ಹಾಸನ: ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ ಇದ್ದರೂ ವಯೋವೃದ್ಧ ದಂಪತಿಯನ್ನು ನೋಡಿಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅನಾರೋಗ್ಯದಿಂದ ಆರು ವರ್ಷಗಳಿಂದ ಹಾಸಿಗೆ ಹಿಡಿದಿರುವ ಪತ್ನಿಯ ಆರೈಕೆಯ ಜವಾಬ್ದಾರಿಯೊಂದಿಗೆ 86 ವರ್ಷದ ವೃದ್ಧರೊಬ್ಬರು ನೆರವಿಗಾಗಿ ಕಣ್ಣೀರಿಟ್ಟಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.
ನಿಟ್ಟೂರು ಗ್ರಾಮದ ರೇವಣ್ಣ ಸಿದ್ದಪ್ಪ (86) ಹಾಗೂ ಅವರ ಪತ್ನಿ ಜಯಮ್ಮ (76) ಅವರು ಸುದ್ದಿಗೋಷ್ಠಿಯಲ್ಲಿ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದು, ಮಕ್ಕಳಿಂದ ತಮಗೆ ಸೂಕ್ತ ಆರೈಕೆ ಹಾಗೂ ರಕ್ಷಣೆ ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
‘ನಮಗೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ ಇದ್ದಾರೆ. ಎಲ್ಲರಿಗೂ ಮದುವೆ ಮಾಡಿದ್ದೇವೆ. ಮಕ್ಕಳನ್ನು ಸಾಕಿ ಬೆಳೆಸಿ, ಅವರ ಜವಾಬ್ದಾರಿಯನ್ನೂ ನಿರ್ವಹಿಸಿದ್ದೇವೆ. ಆದರೆ ಈಗ ವಯಸ್ಸಾದ ಕಾಲದಲ್ಲಿ ನಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲ’ ಎಂದು ರೇವಣ್ಣ ಸಿದ್ದಪ್ಪ ಅಳಲು ತೋಡಿಕೊಂಡರು.
ಜಯಮ್ಮ ಅವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಕಳೆದ ಆರು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಅವರ ಆರೈಕೆ ಮಾಡುವುದು ಕಷ್ಟವಾಗಿದ್ದು, ತಮ್ಮ ವಯಸ್ಸಿನ ಕಾರಣದಿಂದ ದೈನಂದಿನ ಜೀವನ ನಿರ್ವಹಣೆಯೂ ಕಷ್ಟಕರವಾಗಿದೆ ಎಂದು ರೇವಣ್ಣ ಸಿದ್ದಪ್ಪ ತಿಳಿಸಿದ್ದಾರೆ.
ಶಿಥಿಲಾವಸ್ಥೆಯಲ್ಲಿರುವ ಮನೆ
ನಾವು ವಾಸಿಸುತ್ತಿರುವ ಮನೆಯೂ ಶಿಥಿಲಾವಸ್ಥೆಯಲ್ಲಿದೆ. ವಯಸ್ಸಾದ ಕಾರಣ ಅಡುಗೆ ಮಾಡಿಕೊಳ್ಳುವ ಶಕ್ತಿಯಿಲ್ಲ. ಕೆಲವೊಮ್ಮೆ ಹೋಟೆಲ್ನಿಂದ ಊಟ ತಂದುಕೊಳ್ಳುತ್ತೇವೆ. ಇಲ್ಲದಿದ್ದರೆ ಎರಡು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ಇದೆ. ಕೆಲವು ದಿನಗಳಲ್ಲಿ ರಾತ್ರಿ ಹಸಿವಿನಿಂದಲೇ ಮಲಗುವಂತಾಗುತ್ತದೆ ಎಂದು ಅವರು ನೋವು ವ್ಯಕ್ತಪಡಿಸಿದರು.
ತಮ್ಮ ಬದುಕಿಗೆ ಆಧಾರವಾಗಿರುವ ಎರಡು ಎಕರೆ ಜಮೀನನ್ನೂ ಹಂಚಿಕೆ ಮಾಡಿಕೊಡುವಂತೆ ಮಕ್ಕಳು ಒತ್ತಡ ಹೇರುತ್ತಿದ್ದಾರೆ ಎಂದು ರೇವಣ್ಣ ಸಿದ್ದಪ್ಪ ಆರೋಪಿಸಿದ್ದಾರೆ. ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಳ್ಳುವುದಕ್ಕಿಂತ ಮಕ್ಕಳಿಗೆ ಆಸ್ತಿಯ ಮೇಲೆಯೇ ಹೆಚ್ಚು ಆಸಕ್ತಿ ಇದೆ ಎಂದು ಅವರು ದೂರಿದರು.
ಮದ್ಯ ಸೇವಿಸಿ ಬಂದು ಹಲ್ಲೆ ಆರೋಪ
ಹಿರಿಯ ಮಗ ಕುಮಾರ ಪ್ರತಿನಿತ್ಯ ಮದ್ಯ ಸೇವಿಸಿ ಬಂದು ತಮ್ಮ ಮೇಲೆ ಹಲ್ಲೆ ನಡೆಸುತ್ತಾನೆ ಎಂದು ರೇವಣ್ಣ ಸಿದ್ದಪ್ಪ ಆರೋಪಿಸಿದ್ದಾರೆ. ಮಗನ ಹಿಂಸೆಯ ಕುರಿತು ಹಲವು ಬಾರಿ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ನಮಗೆ ರಕ್ಷಣೆ ಇಲ್ಲದಂತಾಗಿದೆ. ವಯಸ್ಸಾದ ನಾವು ಯಾರ ಮೊರೆ ಹೋಗಬೇಕು ಎಂಬುದೇ ತಿಳಿಯುತ್ತಿಲ್ಲ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.
ಜಮೀನು ಮಾರಾಟಕ್ಕೂ ರಕ್ಷಣೆ ಕೋರಿಕೆ
ನಿತ್ಯದ ಊಟ ಹಾಗೂ ಪತ್ನಿಯ ಆರೈಕೆಗೆ ಹಣದ ಅವಶ್ಯಕತೆ ಇರುವುದರಿಂದ ತಾವು ಕ್ರಯಕ್ಕೆ ಪಡೆದಿರುವ 20 ಗುಂಟೆ ಜಮೀನನ್ನು ಮಾರಾಟ ಮಾಡಲು ಪೊಲೀಸ್ ರಕ್ಷಣೆ ನೀಡಬೇಕು ಎಂದು ವೃದ್ಧ ದಂಪತಿ ಮನವಿ ಮಾಡಿದ್ದಾರೆ.
ತಮ್ಮ ಮೇಲೆ ಹಲ್ಲೆ ನಡೆಸುತ್ತಿರುವ ಮಗನ ವಿರುದ್ಧ ಕಾನೂನು ಕ್ರಮ ಕೈಗೊಂಡು, ಎಫ್ಐಆರ್ ದಾಖಲಿಸಿ ರಕ್ಷಣೆ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
‘ವೃದ್ಧಾಶ್ರಮಕ್ಕಾದರೂ ಕಳುಹಿಸಿ’
‘ಮಕ್ಕಳಿಂದ ಹಿಂಸೆ ಅನುಭವಿಸುತ್ತಾ ಬದುಕುವುದು ತುಂಬಾ ಕಷ್ಟವಾಗಿದೆ. ನಮ್ಮನ್ನು ವೃದ್ಧಾಶ್ರಮಕ್ಕಾದರೂ ಕಳುಹಿಸಿ. ಅಲ್ಲಾದರೂ ನೆಮ್ಮದಿಯಾಗಿ ಬದುಕುತ್ತೇವೆ. ಹೀಗೆಯೇ ಬಿಟ್ಟರೆ ನಾವಿಬ್ಬರೂ ಸತ್ತು ಹೋಗುತ್ತೇವೆ’ ಎಂದು ರೇವಣ್ಣ ಸಿದ್ದಪ್ಪ ಕಣ್ಣೀರಿಟ್ಟರು.
ವಯೋವೃದ್ಧ ದಂಪತಿಯ ಅಳಲಿಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಅವರ ಸುರಕ್ಷತೆ, ಆಹಾರ, ವೈದ್ಯಕೀಯ ಆರೈಕೆ ಹಾಗೂ ವಾಸದ ವ್ಯವಸ್ಥೆ ಕುರಿತು ಅಗತ್ಯ ನೆರವು ಒದಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
