ಕೆ.ಆರ್.ಪೇಟೆ,ಸೆ.07: ರೈತರು ಆಧುನಿಕ ತಂತ್ರಜ್ಞಾನ, ಕೃಷಿ ವಿಜ್ಞಾನಿಗಳು, ಕೃಷಿ ಅಧಿಕಾರಿಗಳ ಮಾರ್ಗದರ್ಶನ ಪಡೆದು ಕಬ್ಬಿನ ಬೇಸಾಯ ಮಾಡಿದರೆ ಒಂದು ಎಕರೆ ಭೂಮಿಯಲ್ಲಿ 100ಟನ್ ಕಬ್ಬು ಇಳುವರಿ ಪಡೆಯುವ ನಿಖರ ಕೃಷಿ ತಂತ್ರಜ್ಞಾನವನ್ನು ನಮ್ಮ ರಾಜ್ಯದ ಎರಡು ತಾಲ್ಲೂಕುಗಳಲ್ಲಿ ಸರ್ಕಾರದ ವತಿಯಿಂದ ಅವಡಿಸಲಾಗುತ್ತದೆ. ಅದರಲ್ಲಿ ನಮ್ಮ ಕೆ.ಆರ್.ಪೇಟೆ ತಾಲ್ಲೂಕು ಕೂಡ ಒಂದು ಎಂಬುದು ಹೆಮ್ಮೆಯ ವಿಚಾರವಾಗಿದೆ ಎಂದು ಶಾಸಕ ಹೆಚ್.ಟಿ.ಮಂಜು ಹೇಳಿದರು.
ಅವರು ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಕೃಷಿ ಇಲಾಖೆ, ಮಂಡ್ಯ ಕೃಷಿ ವಿಶ್ವವಿದ್ಯಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಕಬ್ಬಿನಲ್ಲಿ ನಿಖರ ಇಳುವರಿ ಗಳಿಸುವ ಬಗ್ಗೆ ತಂತ್ರಜ್ಞಾನ ಕೌಶಲ್ಯ ಅಳವಡಿಸಿಕೊಳ್ಳುವ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ರೈತರನ್ನು ಕುರಿತು ಮಾತನಾಡಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಈಗಾಗಲೇ ರೈತರು 1ಎಕರೆ ಭೂಮಿಯಲ್ಲಿ ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿಕೊಂಡು 100ಟನ್ ಕಬ್ಬು ಬೆಳೆದಿದ್ದಾರೆ. ಅದೇ ಮಾದರಿಯಲ್ಲಿ ನಮ್ಮ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿಯೂ ವೈಜ್ಞಾನಿಕ ತಂತ್ರಜ್ಞಾನದ ಮೂಲಕ 1ಎಕರೆ ಭೂಮಿಯಲ್ಲಿ 100ಟನ್ ಬೆಳೆಯುವ ಎಲ್ಲಾ ಅವಕಾಶಗಳು, ಹವಾಮಾನ, ಭೂಮಿಯ ಸಾಮರ್ಥ್ಯ ಇರುವ ಕಾರಣ ನಮ್ಮ ರೈತರಿಗೆ ತರಬೇತಿ ನೀಡಿ 30ರಿಂದ 40ಟನ್ ಬೆಳೆಯುತ್ತಿರುವ ರೈತರ ಜಮೀನಿನಲ್ಲಿ 100ಟನ್ ಇಳುವರಿ ತಂದು ಕೊಡುವ ಸವಾಲಿನೊಂದಿಗೆ ಕೃಷಿ ಇಲಾಖೆಯ ಅಧಿಕಾರಿಗಳು, ವಿಜ್ಞಾನಿಗಳು ನಮ್ಮ ತಾಲ್ಲೂಕನ್ನು ಆಯ್ಕೆ ಮಾಡಿಕೊಂಡಿದ್ದಾರೆ ರೈತರು ಅಧಿಕಾರಿಗಳೊಂದಿಗೆ ಸಹಕಾರ ನೀಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ರೈತರು ಭೂಮಿಗೆ ಸಾಧ್ಯವಾದಷ್ಟು ರಾಸಾಯನಿಕ ಗೊಬ್ಬರವನ್ನು ಕಡಿಮೆ ಬಳಕೆ ಮಾಡಬೇಕು. ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಜೈವಿಕ ಗೊಬ್ಬರವನ್ನು ಹೆಚ್ಚು ಬಳಕೆ ಮಾಡಬೇಕು.

ಈ ಮೂಲಕ ಮಣ್ಣಿನ ಆರೋಗ್ಯವನ್ನು ಕಾಪಾಡುವ ಮೂಲಕ ಸುಧೀರ್ಘ ಅವಧಿಗೆ ಹೆಚ್ಚು ಇಳುವರಿ ಪಡೆಯುವ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ನಿಜ ಒಂದೇ ಭಾರಿಗೆ ರಸಗೊಬ್ಬರ ನಿಲ್ಲಿಸಲು ಆಗುವುದಿಲ್ಲ. ಹಂತ ಹಂತವಾಗಿ ರಸಗೊಬ್ಬರ ಕಡಿಮೆ ಮಾಡುತ್ತಾ ಸಂಪೂರ್ಣ ಸಾವಯವ ಬೇಸಾಯದತ್ತ ಹೆಜ್ಜೆ ಹಾಕಿದರೆ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಹೆಚ್ಚು ಆರೋಗ್ಯವಂತ ಆಹಾರವನ್ನು ಬೆಳೆಯುವ ಮೂಲಕ ಜನರಿಗೆ ವಿಷಮುಕ್ತ(ವಿಷವಿಲ್ಲದ) ಆಹಾರ ನೀಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ರೈತರು ಮುಂದಾಗಬೇಕು. ರೈತರು ಮನಸ್ಸು ಮಾಡಿದರೆ ಇಡೀ ದೇಶವನ್ನು ಸಾವಯವ ಕೃಷಿ ಪದ್ದತಿ ಅಡಿಯಲ್ಲಿ ಬೇಸಾಯ ಮಾಡಿ, ರಾಸಾಯನಿಕವಲ್ಲದ ಆಹಾರದ ಬೆಳೆದು ದೇಶದ ಜನರ ಆಯಸ್ಸು ಮತ್ತು ಆರೋಗ್ಯವನ್ನು ಹೆಚ್ಚಿಸಬಹುದು. ಹಿಂದೆ ಆಹಾರ ಸಮಸ್ಯೆ ಉಂಟಾದ ಸಮಯದಲ್ಲಿ ಆಹಾರ ಉತ್ಪಾದನೆ ಹೆಚ್ಚಿಸಲು ದೇಶಾಧ್ಯಂತ ರಸಗೊಬ್ಬರ ಪದ್ದತಿಯನ್ನು ಇಡೀ ದೇಶದಲ್ಲಿ ಜಾರಿಗೆ ತರಲಾಯಿತು. ಇದರಿಂದ ಆಹಾರ ಉತ್ಪಾದನೆ ಜಾಸ್ತಿಯಾಯಿತು. ಆದರೆ ವಿಷಪೂರಿತ ರಸಗೊಬ್ಬರದ ಅತಿಯಾದ ಬಳಕೆಯಿಂದ ಭೂಮಿಯ ಮಣ್ಣು ಸತ್ವವನ್ನು ಕಳೆದುಕೊಂಡು ಬಂಜರು ಭೂಮಿಯಾಯಿತು. ಹಿಂದೆ ಎಕರೆಗೆ 70ರಿಂದ 80ಟನ್ ಕಬ್ಬು ಉತ್ಪಾದನೆ ಮಾಡುತ್ತಿದ್ದ ಭೂಮಿಯಲ್ಲಿ ಈಗ ಕೇವಲ 30ರಿಂದ 40ಟನ್ ಮಾತ್ರ ಬೆಳೆಯುತ್ತಿದ್ದೇವೆ. ಇದರಿಂದ ವಿಷಪೂರಿತ ಆಹಾರದ ಜೊತೆಗೆ ಕಡಿಮೆ ಇಳುವರಿ ಪಡೆಯುತ್ತಿದ್ದೇವೆ ಹಾಗಾಗಿ ರೈತರು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡರೆ ಹೆಚ್ಚು ಇಳುವರಿ ಜೊತೆಗೆ ಆರೋಗ್ಯವಂತ ಆಹಾರವನ್ನು ಬೆಳೆಯಲು ಸಾಧ್ಯವಿದೆ ಎಂದು ಶಾಸಕ ಮಂಜು ಅವರು ಹೇಳಿದರು.

ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಿ.ಎಸ್.ಜಯಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎನ್.ಎಸ್.ಗಂಗಾಧರ್, ಪಾಂಡವಪುರ ಉಪ ಕೃಷಿ ನಿರ್ದೇಶಕಿ ಕೆ.ಸಿ.ಸುಷ್ಮಾ, ಕೃಷಿಕ ಸಮಾಜದ ನಿರ್ದೇಶಕ ಎ.ಆರ್.ರಘು, ಜಿ.ಪಂ.ಮಾಜಿ ಸದಸ್ಯ ಶ್ರೀನಿವಾಸನಾಯಕ್, ಇಸ್ರೋ ಸಂಸ್ಥೆಯ ಆರ್.ಆರ್.ಎಸ್.ಸಿ ವಿಭಾಗದ ವಿಜ್ಞಾನಿ ಮಹಮದ್ ಅಹಮದ್, ಕೃಷಿ ವೈಜ್ಞಾನಿಕ ಅಧಿಕಾರಿ ಜಿ.ಎನ್.ನವೀನ್ಕುಮಾರ್, ಬೇಸಾಯ ತಜ್ಞ ವಿಜ್ಞಾನಿ ಡಾ.ಬಸವಲಿಂಗಪ್ಪ, ಕೀಟಶಾಸ್ತç ತಜ್ಞ ವಿಜ್ಞಾನಿ ಡಾ.ದರ್ಶಿನಿ, ಕೃಷಿ ವಿವಿ ಸಹ ಪ್ರಾಧ್ಯಾಪಕ ಡಾ.ಎಂ.ಎ.ಅನಂತಕುಮಾರ್, ಹೇಮಗಿರಿ ಷುಗರ್ಸ್ ಕಬ್ಬು ಅಭಿವೃದ್ದಿ ಅಧಿಕಾರಿ ದತ್ತಾತ್ರೇಯ, ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಬಿ.ಎಸ್.ದೀಪಕ್, ತಾಂತ್ರಿಕ ಕೃಷಿ ಅಧಿಕಾರಿ ಶ್ರೀಧರ್, ಅಕ್ಕಿಹೆಬ್ಬಾಳು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಭಿಷೇಕ್ಗೌಡ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ವಿಸ್ಮಯಾ, ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಾಂಬಳ್ಳಿ ಅಶೋಕ್, ಅಕ್ಕಿಹೆಬ್ಬಾಳು ಸೊಸೈಟಿ ಅಧ್ಯಕ್ಷ ವಾಸು, ಮಾಜಿ ಅಧ್ಯಕ್ಷರಾದ ಎ.ಜೆ.ಕುಮಾರ್, ಎಸ್.ಆರ್.ನವೀನ್ಕುಮಾರ್, ಗ್ರಾ.ಪಂ.ಮಾಜಿ ಸದಸ್ಯ ದಡದಹಳ್ಳಿ ಅತೀಕ್ ಅಹಮದ್, ಲಕ್ಷ್ಮಣಗೌಡ ಸೇರಿದಂತೆ 119ಮಂದಿ ರೈತರು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
– ಶ್ರೀನಿವಾಸ್ ಆರ್.
