ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಅಸಂಬದ್ಧ ಕಲ್ಪನೆಯೇ ಅಸಹನೀಯ
ನಮಗೆ ರುದ್ರಪ್ಪ ಎಂದೊಬ್ಬರು ಮೇಷ್ಟ್ರಿದ್ದರು. ಹೆಸರಿಗೆ ತಕ್ಕಂತಾ ಆಕೃತಿ. ಕ್ಲಾಸ್ರೂಮಿನಲ್ಲಿರಲಿ, ಸಂಜೆ ಪೇಟೆ ಬೀದಿಯಲ್ಲಿ ಕಂಡರೂ ಅವರ ಕಣ್ಣು ತಪ್ಪಿಸಿ ತಿರುಗುತಿದ್ದೆವು. ಖಡಕ್ ಸ್ವಭಾವದವರಾದ ರುದ್ರಪ್ಪನವರು ಗಂಭೀರ ವ್ಯಕ್ತಿತ್ವದವರಾಗಿದ್ದರು. ಅವರಿದ್ದಾಗ ಸ್ಟಾಫ್ ರೂಮಿಗೆ ಸಹಾ ಹೋಗಲೂ ಹಿಂಜರಿಯುತಿದ್ದೆವು.
ಒಂದು ದಿನ ಯಾವುದೋ ಕಾರ್ಯ ನಿಮಿತ್ತ ಸ್ಟಾಫ್ ರೂಮಿಗೆ ಹೋಗಲೇಬೇಕಾಯ್ತು. ರುದ್ರಪ್ಪನವರನ್ನು ಬಿಟ್ಟರೆ ಬೇರಾರೂ ಇರಲಿಲ್ಲ. ಓರೆಯಾಗಿದ್ದ ಬಾಗಿಲ ಮರೆಯಿಂದಲೇ ನೋಡಿದೆವು. ಇದ್ದಕ್ಕಿದ್ದಂತೆ ಅವರು “ಖ್ಖಿ ಖ್ಖಿ ಖ್ಖಿ ಖ್ಖಿ’’ ಎಂದರು. ನಮಗೆ ಗಾಬರಿಯಾಯ್ತು. ಏನನ್ನೋ ಓದುತ್ತಿದ್ದವರು ತಲೆಯನ್ನು ಎತ್ತದೇ ಪುಸ್ತಕದೊಳಗೆ ಮುಳುಗಿಹೋಗಿದ್ದರು. ಇಡೀ ದೇಹವನ್ನೇ ಯಾರೋ ಹಿಡಿದು ಅಲುಗಾಡಿಸುವಂತೆ ಸೊಂಟದ ಮೇಲಿನ ಭಾಗವನ್ನು ಕುಲುಕಿಸಿ ಕುಲುಕಿಸಿ ಮತ್ತೆ “ಖ್ಖಿ ಖ್ಖಿ ಖ್ಖಿ ಖ್ಖಿ’’ ಎಂದರು ಪುಸ್ತಕದಿಂದ ತಲೆ ಎತ್ತದೇ. ಕೆಲವೇ ದಿನಗಳ ಹಿಂದಷ್ಟೇ ಮಾಟಮಂತ್ರ ಹಿನ್ನೆಲೆಯ `ತುಳಸೀದಳ’ ಸಿನೆಮಾ ನೋಡಿದ್ದೆವು. ನಮ್ಮ ಗಾಬರಿ ಇಮ್ಮಡಿಯಾಯ್ತು. ಸೀದಾ ಪ್ರಿನ್ಸಿಪಾಲರ ಕೊಠಡಿಗೆ ಹೋಗಿ ಏದುಸಿರು ಬಿಡುತ್ತಾ ವಿಷಯ ತಿಳಿಸಿದೆವು.
ಪ್ರಾಂಶುಪಾಲರು ಇತರೇ ಕಛೇರಿ ಸಿಬ್ಬಂದಿಯೊಂದಿಗೆ ಓಡಿ ಬಂದರು. ಆಗಲೂ ರುದ್ರಪ್ಪನವರು ತಮ್ಮೆರಡೂ ಕಣ್ಣುಗಳನ್ನು ಎರಡೂ ತರ್ಬೆರಳುಗಳಿಂದ ಒತ್ತಿಕೊಂಡು ವಿಲಕ್ಷಣವಾಗಿ “ಖ್ಖಿ ಖ್ಖಿ ಖ್ಖಿ ಖ್ಖಿ’’ ಎಂದು ತಲೆಯೆತ್ತದೇ ಕುಳಿತಲ್ಲೆ ಮೈಯ್ಯನ್ನೆಲ್ಲಾ ಕುಲುಕಿಸುತಿದ್ದರು. ಮರ್ನಾಲ್ಕು ಜನ ಒಮ್ಮೆಲೇ ಸ್ಟಾಫ್ ರೂಮಿಗೆ ನುಗ್ಗಿದ್ದರಿಂದ ವಿಚಲಿತರಾದ ರುದ್ರಪ್ಪನವರು ಪುಸ್ತಕವನ್ನು ಕೈಯ್ಯಲ್ಲೇ ಹಿಡಿದು ಎದ್ದು ನಿಂತರು. ಅವರ ಕಣ್ಣಿನಲ್ಲಿ ನೀರು ಜಿನುಗುತಿತ್ತು. ಪ್ರಾಂಶುಪಾಲರನ್ನು ಕಂಡು ಮಾತನಾಡಲೂ ಆಗದೇ ಮೈ ಕುಲುಕಾಟವನ್ನು ಮತ್ತು ತಮ್ಮ “ಖ್ಖಿ ಖ್ಖಿ ಖ್ಖಿ ಖ್ಖಿ’’ ಯನ್ನು ನಿಯಂತ್ರಿಸಲು ಪ್ರಯತ್ನಿಸುತಿದ್ದರು. ಸಾರ್ ಸಾರ್ ಎನ್ನುತ್ತಾ ತಮ್ಮ ಕೈಯ್ಯಲ್ಲಿದ್ದ ಪುಸ್ತಕದ ತೆರೆದ ಹಾಳೆಯ ಒಂದು ಪ್ಯಾರಾಗ್ರಾಫನ್ನು ತಮ್ಮ ಗೆಳೆಯರೂ ಆಗಿದ್ದ ಪ್ರಾಂಶುಪಾಲರಿಗೆ ತೋರಿಸಿದರು. ಸ್ವಲ್ಪ ಹೊತ್ತು ಪುಸ್ತಕದಲ್ಲಿ ಕಣ್ಣಾಡಿಸಿದ ಪ್ರಾಂಶುಪಾಲರು ತಾವೂ ತಮ್ಮ ಬೃಹದಾಕಾರವಾಗಿದ್ದ ಪೃಷ್ಠವೆಲ್ಲಾ ಉರುಳಾಡಿಹೋಗುವಂತೆ ನಗಲಾರಂಭಿಸಿದರು.
ರುದ್ರಪ್ಪನವರು ಓದುತಿದ್ದುದು ಚದುರಂಗರ ವೈಶಾಖ ಎಂಬ ಕಾದಂಬರಿಯ ಮಠದ ಅಯ್ನೋರ ಎರಡೆರಡು ಸ್ನಾನದ ವೃತ್ತಾಂತ ಎಂದು ಆನಂತರ ತಿಳಿಯಿತು. ಸಾಹಿತ್ಯದ ಶಕ್ತಿಯೇ ಅಂಥಾದ್ದು.
ಪ್ರತೀ ತಾಲ್ಲೂಕು ಕೇಂದ್ರಗಳಲ್ಲಿ ಅಲ್ಲಿನ ಬಸ್ ನಿಲ್ದಾಣಗಳಲ್ಲಿ ಪುಸ್ತಕಗಳ ಅಂಗಡಿ ಪ್ರಾರಂಭಿಸುವುದರ ಮೂಲಕ ಪ್ರತಿಭಾವಂತ ಬರಹಗಾರ, ಪ್ರಾಮಾಣಿಕ ಪ್ರಕಾಶಕ, ಶ್ರಮಜೀವಿ ವಿತರಕ, ಮಾರಾಟಗಾರನಿಗೆ ಬದುಕು ಕೊಡುವ ಜೊತೆಗೆ ಪ್ರಬುದ್ಧ ಓದುಗನಿಗೆ ಪುಸ್ತಕಗಳನ್ನು ತಲುಪಿಸಬಹುದೆಂದು ತೇಜಸ್ವಿ ಅಭಿಪ್ರಾಯಪಡುತ್ತಾರೆ.
ಕರ್ವಾಲೋವನ್ನು ಪಠ್ಯಪುಸ್ತಕವಾಗಿ ಓದಿದ ವಿಧ್ಯಾರ್ಥಿಗಳು ನಿಮ್ಮ ಇತರ ಕೃತಿಗಳನ್ನು ಓದಿರಬಹುದಾ ಎಂದಾಗ `ಓದುವ ಹವ್ಯಾಸವಿರುವ ಕೆಲವರಾದರೂ ನನ್ನ ಇತರ ಕೃತಿಗಳನ್ನು ಓದಿರಬಹುದೇನೋ’ ಎಂದು ಸಹಜ ವಿನಯದಿಂದಲೇ ತಮ್ಮ ಮಿತಿಯ ವಾಸ್ತವವನ್ನು ಒಪ್ಪಿಕೊಳ್ಳುತ್ತಾರೆ ತೇಜಸ್ವಿ. ಕರ್ವಾಲೋ ಪಠ್ಯವಾಗಿದ್ದಾಗ ಹಲವು ಅಧ್ಯಾಪಕರುಗಳು ಅದೊಂದು ಕ್ಲಿಷ್ಠವಾದ ಕೃತಿ, ಪಾಠ ಹೇಳಲು ತುಂಬಾ ಕಷ್ಟ ಎಂದರಂತೆ.

“ಆ ಕೃತಿಯಲ್ಲಿ ಬರುವ ಜೀವಶಾಸ್ತ್ರ , ವಿಕಾಸವಾದದ ಬಗೆಗಿನ ಪ್ರಸ್ತಾಪಗಳ ತಲೆಬುಡಗಳೂ ಅರ್ಥವಾಗಿರುವುದಿಲ್ಲ ಯಾಕೆಂದರೆ ಆ ಅಧ್ಯಾಪಕರಲ್ಲನೇಕರು ಕನ್ನಡದ- ಹಳೆಗನ್ನಡದ ಕಗ್ಗಗಳನ್ನು ಉರುಹೊಡೆದು ಬರುವ ಕೂಪಮಂಡೂಕಗಳಾಗಿದ್ದರೆಂದು ಕಾಣುತ್ತೆ. ಅವರಿಗೆ ತಮಗೆ ಅಗತ್ಯವಾಗಿ ಬೇಕಾಗಿರುವ ಜ್ಞಾನದ ಇತರೆ ಶಾಖೆಗಳ ಕಿಂಚಿತ್ತೂ ಪರಿಚಯವಿಲ್ಲದ್ದೇ ಇದಕ್ಕೆ ಕಾರಣವಾಗಿತ್ತು. ಜಟಕಾ ಕುದುರೆಯಂತೆ ಅತ್ತಿತ್ತ ನೋಡದೇ ನೇರವಾಗಿ ಪದವಿ ಪತ್ರ ಹಾಗೂ ಸರ್ಕಾರೀ ನೌಕರಿಯನ್ನೇ ಗುರಿಯಾಗಿಟ್ಟುಕೊಂಡು ಅಸಹಾಯ ಮೇಷ್ಟ್ರಾಗಿದ್ದರೇನೋ’’ ಎಂದು ತೇಜಸ್ವಿ ವಿಷಾಧಿಸಿದ್ದರು.
ಹಾಗೆಯೇ ಇತರೆ ವಿಷಯಗಳ ಪದವೀಧರರೂ ಸಹಾ ಮನುಷ್ಯ ಸಹಜ ಕುತೂಹಲದಿಂದಲಾದರೂ ಜ್ಞಾನದ ಇತರೆ ಶಾಖೆಗಳತ್ತ ಕಣ್ಣೆತ್ತಿ ನೋಡುವುದೂ ವಿರಳವಾಗುತ್ತಿರುವುದು ಶಿಕ್ಷಣ ವ್ಯವಸ್ಥೆಯ ದುರವಸ್ಥೆ ಹಾಗೂ ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಸ್ವಾಭಾವಿಕ ಸಂಬಂಧವಾಗಿ ಕಣ್ಣಿಗೆ ರಾಚುತ್ತದೆ. ಯಾವುದೋ ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ.
ಸಹಜವಾಗಿಯೇ ಪುಸ್ತಕ ಮಾರಾಟವೂ ಇತ್ತು. ಹಲವಾರು ಸಾಹಿತ್ಯಾಸಕ್ತರು ತಮ್ಮ ಮಕ್ಕಳೊಂದಿಗೆ ಬಂದಿದ್ದರು. ಹಿರಿಯರಿಗೆ ಸಾಹಿತ್ಯಕ್ಕೆ ಸಂಬಂಧಿಸಿದ ಮಾತು ಕೇಳುವ ಕಾತರ. ಜೊತೆಯಲ್ಲಿದ್ದ ಮಕ್ಕಳಿಗೆ ಪ್ರದರ್ಶನಕ್ಕಿಟ್ಟಿದ್ದ ಪುಸ್ತಕಗಳನ್ನು ನಿರುಕಿಸುವ ಹಾಗೆಯೇ ಆಕರ್ಷಕ ಮುಖಚಿತ್ರಗಳ ಮೇಲೆ ಕಣ್ಣಾಡಿಸುವ ಆಸೆ.
ಕಾರ್ಯಕ್ರಮವಿನ್ನೂ ಪ್ರಾರಂಭವಾಗಿರಲಿಲ್ಲ. ಹಲವರು ಪುಸ್ತಕಗಳನ್ನು ಎತ್ತ್ತಿಕೊಂಡು ಪುಟ ತಿರುವಿಹಾಕುತ್ತಾ, ಬೆಲೆ ಕುರಿತು ವಿಚಾರಿಸುತ್ತಾ ಕೊಂಡುಕೊಳ್ಳುತ್ತಿದ್ದರು. ದಂಪತಿಗಳ ಜೊತೆ ಬಂದಿದ್ದ ಅವರ ಮಗನೊಬ್ಬನನ್ನು ಒಂದು ಪುಸ್ತಕದ ಮುಖಪುಟ ಮತ್ತು ಟೈಟಲ್ ತೀವ್ರವಾಗಿ ಸೆಳೆಯಿತು. ತಾಯಿಗೆ ಕೊಂಡುಕೊಳ್ಳಲು ಕೇಳಿದ. ತಾಯಿ `ನಿನ್ನ ಪಠ್ಯ ಪುಸ್ತಕವನ್ನು ಮೊದಲು ಓದಿ ಮುಗಿಸು, ಆಮೇಲೆ ಇವನ್ನೆಲ್ಲಾ ನೋಡುವೆಯಂತೆ’ ಎಂದರು. ಹುಡುಗ ತಂದೆಯೆಡೆಗೆ ತಿರುಗಿ `ಈ ಪುಸ್ತಕ ತೆಗೆದುಕೊಡಿ’ ಎಂದು ದುಂಬಾಲು ಬಿದ್ದ. ತಂದೆ `ನೀನು ಸ್ವಲ್ಪ ದೊಡ್ಡವನಾಗು. ಓದುವೆಯಂತೆ. ಈಗ ಶಾಲಾ ಪುಸ್ತಕಗಳನ್ನು ಓದಿ ಪಾಸ್ ಮಾಡು’ ಎಂದರು.
ಪೆಚ್ಚು ಮುಖ ಮಾಡಿಕೊಂಡ ಹುಡುಗ ಮಂಕಾಗಿ ಕುಳಿತ. ಚಿಕ್ಕ ವಯಸ್ಸಿನ ಮಕ್ಕಳು ಪಠ್ಯಪುಸ್ತಕವನ್ನಲ್ಲದೇ ಬೇರೇನನ್ನೂ ಓದಬಾರದು, ಅದು ಅನಗತ್ಯ. ಮುಖ್ಯವಾದ ಅಕ್ಯಾಡೆಮಿಕ್ ವಿಚಾರಗಳಿಂದ ವಿಮುಖರನ್ನಾಗಿಸುವ ಡಿಸ್ಟ್ರಾಕ್ಷನ್ ಎಂದು ಪಾಲಕರು ಪರಿಗಣಿಸಿದಂತಿದೆ ನಮ್ಮ ಸ್ಥಿತಿ.
ನಾಲ್ಕು ನಾಲ್ಕು ಪಾಠಗಳನ್ನು ಓದಿ ಪ್ರತೀ ಮೂರು ತಿಂಗಳ ಪರೀಕ್ಷೆಗಳಿಗಾಗಿ ಉರುಹೊಡೆದು, ಗೊತ್ತಿರುವ ಉತ್ತರಕ್ಕಾಗಿಯೇ ಸಿದ್ಧಪಡಿಸುವ ಪ್ರಶ್ನೆ ಪತ್ರಿಕೆಗಾಗಿ ಅಸಹಜವಾದ ಮಕ್ಕಿಕಾಮಕ್ಕಿ ಟ್ಯೂಷನ್ನಿಂದ ಅವರ ತಲೆಯನ್ನು ಗೊಂದಲದ ಗೂಡನ್ನಾಗಿಸಿದ್ದೇವೆ ನಾವು. ಪರೀಕ್ಷೆಯಲ್ಲಿ ಸಿಗುವ ಮಾರ್ಕ್ಗಳೇ ಅಲ್ಟಿಮೇಟ್ ಆಗಿ ಆ ವಿದ್ಯಾರ್ಥಿಯ ವ್ಯಕ್ತಿತ್ವದ ಚಿತ್ರಣವೆಂದು ನಂಬಿರುವುದು ನಮ್ಮ ತಿಳುವಳಿಕೆಗಿರುವ ಮಿತಿಯಾಗಿದೆ.
ಇನ್ನು ಶಾಲೆಗಳಲ್ಲಿ ಪ್ರ್ರಾಜೆಕ್ಟ್ ವರ್ಕ್ ಎಂದು ಪುಸ್ತಕದಂಗಡಿಗಳಲ್ಲಿ ಸಿಗುವ ಪ್ರಾಣಿ, ಪಕ್ಷಿ, ಸಸ್ಯವರ್ಗಗಳ ಚಿತ್ರಗಳ ಚಾರ್ಟ್ಗಳನ್ನು ಕತ್ತರಿಸಿ, ಅಂಟಿಸಿ ಶಿಕ್ಷಕರಿಗೆ ಸಬ್ಮಿಟ್ ಮಾಡುವುದೂ ಸಹಾ ಮಕ್ಕಳ ಸೃಜನಶೀಲತೆಗೆ ಇರುವ ತಡೆಗೋಡೆ. ನಮ್ಮ ಕಣ್ಣೆದುರೇ ಕಾಣುವ ಹಲವು ವಸ್ತುಗಳ ಚಿತ್ರಗಳನ್ನೇ ಬರೆಯಲಾಗದೇ ಮುದ್ರಿತ ಚಿತ್ರಗಳನ್ನು ಕತ್ತರಿಸಿ ಅಂಟಿಸುವ ನೀರಸ, ಕೆಲಸಕ್ಕೆ ಬಾರದ ಪ್ರಾಜೆಕ್ಟ್ ವರ್ಕ್ ಮಾಡಲು ಮಕ್ಕಳನ್ನು ಶಾಲೆಗೆ ಕಳಿಸಬೇಕೆ? ಶಾಲೆಗಳಲ್ಲಿರುವ ಕಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಚಿತ್ರರಚನೆಯ ಮೂಲ ಪಾಠಗಳನ್ನು ಕಲಿಸಿ ಪ್ರೇರೇಪಿಸಿದರೆ ಪ್ರಾಜೆಕ್ಟ್ ವರ್ಕ್ಗೆ ಒಂದು ಅರ್ಥ ಬಾರದಿರದು. ಇನ್ನು ಕರ್ಸಿವ್ ರೈಟಿಂಗ್ ಎಂಬ ಅಸಂಬದ್ಧ ಬರಹದ ರೀತಿಯೊಂದಿದೆ. ತಾನು ಏನನ್ನು ಬರೆಯುತಿದ್ದೇನೆ? ಅಕ್ಷರಕ್ಕೆ ಆದ್ಯತೆ ನೀಡಬೇಕೆ, ಅಕ್ಷರಗಳನ್ನು ವಿನಾಕಾರಣ ಕೂಡಿಸುವ ಕೊಂಡಿಗಳಿಗೆ ಪ್ರಾಮುಖ್ಯತೆ ನೀಡಬೇಕೇ? ತಿಳಿಯದೇ ವಿರ್ದ್ಯಾರ್ಥಿಗಳು ಪುಟಗಳುದ್ದಕ್ಕೂ ಎರೆಹುಳುಗಳನ್ನು ಸಾಯಿಸಿ ಮಲಗಿಸಿರುತ್ತಾರೆ.
ಮೂಗಿಗಿಂತ ಮೂಗುತಿ ಭಾರವೆಂಬಂತೆ ಅಕ್ಷರಗಳು ಅದೃಷ್ಯವಾಗಿ, ಕೊಂಡಿಗಳು ಚಿತ್ರವಿಚಿತ್ರವಾಗಿ ಅವತರಿಸಿ ಯಾರು ಏನನ್ನು ಬರೆದಿರುವುದನ್ನು ಯಾರು ಏನೆಂದು ಓದಬೇಕು ಎಂಬಂತೆ ಆಗಿಹೋಗುತ್ತದೆ. ಇಂಗ್ಲಿಷ್ ಅಕ್ಷರಗಳನ್ನು ಒಂದಕ್ಕೊಂದನ್ನು ಅಂಟಿಸಿಯೇ ಬರೆಯಬೇಕು, ಹಾಗೂ ಅಂಟಿಸಿ ಬರೆದರೆ ಮಾತ್ರ ಇಂಗ್ಲೀಷ್ ಚೆನ್ನಾಗಿ ಕರಗತವಾಗಿದೆ ಎಂಬರ್ಥ ಎಂಬ ಅಸಂಬದ್ಧ ಕಲ್ಪನೆಯೇ ಅಸಹನೀಯ.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

