ಶ್ಲೋಕ – 07
ಪ್ರವೃತ್ತಿಂ ಚ ನಿವೃತ್ತಿಂ ಚ ಜನಾ ನ ವಿದುರಾಸುರಾಃ ।
ನ ಶೌಚಂ ನಾಪಿಚಾSಚಾರೋ ನ ಸತ್ಯಂ ತೇಷು ವಿದ್ಯತೇ ॥೭॥
ಪ್ರವೃತ್ತಿಮ್ ಚ ನಿವೃತ್ತಿಮ್ ಚ ಜನಾಃ ನ ವಿದುಃ ಆಸುರಾಃ ।
ನ ಶೌಚಮ್ ನ ಅಪಿ ಚ ಆಚಾರಃ ನ ಸತ್ಯಮ್ ತೇಷು ವಿದ್ಯತೇ –ಕೆಡುನಡೆಯ ಮಂದಿ ಯಾವ ದಾರಿ ಹಿಡಿಯಬೇಕು, ಯಾವುದನ್ನು ಬಿಡಬೇಕು ಎಂಬುದನ್ನರಿಯರು. ಮಡಿಯಿಲ್ಲ; ಒಳ್ಳೆಯ ನಡೆಯಿಲ್ಲ; ಅವರಲ್ಲಿ ದಿಟದ ನುಡಿಯಿಲ್ಲ.
ಆಸುರೀ ಸ್ವಭಾವದವರ ಸಾಮಾಜಿಕ ನಡೆ-ನುಡಿಯುನ್ನು ಕೃಷ್ಣ ಇಲ್ಲಿ ವಿವರಿಸುತ್ತಾನೆ. ಆಸುರೀ ಸ್ವಭಾವದವರಿಗೆ ಯಾವುದು ಮಾಡಬೇಕು, ಯಾವುದು ಮಾಡಬಾರದು ಎನ್ನುವ ಎಚ್ಚರವಿರುವುದಿಲ್ಲ. ಇದರಿಂದ ಅವರು ಮಾಡಬಾರದ್ದನ್ನೇ ಮಾಡುತ್ತಿರುತ್ತಾರೆ. ಇವರಿಗೆ ನ್ಯಾಯ ಅನ್ಯಾಯ ಯಾವುದೂ ಮುಖ್ಯವಲ್ಲ. ಹಣ ಸಂಪಾದನೆ ಮತ್ತು ಗಣ್ಯವ್ಯಕ್ತಿ ಸ್ಥಾನ ಗಳಿಸಬೇಕು ಎನ್ನುವುದು ಇವರ ಮೂಲಭೂತ ಬಯಕೆ. ಇದರಿಂದಾಗಿ ಹಣ ಸಂಪಾದನೆಯಲ್ಲಿ ನ್ಯಾಯದ ಮುಖವಿರಬೇಕು ಎನ್ನುವ ಎಚ್ಚರ ಇವರಿಗಿರುವುದಿಲ್ಲ.
ಮೂಲಭೂತವಾಗಿ ಆಸುರೀ ಸ್ವಭಾವದವರಲ್ಲಿ ನೈರ್ಮಲ್ಯವಿರುವುದಿಲ್ಲ. ಒಳ್ಳಯಮಾತು, ಒಳ್ಳೆಯ ಯೋಚನೆ, ಸ್ವಚ್ಛ ಶರೀರ ಇವರಲ್ಲಿರುವುದಿಲ್ಲ. ಇವರು ಬಾಹ್ಯವಾಗಿ ಬಹಳ ಶುದ್ಧರಂತೆ ನಾಟಕವಾಡಿಕೊಂಡು ಬದುಕುತ್ತಿರುತ್ತಾರೆ. ಇವರು ಎಂದೂ ಪ್ರಾಮಾಣಿಕರಾಗಿರುವುದಿಲ್ಲ. ಏನು ಮಾಡಿದರೂ ಅದು ತೋರಿಕೆಗಾಗಿ.
ನಮಗೆ ಕೃಷ್ಣ ಗೀತೆಯಲ್ಲಿ ಹೇಳುವ ಒಂದೊಂದು ಗುಣ ನಡತೆಗೆ ಉದಾಹರಣೆ ಮಹಾಭಾರತದಲ್ಲೇ ಸಿಗುತ್ತದೆ. ಅದಕ್ಕಾಗಿ ಗೀತೆಯನ್ನು ಮಹಾಭಾರತದ ಸಾರ ಎನ್ನುವುದು. ಆಸುರೀ ಸ್ವಭಾವಕ್ಕೆ ಅತ್ಯುತ್ತಮ ಉದಾಹರಣೆ ‘ದುರ್ಯೋಧನ’.
ಈ ಆಸುರೀ ಸ್ವಭಾವದವರು ಹೇಗೆ ಸಮಾಜ ಕಂಟಕರಾಗುತ್ತಾರೆ, ಅವರ ತಿಳುವಳಿಕೆ ಏನು? ಎನ್ನುವುದನ್ನು ಈ ಅಧ್ಯಾಯದ ಮುಂದಿನ ಭಾಗದಲ್ಲಿ ಕೃಷ್ಣ ವಿಸ್ತಾರವಾಗಿ ವಿವರಿಸುತ್ತಾನೆ.
