ಬೆಂಗಳೂರು: ಭಾರತದ ಪ್ರಮುಖ ಕ್ರೀಡಾ ಸಂಸ್ಥೆಗಳಲ್ಲಿ ಒಂದಾದ JSW ಸ್ಪೋರ್ಟ್ಸ್, ಕ್ರಿಕೆಟ್ ಹಾಂಗ್ ಕಾಂಗ್ನೊಂದಿಗೆ ಮಹತ್ವದ ಜಾಗತಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರತಿಷ್ಠಿತ ‘ಹಾಂಗ್ ಕಾಂಗ್ ಸಿಕ್ಸ್’ ಕ್ರಿಕೆಟ್ ಟೂರ್ನಿಯ ವಿಶೇಷ ವಾಣಿಜ್ಯ ಮತ್ತು ಮಾರ್ಕೆಟಿಂಗ್ ಪಾಲುದಾರರಾಗಿ JSW ಸ್ಪೋರ್ಟ್ಸ್ ಕಾರ್ಯನಿರ್ವಹಿಸಲಿದೆ. ಈ ಮೂಲಕ ಸಂಸ್ಥೆಯು ಅಂತರರಾಷ್ಟ್ರೀಯ ಕ್ರೀಡಾ ಹಕ್ಕುಗಳ ಕ್ಷೇತ್ರಕ್ಕೆ ಪ್ರವೇಶಿಸಿದೆ.
1992ರಲ್ಲಿ ಆರಂಭಗೊಂಡಿರುವ ಹಾಂಗ್ ಕಾಂಗ್ ಸಿಕ್ಸ್ ಟೂರ್ನಿಗೆ 34 ವರ್ಷಗಳ ಇತಿಹಾಸವಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಾನ್ಯತೆ ಪಡೆದಿರುವ ಈ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ, ಶೇನ್ ವಾರ್ನ್, ಸರ್ ವಿವ್ ರಿಚರ್ಡ್ಸ್ ಹಾಗೂ ಡೇವಿಡ್ ವಾರ್ನರ್ ಸೇರಿದಂತೆ ಹಲವು ಕ್ರಿಕೆಟ್ ದಿಗ್ಗಜರು ಭಾಗವಹಿಸಿದ್ದಾರೆ. 2025ರ ಆವೃತ್ತಿಯು ಜಾಗತಿಕವಾಗಿ 40 ಕೋಟಿಗೂ ಅಧಿಕ ವೀಕ್ಷಕರನ್ನು ತಲುಪಿ ಗಮನ ಸೆಳೆದಿತ್ತು.
ಹೊಸ ಒಪ್ಪಂದದಡಿ JSW ಸ್ಪೋರ್ಟ್ಸ್ ಹಾಗೂ ಕ್ರಿಕೆಟ್ ಹಾಂಗ್ ಕಾಂಗ್ ಸಂಸ್ಥೆಗಳು ಟೂರ್ನಿಯ ಜಾಗತಿಕ ಪ್ರಸಾರ, ಪ್ರಾಯೋಜಕತ್ವ ಮತ್ತು ಬ್ರಾಂಡ್ ಮೌಲ್ಯವನ್ನು ಮತ್ತಷ್ಟು ವಿಸ್ತರಿಸಲು ಜಂಟಿಯಾಗಿ ಕಾರ್ಯನಿರ್ವಹಿಸಲಿವೆ.
ಹಾಂಗ್ ಕಾಂಗ್ ಸಿಕ್ಸ್ನ 22ನೇ ಆವೃತ್ತಿಯ ಪಂದ್ಯಾವಳಿ 2026ರ ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ಹಾಂಗ್ ಕಾಂಗ್ನ ಟಿನ್ ಕ್ವಾಂಗ್ ರೋಡ್ ರಿಕ್ರಿಯೇಷನ್ ಗ್ರೌಂಡ್ನಲ್ಲಿ ನಡೆಯಲಿದೆ.
ಈ ಸಹಭಾಗಿತ್ವದ ಕುರಿತು ಮಾತನಾಡಿದ JSW ಸ್ಪೋರ್ಟ್ಸ್ ಸಿಇಒ ದಿವ್ಯಾಂಶು ಸಿಂಗ್, “ಇದು JSW ಸ್ಪೋರ್ಟ್ಸ್ನ ಪಯಣದಲ್ಲಿ ಅತ್ಯಂತ ಮಹತ್ವದ ಕ್ಷಣ. ಭಾರತೀಯ ಕ್ರೀಡಾರಂಗದಲ್ಲಿ ನಾವು ಗಳಿಸಿರುವ ಅನುಭವವನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಲು ಹಾಗೂ ಹಾಂಗ್ ಕಾಂಗ್ ಸಿಕ್ಸ್ ಟೂರ್ನಿಯನ್ನು ಪ್ರಮುಖ ಜಾಗತಿಕ ಕ್ರೀಡಾ ಸರಣಿಯಾಗಿ ಬೆಳೆಸಲು ನಾವು ಉತ್ಸುಕರಾಗಿದ್ದೇವೆ” ಎಂದರು.
ಕ್ರಿಕೆಟ್ ಹಾಂಗ್ ಕಾಂಗ್, ಚೀನಾದ ಅಧ್ಯಕ್ಷ ಬುರ್ಜಿ ಶ್ರಾಫ್ ಮಾತನಾಡಿ, “JSW ಸ್ಪೋರ್ಟ್ಸ್ನಂತಹ ಅನುಭವಿ ಸಂಸ್ಥೆಯೊಂದಿಗೆ ಕೈಜೋಡಿಸಿರುವುದು ಹೆಮ್ಮೆಯ ಸಂಗತಿ. ಫ್ರಾಂಚೈಸಿ ಲೀಗ್ಗಳು ಹಾಗೂ ಕ್ರೀಡಾ ನಿರ್ವಹಣೆಯಲ್ಲಿ ಸಂಸ್ಥೆ ಹೊಂದಿರುವ ಅನುಭವವು ಹಾಂಗ್ ಕಾಂಗ್ ಸಿಕ್ಸ್ ಟೂರ್ನಿಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ವಿಸ್ತರಿಸಲು ನೆರವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
