ಬೆಂಗಳೂರು, ಸೆ. 2: ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕುಗಳು ಕನ್ನಡಿಗರೊಂದಿಗೆ ಕನ್ನಡದಲ್ಲೇ ವ್ಯವಹರಿಸುವುದು ಅವರ ಭಾಷಾ ಹಕ್ಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಬ್ಯಾಂಕ್ ಆಫ್ ಬರೋಡಾ ಸ್ಥಳೀಯ ಭಾಷೆ ತಿಳಿದಿರುವ ಅಧಿಕಾರಿಗಳನ್ನು ನೇಮಕ ಮಾಡಲು ಮುಂದಾಗಿರುವ ಕ್ರಮವನ್ನು ಸ್ವಾಗತಿಸಿರುವ ಅವರು, ಈ ವಿಚಾರಕ್ಕಾಗಿ ಧ್ವನಿ ಎತ್ತಿದ ಕನ್ನಡಪರ ಸಂಘಟನೆಗಳು ಹಾಗೂ ಹೋರಾಟ ನಡೆಸಿದ ಕನ್ನಡಿಗರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಬ್ಯಾಂಕುಗಳಲ್ಲೂ ಕನ್ನಡ ಬಲ್ಲ ಅಭ್ಯರ್ಥಿಗಳ ನೇಮಕಕ್ಕೆ ಆದ್ಯತೆ ನೀಡಬೇಕು. ಈ ಸಂಬಂಧ ಕೇಂದ್ರ ಹಣಕಾಸು ಇಲಾಖೆ ಅಗತ್ಯ ನಿಯಮಗಳನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕನ್ನಡಿಗರು ತಮ್ಮದೇ ರಾಜ್ಯದಲ್ಲಿ ಬ್ಯಾಂಕಿಂಗ್ ಸೇರಿದಂತೆ ಯಾವುದೇ ಸೇವೆ ಪಡೆಯುವ ಸಂದರ್ಭದಲ್ಲಿ ಭಾಷೆಯ ಕಾರಣದಿಂದ ತೊಂದರೆ ಎದುರಿಸಬಾರದು. ಕನ್ನಡದಲ್ಲಿ ಸೇವೆ ಪಡೆಯುವುದು ಅವರ ಹಕ್ಕಾಗಿದ್ದು, ಅದನ್ನು ಖಚಿತಪಡಿಸುವುದು ರಾಜ್ಯದಲ್ಲಿ ಸೇವೆ ನೀಡುವ ಪ್ರತಿಯೊಂದು ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದು ಕೇವಲ ಉದ್ಯೋಗಾವಕಾಶದ ವಿಚಾರವಲ್ಲ. ಕನ್ನಡಿಗರ ಭಾಷಾ ಹಕ್ಕು, ಆತ್ಮಗೌರವ ಹಾಗೂ ಸ್ಥಳೀಯ ಭಾಷೆಗೆ ನೀಡಬೇಕಾದ ಗೌರವದ ಪ್ರಶ್ನೆಯಾಗಿದೆ. ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಸಂಸ್ಥೆಗಳು ಕನ್ನಡಕ್ಕೆ ಆದ್ಯತೆ ನೀಡಬೇಕು ಹಾಗೂ ಉದ್ಯೋಗ ನೇಮಕಾತಿಯಲ್ಲೂ ಕನ್ನಡ ಬಲ್ಲವರಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಶಿವರಾಜ ತಂಗಡಗಿ ಆಗ್ರಹಿಸಿದ್ದಾರೆ.
