ಕೊರಟಗೆರೆ:- ಗ್ರಾಮೀಣ ಕುಟುಂಬಗಳಿಗೆ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸುವ ಮೂಲಕ ವಲಸೆ ತಡೆಗಟ್ಟುವ ಉದ್ದೇಶದಿಂದ ಅರಸಾಪುರ ಗ್ರಾಮ ಪಂಚಾಯಿತಿ ವತಿಯಿಂದ ವಿಬಿ–ಜಿರಾಮ್ಜಿ ಯೋಜನೆಯಡಿ ಜಾಬ್ಕಾರ್ಡ್ ಮೇಳ ಹಾಗೂ ಕೂಲಿ ಆಧಾರಿತ ಕಾಮಗಾರಿಗಳ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಅರಸಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ. ಮಲ್ಲೇಶ್, ‘ವಿಬಿ–ಜಿರಾಮ್ಜಿ ಯೋಜನೆಯಡಿ ಜಾಬ್ಕಾರ್ಡ್ ಮೇಳ ಆಯೋಜಿಸಲಾಗಿದ್ದು, ಇದುವರೆಗೆ ಜಾಬ್ಕಾರ್ಡ್ ಪಡೆಯದ ಅರ್ಹ ಗ್ರಾಮೀಣ ಕುಟುಂಬಗಳು ಕೂಡಲೇ ಜಾಬ್ಕಾರ್ಡ್ ಪಡೆದು ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಜುಲೈ 1ರಿಂದ ಯೋಜನೆ ಜಾರಿಗೆ ಬಂದಿದ್ದು, ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 125 ದಿನಗಳ ಗ್ಯಾರಂಟಿ ಕೆಲಸ ನೀಡಲಾಗುವುದು. ಇದರಿಂದ ಕುಟುಂಬಗಳು ಸ್ಥಳೀಯವಾಗಿಯೇ ಕೆಲಸ ನಿರ್ವಹಿಸಿ ವರ್ಷಕ್ಕೆ ₹47,750ರಷ್ಟು ಆದಾಯ ಗಳಿಸಲು ಅವಕಾಶವಿದೆ’ ಎಂದು ತಿಳಿಸಿದರು.

ಕೊರಟಗೆರೆ ತಾಲ್ಲೂಕು ಬರಪೀಡಿತ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಉದ್ಯೋಗಕ್ಕಾಗಿ ಗ್ರಾಮೀಣ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಡೆಯುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಯೋಜನೆಯಡಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳು ಸೇರಿದಂತೆ ಒಟ್ಟು 318 ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಲ್ಲೇಶ್ ಹೇಳಿದರು.

ಕೊರಟಗೆರೆ ತಾಲ್ಲೂಕಿನ ಐಇಸಿ ಸಂಯೋಜಕ ಟಿ.ಕೆ. ವಿನುತ್ ಮಾತನಾಡಿ, ‘ಆಗಸ್ಟ್ 15ರಿಂದ ಜಾಬ್ಕಾರ್ಡ್ ಮೇಳ ಆಯೋಜಿಸಲಾಗಿದ್ದು, ಅರ್ಹ ಕುಟುಂಬಗಳಿಗೆ ಹೊಸ ಜಾಬ್ಕಾರ್ಡ್ಗಳನ್ನು ವಿತರಿಸುವ ಮೂಲಕ ವಲಸೆ ತಡೆಗಟ್ಟುವುದು, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜೀವನೋಪಾಯ ಭದ್ರತೆ ಕಲ್ಪಿಸುವುದು ಯೋಜನೆಯ ಉದ್ದೇಶ’ ಎಂದರು.
ಮನೆ ಮನೆಗೆ ತೆರಳಿ ಜಾಗೃತಿ
ಅರಸಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ವಿಬಿ–ಜಿರಾಮ್ಜಿ ಯೋಜನೆಯ ಕುರಿತು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಯಿತು. ಅರ್ಹ ಕುಟುಂಬಗಳು ಜಾಬ್ಕಾರ್ಡ್ ಪಡೆದುಕೊಂಡು ಯೋಜನೆಯಡಿ ದೊರೆಯುವ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳುವಂತೆ ಗ್ರಾಮಸ್ಥರಿಗೆ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಅರಸಾಪುರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸುಬ್ರಮಣ್ಯ ಮುನಿರಾಜು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು, ಗ್ರಾಮಸ್ಥರು ಹಾಗೂ ಪಂಚಾಯಿತಿ ಸಿಬ್ಬಂದಿ ಇದ್ದರು.
ವರದಿ : ಶ್ರೀನಿವಾಸ್, ಕೊರಟಗೆರೆ
