ಕೊರಟಗೆರೆ:- ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪ್ರಬಲ ಆಕಾಂಕ್ಷಿ ಪಿ.ಎನ್. ಕೃಷ್ಣಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿರುವುದು ತಾಲ್ಲೂಕಿನ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಕುಮಾರಸ್ವಾಮಿ ಅವರ ಆಗಮನದ ಹಿನ್ನೆಲೆಯಲ್ಲಿ ಕೊರಟಗೆರೆ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಂದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ವೇಳೆ ಪಕ್ಷದ ಸಂಘಟನೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಕ್ಷೇತ್ರದಲ್ಲಿ ಜೆಡಿಎಸ್ ಬಲವರ್ಧನೆ ಕುರಿತು ಮುಖಂಡರೊಂದಿಗೆ ಚರ್ಚೆ ನಡೆಸಲಾಯಿತು.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ ತುಂಬಬೇಕು. ಗ್ರಾಮ ಪಂಚಾಯಿತಿ ಹಾಗೂ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕುಮಾರಸ್ವಾಮಿ ಅವರು ಪಿ.ಎನ್. ಕೃಷ್ಣಮೂರ್ತಿ ಅವರಿಗೆ ಕಿವಿಮಾತು ಹೇಳಿದರು ಎನ್ನಲಾಗಿದೆ.
*ರಾಜಕೀಯ ಲೆಕ್ಕಾಚಾರಕ್ಕೆ ಪುಷ್ಟಿ:
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಪ್ರಬಲ ಆಕಾಂಕ್ಷಿಯಾಗಿ ಗುರುತಿಸಿಕೊಂಡಿರುವ ಪಿ.ಎನ್. ಕೃಷ್ಣಮೂರ್ತಿ ಅವರ ನಿವಾಸಕ್ಕೆ ಕುಮಾರಸ್ವಾಮಿ ಭೇಟಿ ನೀಡಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ. ಈ ಭೇಟಿಯು ಮುಂಬರುವ ವಿಧಾನಸಭಾ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.
ವಿಶೇಷವಾಗಿ ಕೃಷ್ಣಮೂರ್ತಿ ಅವರಿಗೆ ಕ್ಷೇತ್ರದಲ್ಲಿ ಪಕ್ಷವನ್ನು ಬೇರಿನಿಂದ ಸಂಘಟಿಸುವಂತೆ ಸೂಚಿಸಿರುವುದು ಜೆಡಿಎಸ್ನ ಮುಂದಿನ ರಾಜಕೀಯ ಕಾರ್ಯತಂತ್ರದ ಕುರಿತು ಕುತೂಹಲ ಮೂಡಿಸಿದೆ.
ಒಟ್ಟಾರೆ, ಕುಮಾರಸ್ವಾಮಿ ಅವರ ಕೊರಟಗೆರೆ ಭೇಟಿಯು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಮುಂಬರುವ ದಿನಗಳಲ್ಲಿ ಕ್ಷೇತ್ರದ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.
*ಕ್ಷೇತ್ರದ ರಾಜಕೀಯದಲ್ಲಿ ಕುತೂಹಲ:*
ಪಿ.ಎನ್. ಕೃಷ್ಣಮೂರ್ತಿ ಅವರ ನಿವಾಸದಲ್ಲಿ ಜೆಡಿಎಸ್ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ಮಹತ್ವ ನೀಡಲಾಗುತ್ತಿದೆ ಎಂಬ ಸಂದೇಶ ರವಾನಿಸಿದೆ. ಕುಮಾರಸ್ವಾಮಿ ಅವರ ಈ ಭೇಟಿ ಕೇವಲ ಸೌಜನ್ಯದ ಭೇಟಿಯೇ ಅಥವಾ ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್ನ ಮುಂದಿನ ರಾಜಕೀಯ ನಡೆಗೆ ಮುನ್ನುಡಿಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಆರಂಭವಾಗಿದೆ.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷರ ಕಾಮರಾಜು, ಕಾರ್ಯಾಧ್ಯಕ್ಷ ಲಕ್ಷ್ಮೇಶ್, ಮಾಜಿ ಕಾರ್ಯಾಧ್ಯಕ್ಷ ನರಸಿಂಹರಾಜು , ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಕೊರಟಗೆರೆ ಟೌನ್ ಎಸ್ಟಿ ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ್ , ನಗರಾಧ್ಯಕ್ಷ ರಮೇಶ್ ಯುವ ಕ್ಷೇತ್ರ ಅಧ್ಯಕ್ಷ ವೆಂಕಟೇಶ್ ಮುಖಂಡರುಗಳಾದ ವಗ್ತಾರ ಮಾವತ್ತೂರ ಮಂಜುನಾಥ್ , ನಾಗೇಂದ್ರ , ಪುರವರ ಸತೀಶ್, ಕಾಂತರಾಜು , ನಂದಾರೆಡ್ಡಿ, ನವೀನ್, ಕೋಳಾಲ ಶ್ರೀನಿವಾಸ್, ದೇವರಾಜು, ಸೀಗೆಪಾಳ್ಯ ನಾಗರಾಜು, ತೋವಿನಕೆರೆ ನಾಗರಾಜು ದೂಡ್ಡನಹಳ್ಳಿ ಶಿವಣ್ಣ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ್, ಕೊರಟಗೆರೆ
