ಜೈಪುರ, ಸೆ. 2: ವಿಶ್ವವಿಖ್ಯಾತ ಜೈಪುರ ಸಾಹಿತ್ಯೋತ್ಸವದ 20ನೇ ಆವೃತ್ತಿಯು 2027ರ ಜನವರಿಯಲ್ಲಿ ಜೈಪುರದಲ್ಲಿ ಅದ್ದೂರಿಯಾಗಿ ನಡೆಯಲಿದೆ.
- ರಾಜಸ್ಥಾನ ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಬಹುಭಾಷಾ ಕಥನ ಪರಂಪರೆಯ ಮಹಾ ಸಂಭ್ರಮ
- ಇದುವರೆಗೆ 8,000ಕ್ಕೂ ಹೆಚ್ಚು ಸಾಹಿತಿಗಳು, ಭಾಷಣಕಾರರು ಹಾಗೂ ಕಲಾವಿದರು ಭಾಗಿ
- 50 ಲಕ್ಷಕ್ಕೂ ಅಧಿಕ ಪ್ರತ್ಯಕ್ಷ ಸಂದರ್ಶಕರು ಹಾಗೂ 100 ಕೋಟಿಗೂ ಅಧಿಕ ಡಿಜಿಟಲ್ ವೀಕ್ಷಕರನ್ನು ತಲುಪಿದ ಉತ್ಸವ
ಮೂಲಭೂತ ಪುಸ್ತಕಗಳು, ಹೊಸ ಚಿಂತನೆಗಳು ಹಾಗೂ ಗಂಭೀರ ಸಂವಾದಗಳ ಮೂಲಕ ಸಾಹಿತಿಗಳು, ಚಿಂತಕರು, ವಿದ್ವಾಂಸರು, ಕಲಾವಿದರು ಮತ್ತು ಓದುಗರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಜೈಪುರ ಸಾಹಿತ್ಯೋತ್ಸವವು ಎರಡು ದಶಕಗಳ ತನ್ನ ಸಾರ್ಥಕ ಪಯಣವನ್ನು 20ನೇ ಆವೃತ್ತಿಯೊಂದಿಗೆ ಸಂಭ್ರಮಿಸಲಿದೆ.
20ನೇ ವಾರ್ಷಿಕೋತ್ಸವದ ವಿಶೇಷವಾಗಿ ಈ ಬಾರಿಯ ಅಧಿಕೃತ ಪ್ರಕಟಣೆಯನ್ನು ಭಾರತದ ಸಂವಿಧಾನ ಮಾನ್ಯತೆ ನೀಡಿರುವ ಎಲ್ಲ 22 ಅಧಿಕೃತ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಗಿದೆ.
2008ರಲ್ಲಿ ಸ್ಥಳೀಯ ಓದುಗರು ಮತ್ತು ಬರಹಗಾರರ ಸಣ್ಣ ಕೂಟವಾಗಿ ಆರಂಭಗೊಂಡ ಜೈಪುರ ಸಾಹಿತ್ಯೋತ್ಸವ ಇಂದು ಜಾಗತಿಕ ಮಟ್ಟದಲ್ಲಿ ಅತ್ಯಂತ ಮಾನ್ಯತೆ ಪಡೆದ ಸಾಹಿತ್ಯಿಕ ವೇದಿಕೆಯಾಗಿ ಬೆಳೆದಿದೆ. ಕಳೆದ ಎರಡು ದಶಕಗಳಲ್ಲಿ 8,000ಕ್ಕೂ ಹೆಚ್ಚು ಪ್ರಮುಖ ಲೇಖಕರು, ಜಾಗತಿಕ ಭಾಷಣಕಾರರು ಮತ್ತು ಕಲಾವಿದರು ಉತ್ಸವದಲ್ಲಿ ಭಾಗವಹಿಸಿದ್ದಾರೆ. ಉತ್ಸವದ ಆವರಣಕ್ಕೆ 50 ಲಕ್ಷಕ್ಕೂ ಅಧಿಕ ಮಂದಿ ನೇರವಾಗಿ ಭೇಟಿ ನೀಡಿದ್ದು, ಡಿಜಿಟಲ್ ವೇದಿಕೆಗಳು, ಪ್ರಸಾರ ಪಾಲುದಾರಿಕೆಗಳು ಹಾಗೂ ಮಾಧ್ಯಮ ಜಾಲಗಳ ಮೂಲಕ ವಿಶ್ವದಾದ್ಯಂತ 100 ಕೋಟಿಗೂ ಅಧಿಕ ಜನರನ್ನು ತಲುಪಿದೆ.
ಸಾಹಿತ್ಯಿಕ ಒಡನಾಟವನ್ನು ಸಾಂಪ್ರದಾಯಿಕ ಪ್ರಕಾಶನ ಸಂಸ್ಥೆಗಳು ಹಾಗೂ ಸೀಮಿತ ಶೈಕ್ಷಣಿಕ ವಲಯಗಳ ಗಡಿಯನ್ನು ಮೀರಿ ಜನಸಾಮಾನ್ಯರಿಗೂ ತಲುಪಿಸುವಲ್ಲಿ ಜೈಪುರ ಸಾಹಿತ್ಯೋತ್ಸವ ಮಹತ್ವದ ಪಾತ್ರ ವಹಿಸಿದೆ. ಶ್ರೇಷ್ಠ ಪುಸ್ತಕಗಳು, ವೈಚಾರಿಕ ಚಿಂತನೆಗಳು ಮತ್ತು ಬೌದ್ಧಿಕ ಸಂವಾದಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಪರಿಚಯಿಸುವ ವೇದಿಕೆಯಾಗಿ ಇದು ಗುರುತಿಸಿಕೊಂಡಿದೆ.
ಜೈಪುರದಿಂದ ಆರಂಭಗೊಂಡು ಜಾಗತಿಕ ಮಟ್ಟಕ್ಕೆ ವಿಸ್ತರಿಸಿರುವ ಈ ಉತ್ಸವವು ಅಮೆರಿಕ, ಬ್ರಿಟನ್, ಕೆನಡಾ, ಸ್ಪೇನ್, ಆಸ್ಟ್ರೇಲಿಯಾ, ಮಧ್ಯಪ್ರಾಚ್ಯದ ರಾಷ್ಟ್ರಗಳು, ಮಾಲ್ಡೀವ್ಸ್ ಮತ್ತು ಐರ್ಲೆಂಡ್ ಸೇರಿದಂತೆ ವಿವಿಧ ದೇಶಗಳಲ್ಲಿ 15ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಆವೃತ್ತಿಗಳನ್ನು ಹೊಂದಿರುವ ಜಾಗತಿಕ ಜಾಲವಾಗಿ ಬೆಳೆದಿದೆ.
ನೊಬೆಲ್ ಮತ್ತು ಬೂಕರ್ ಪ್ರಶಸ್ತಿ ಪುರಸ್ಕೃತರು, ವಿವಿಧ ದೇಶಗಳ ಸಾಂವಿಧಾನಿಕ ಮುಖ್ಯಸ್ಥರು, ಖ್ಯಾತ ಅರ್ಥಶಾಸ್ತ್ರಜ್ಞರು, ತತ್ವಜ್ಞಾನಿಗಳು ಹಾಗೂ ಜಾಗತಿಕ ಮಟ್ಟದ ಸಮಾಜ ಚಿಂತಕರು ಈ ಸಾಹಿತ್ಯಿಕ ಮಹಾಸಂಗಮದಲ್ಲಿ ಭಾಗವಹಿಸಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ರಾಜಸ್ಥಾನ ಸರ್ಕಾರದ ನಿರಂತರ ಹಾಗೂ ದೃಢವಾದ ಬೆಂಬಲವೂ ಈ ಉತ್ಸವದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
‘20 ಇಯರ್ಸ್ ಆಫ್ ಐಡಿಯಾಸ್, ಸ್ಟೋರೀಸ್, ಕಾನ್ವರ್ಸೇಷನ್ಸ್’ (20 ವರ್ಷಗಳ ವಿಚಾರಗಳು, ಕಥೆಗಳು ಮತ್ತು ಸಂವಾದಗಳು) ಎಂಬ ಪ್ರಧಾನ ಧ್ಯೇಯವಾಕ್ಯದೊಂದಿಗೆ 20ನೇ ಆವೃತ್ತಿ ನಡೆಯಲಿದೆ.
ಟೀಮ್ವರ್ಕ್ ಆರ್ಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜೈಪುರ ಸಾಹಿತ್ಯೋತ್ಸವದ ನಿರ್ಮಾಪಕ ಸಂಜೋಯ್ ಕೆ. ರಾಯ್ ಮಾತನಾಡಿ, “ಪುಸ್ತಕಗಳು ಮತ್ತು ಉದಾತ್ತ ವಿಚಾರಗಳು ಸಮಸ್ತ ಮಾನವಕುಲವನ್ನು ಒಂದೆಡೆ ಬೆಸೆಯುವ ಅಪಾರ ಶಕ್ತಿಯನ್ನು ಹೊಂದಿವೆ ಎಂಬ ನಂಬಿಕೆಯೇ ಈ ಉತ್ಸವದ ಬುನಾದಿ. ಲೇಖಕರ ಔದಾರ್ಯ, ಓದುಗರ ಕುತೂಹಲ ಮತ್ತು ಸಂವಾದದ ಮೇಲಿನ ಸಾಂಘಿಕ ಬದ್ಧತೆಯೇ ಎರಡು ದಶಕಗಳ ಕಾಲ ಉತ್ಸವವನ್ನು ಯಶಸ್ವಿಯಾಗಿ ಮುನ್ನಡೆಸಿದೆ” ಎಂದರು.
ಜೈಪುರ ಸಾಹಿತ್ಯೋತ್ಸವದ ಸಹ-ನಿರ್ದೇಶಕಿ ನಮಿತಾ ಗೋಖಲೆ ಮಾತನಾಡಿ, “ಭಾರತದ ಆತ್ಮವು ಅದರ ಶ್ರೀಮಂತ ಸಾಹಿತ್ಯ ಪರಂಪರೆ ಮತ್ತು ಅದ್ಭುತ ಭಾಷಾ ವೈವಿಧ್ಯತೆಯಲ್ಲಿ ಅಡಗಿದೆ. 20ನೇ ವರ್ಷದ ಮೈಲಿಗಲ್ಲನ್ನು ‘ಭಾಷಾ ಸ್ವರಮಾಲಾ’ ಸರಣಿಯ ಮೂಲಕ ಭಾರತದ ವಿವಿಧ ಪ್ರಾದೇಶಿಕ ಭಾಷೆಗಳಿಗೆ ಗೌರವ ಸಲ್ಲಿಸುವುದರೊಂದಿಗೆ ಆಚರಿಸುತ್ತಿದ್ದೇವೆ” ಎಂದು ತಿಳಿಸಿದರು.
ಟೀಮ್ವರ್ಕ್ ಆರ್ಟ್ಸ್ನ ಅಧ್ಯಕ್ಷೆ ಪ್ರೀತಾ ಸಿಂಗ್ ಮಾತನಾಡಿ, “ಪುಸ್ತಕಗಳು, ವಿಚಾರಗಳು ಮತ್ತು ಅರ್ಥಪೂರ್ಣ ಸಾರ್ವಜನಿಕ ಸಂವಾದಗಳ ಅಪಾರ ಶಕ್ತಿಯಿಂದಲೇ ಈ ಉತ್ಸವ ಜಾಗತಿಕ ಮನ್ನಣೆ ಗಳಿಸಿದೆ. ಪಾಲುದಾರರು ಹಾಗೂ ಸಾರ್ವಜನಿಕ ಸಂಸ್ಥೆಗಳ ದೀರ್ಘಕಾಲೀನ ಬೆಂಬಲದಿಂದ ಈ ಸಾಧನೆ ಸಾಧ್ಯವಾಗಿದೆ” ಎಂದರು.
