ಹಾಸನ: ಆಲೂರು ತಾಲ್ಲೂಕಿನ ಕಸಬಾ ಹೋಬಳಿಯ ಭೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧರ್ಮಪುರಿ ಗ್ರಾಮದ ಬ್ಯಾಬಾ ಫಾರೆಸ್ಟ್ ಕಾಲೋನಿ ನಂ.4ರಲ್ಲಿ ಗ್ರಾಮಾಭಿವೃದ್ಧಿಗಾಗಿ ಮೀಸಲಿಟ್ಟಿರುವ ಜಮೀನನ್ನು ಕೃಷ್ಣಗೌಡ ಎಂಬುವರಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ಆರೋಪಿಸಿ, ಕೂಡಲೇ ಮಂಜೂರಾತಿ ರದ್ದುಪಡಿಸಿ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಬೇಕು ಎಂದು ಗ್ರಾಮಸ್ಥ ಸ್ನೇಹಮಯಿ ಗಣೇಶ್ ಒತ್ತಾಯಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ಮುಳುಗಡೆ ಸಂತ್ರಸ್ತರಾದವರಿಗೆ ಸುಮಾರು 60–70 ವರ್ಷಗಳ ಹಿಂದೆ ಬ್ಯಾಬಾ ಫಾರೆಸ್ಟ್ ಕಾಲೋನಿ ನಂ.4ರಲ್ಲಿ ನಿವೇಶನಗಳನ್ನು ನಿರ್ಮಿಸಿ ನೀಡಲಾಗಿತ್ತು. ಭವಿಷ್ಯದಲ್ಲಿ ಗ್ರಾಮದ ಅಭಿವೃದ್ಧಿಗೆ ಅಗತ್ಯವಾಗುವ ಪ್ರಾಥಮಿಕ ಆರೋಗ್ಯ ಕೇಂದ್ರ, ಕ್ರೀಡಾಂಗಣ, ದೇವಸ್ಥಾನ ಸೇರಿದಂತೆ ವಿವಿಧ ಸಾರ್ವಜನಿಕ ಉದ್ದೇಶಗಳಿಗೆ ಜಾಗವನ್ನು ಮೀಸಲಿಡಲಾಗಿತ್ತು ಎಂದು ತಿಳಿಸಿದರು.
ಆದರೆ ಗ್ರಾಮಾಭಿವೃದ್ಧಿಗಾಗಿ ಮೀಸಲಿಟ್ಟಿದ್ದ ಜಾಗವನ್ನು ಕೃಷ್ಣಗೌಡ ಅವರು ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಮಂಜೂರು ಮಾಡಿಸಿಕೊಂಡಿದ್ದಾರೆ. ಅಧಿಕಾರಿಗಳ ಮಟ್ಟದಲ್ಲಿ ಅಕ್ರಮವಾಗಿ ಮಂಜೂರಾತಿ ಮಾಡಲಾಗಿದೆ ಎಂದು ಆರೋಪಿಸಿದರು.
ಈ ಕುರಿತು 1993ರಿಂದಲೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಲವು ವರ್ಷಗಳಿಂದ ಗ್ರಾಮಕ್ಕೆ ಬಾರದಿದ್ದ ಮಂಜೂರಾತಿದಾರರು 2022ರಿಂದ ಸ್ಥಳಕ್ಕೆ ಆಗಮಿಸಿ ಜಾಗವನ್ನು ತಮ್ಮ ಅನುಭವಕ್ಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಇದರಿಂದ ಸುಮಾರು 120 ಕುಟುಂಬಗಳಿರುವ ಗ್ರಾಮಸ್ಥರೊಂದಿಗೆ ಗಲಾಟೆ ನಡೆಯುತ್ತಿದೆ ಎಂದು ದೂರಿದರು.
2023ರಲ್ಲಿ ಸದರಿ ಜಮೀನಿನ ಪಹಣಿಯಲ್ಲಿ ಮಂಜೂರಾತಿದಾರರ ಕುಟುಂಬಸ್ಥರ ಹೆಸರು ನಮೂದಾಗಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಮಂಜೂರಾತಿ ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಬಳಿಕ ಗ್ರಾಮ ಆಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಜಮೀನು ಮಂಜೂರಾತಿ ರದ್ದುಪಡಿಸುವಂತೆ ವರದಿ ನೀಡಿದ್ದರೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ದಾಖಲೆಗಳ ಸಮಗ್ರ ಪರಿಶೀಲನೆಗೆ ಆಗ್ರಹ
ಹೇಮಾವತಿ ಜಲಾಶಯ ಯೋಜನೆ ಸಂತ್ರಸ್ತರ ಹೆಸರಿನಲ್ಲಿ ಜಮೀನು ಮಂಜೂರು ಮಾಡಿರುವುದರ ನೈಜತೆ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಎಸ್ಎಲ್ಒ ಅಧಿಕಾರಿಗಳು ಸಮಗ್ರವಾಗಿ ಪರಿಶೀಲಿಸಬೇಕು. ಗ್ರಾಮಾಭಿವೃದ್ಧಿಗಾಗಿ ಮೀಸಲಿಟ್ಟಿರುವ ಜಾಗವನ್ನು ಯಾವುದೇ ವ್ಯಕ್ತಿಯ ಹೆಸರಿಗೆ ನೀಡದೆ, ಸಾರ್ವಜನಿಕ ಉದ್ದೇಶಗಳಿಗೆ ಬಳಸಬೇಕು ಎಂದು ಸ್ನೇಹಮಯಿ ಗಣೇಶ್ ಆಗ್ರಹಿಸಿದರು.
ಬ್ಯಾಬಾ ಫಾರೆಸ್ಟ್ ಕಾಲೋನಿ ನಂ.4 ಸುಮಾರು 1,506 ಎಕರೆ ಪ್ರದೇಶ ಹೊಂದಿದ್ದು, ಅದರ ದುರಸ್ತಿ ಹಾಗೂ ದಾಖಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹಲವು ವರ್ಷಗಳಿಂದ ಬಗೆಹರಿದಿಲ್ಲ. ಧರ್ಮಪುರಿ ಗ್ರಾಮದಲ್ಲಿ ಸುಮಾರು 120 ಕುಟುಂಬಗಳು ವಾಸಿಸುತ್ತಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಾದ ಪರ್ಯಾಯ ಜಾಗವೂ ಇಲ್ಲ. ಹೀಗಾಗಿ ಈ ಜಮೀನನ್ನು ಗ್ರಾಮದ ಭವಿಷ್ಯದ ಅಭಿವೃದ್ಧಿಗಾಗಿ ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ತಾಲ್ಲೂಕು ಹಾಗೂ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ಜಮೀನು ಮಂಜೂರಾತಿಯನ್ನು ರದ್ದುಪಡಿಸಬೇಕು. ಗ್ರಾಮಸ್ಥರ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ನಾಗೇಶ್, ವಿನಯ್, ಧರ್ಮೇಗೌಡ ಹಾಗೂ ರಘು ಉಪಸ್ಥಿತರಿದ್ದರು.
