಗಳಿಂದ ಜನರ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ ಎಂದು ಮಾಜಿ ಸಚಿವ ಎ. ಮಂಜು ಹಾಗೂ ಎಚ್.ಡಿ. ರೇವಣ್ಣ ಆರೋಪಿಸಿದರು.
ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಗರ್ಹುಕುಂ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದೆ. ಜಿಲ್ಲಾಧಿಕಾರಿಗಳು ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ, ಹಿಂಬರಹವನ್ನೂ ನೀಡುತ್ತಿಲ್ಲ ಎಂದು ದೂರಿದರು.
ಅರ್ಜಿ ಸ್ವೀಕರಿಸಲು ಸಾಧ್ಯವಿಲ್ಲ ಎಂದಾದರೂ ಅದಕ್ಕೆ ಲಿಖಿತ ಹಿಂಬರಹ ನೀಡಬೇಕು. ಸಾರ್ವಜನಿಕರ ಕುಂದುಕೊರತೆಗಳನ್ನು ಸ್ವೀಕರಿಸಿ, ಬಗರ್ಹುಕುಂ ಪ್ರಕ್ರಿಯೆಯನ್ನು ಪುನರಾರಂಭಿಸಿ ಉಳುಮೆ ಮಾಡುತ್ತಿರುವ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಎ. ಮಂಜು ಒತ್ತಾಯಿಸಿದರು.
ಗ್ರಾಪಂ ಮೀಸಲಾತಿ ಬದಲಾವಣೆ ಆರೋಪ
ಗ್ರಾಮ ಪಂಚಾಯಿತಿ ಮೀಸಲಾತಿ ನಿಗದಿ ಅಧಿಕಾರ ತಹಸೀಲ್ದಾರ್ ಅವರಿಗೆ ಇದೆ. ಹಿಂದಿನ ಮೀಸಲಾತಿ ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಬೇಕು. ಮೀಸಲಾತಿ ಪ್ರಕಟಿಸಿದ ಬಳಿಕ 15 ದಿನಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು. ಆದರೆ ತಹಸೀಲ್ದಾರ್ ಕಳುಹಿಸಿದ ಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬದಲಾಯಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಎ. ಮಂಜು ಆರೋಪಿಸಿದರು.
ಕೆಲವು ಪಂಚಾಯಿತಿಗಳಲ್ಲಿ ಮೀಸಲಾತಿ ಪುನರಾವರ್ತನೆಯಾಗಿದ್ದು, ಇದರಿಂದ ಮತದಾರರ ಹಕ್ಕಿಗೆ ಧಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
‘ಸ್ಪೀಕಿಂಗ್ ಆರ್ಡರ್ ನೀಡಬೇಕು’
ಎಚ್.ಡಿ. ರೇವಣ್ಣ ಮಾತನಾಡಿ, ತಹಸೀಲ್ದಾರ್ ಕಳುಹಿಸಿದ ಮೀಸಲಾತಿ ಪಟ್ಟಿಯಲ್ಲಿ ಬದಲಾವಣೆ ಮಾಡಿದ್ದರೆ, ಯಾವ ಕಾರಣಕ್ಕಾಗಿ ಬದಲಾವಣೆ ಮಾಡಲಾಗಿದೆ ಎಂಬುದನ್ನು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಬೇಕು. ಬದಲಾವಣೆಗೆ ಕಾರಣಗಳನ್ನು ದಾಖಲಿಸಿ ಸ್ಪೀಕಿಂಗ್ ಆರ್ಡರ್ ನೀಡಬೇಕಿತ್ತು ಎಂದು ಹೇಳಿದರು.
ಒಂದು ಪಂಚಾಯಿತಿಯಲ್ಲಿ 10–11 ಕಡೆ ಮೀಸಲಾತಿ ಬದಲಾವಣೆ ಮಾಡಲಾಗಿದೆ. ಹಾಗಾದರೆ ತಹಸೀಲ್ದಾರ್ ತಪ್ಪು ಮಾಡಿದ್ದಾರೆ ಎಂದರ್ಥ. ತಪ್ಪು ಮಾಡಿದ್ದರೆ ಅವರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಜಿಲ್ಲೆಯ ಹಲವು ಅಧಿಕಾರಿಗಳು ವರ್ಗಾವಣೆಗೆ ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ಇದೆ. ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಜಿಲ್ಲಾಧಿಕಾರಿಗಳು ಕಾನೂನುಬದ್ಧವಾಗಿ ಪ್ರಮಾಣೀಕೃತ ಪ್ರತಿಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಸೋಮವಾರ ಸಂಜೆ ವೇಳೆಗೆ ಪತ್ರ ಅಥವಾ ಹಿಂಬರಹ ನೀಡದಿದ್ದರೆ ಪ್ರತಿಭಟನೆ ನಡೆಸಲಾಗುವುದು. ಈ ಕುರಿತು ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ ಎಂದು ಎಚ್.ಡಿ. ರೇವಣ್ಣ ತಿಳಿಸಿದರು.
ರೈತರ ಕೆಲಸಕ್ಕೆ ಆದ್ಯತೆ ನೀಡಿ: ಸ್ವರೂಪ್
ಹಾಸನ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ಜಿಲ್ಲಾಡಳಿತ ಕಚೇರಿ ರಿಯಲ್ ಎಸ್ಟೇಟ್ ಪರವಾಗಿದೆ ಎಂಬ ಭಾವನೆ ಮೂಡುತ್ತಿದೆ. ರೈತರ ಕೆಲಸಗಳು ವಿಳಂಬವಾಗುತ್ತಿದ್ದರೆ, ರಿಯಲ್ ಎಸ್ಟೇಟ್ ಸಂಬಂಧಿತ ಕೆಲಸಗಳು ತ್ವರಿತವಾಗಿ ನಡೆಯುತ್ತಿವೆ ಎಂದು ಆರೋಪಿಸಿದರು.
ಬಗರ್ಹುಕುಂ ಸಮಿತಿ, ತಹಸೀಲ್ದಾರ್ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗಳು ರೈತರ ಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಒತ್ತಾಯಿಸಿದರು.
ಆರೋಪಗಳಿಗೆ ಜಿಲ್ಲಾಡಳಿತದ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.
