ಹಾಸನ: ಹಾಡುಹಗಲೇ ವ್ಯಕ್ತಿಯೊಬ್ಬರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನ ನಗರದ ಚನ್ನಪಟ್ಟಣ ಬೈಪಾಸ್ನಲ್ಲಿ ನಡೆದಿದೆ.
ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಯ ಕಲ್ಲಹಳ್ಳಿ ಗ್ರಾಮದ ಮಣಿಕಂಠ ಅಲಿಯಾಸ್ ಕಪ್ಪೆ, ಮಣಿ (34) ಕೊಲೆಯಾದ ವ್ಯಕ್ತಿ. ಅವರು ಹಾಸನ ನಗರದ ಸಿದ್ಧಯ್ಯನಗರದಲ್ಲಿ ಪೋಷಕರೊಂದಿಗೆ ವಾಸವಾಗಿದ್ದರು.
ಮಣಿಕಂಠ ಅವರು ನಗರದ 80 ಅಡಿ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಗೃಹಪ್ರವೇಶ ಕಾರ್ಯಕ್ರಮವೊಂದಕ್ಕೆ ತೆರಳುವುದಾಗಿ ಹೇಳಿ ಪೆಟ್ರೋಲ್ ಬಂಕ್ನಿಂದ ಹೊರಟಿದ್ದರು ಎನ್ನಲಾಗಿದೆ.
ಬಳಿಕ ಚನ್ನಪಟ್ಟಣ ಬೈಪಾಸ್ ಬಳಿ ದುಷ್ಕರ್ಮಿಗಳು ಮಣಿಕಂಠ ಅವರ ಮೇಲೆ ದಾಳಿ ನಡೆಸಿ, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶುಭನ್ವಿತಾ ಹಾಗೂ ಸೋಕೋ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹತ್ಯೆಗೆ ಕಾರಣವೇನು ಹಾಗೂ ಕೃತ್ಯದಲ್ಲಿ ಭಾಗಿಯಾಗಿರುವವರು ಯಾರು ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಘಟನೆ ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
