ಕೆ.ಆರ್.ಪೇಟೆ: ಸಹಕಾರ ಸಂಘಗಳು ಗ್ರಾಮೀಣ ಭಾಗದ ಉಸಿರಾಗಿದ್ದು, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರೈತರ ಹಾಗೂ ಗ್ರಾಮೀಣ ಜನರ ಆರ್ಥಿಕ ಸಬಲೀಕರಣದಲ್ಲಿ ಸಹಕಾರ ಸಂಘಗಳ ಪಾತ್ರ ಅತ್ಯಂತ ಮಹತ್ವದ್ದು ಎಂದು ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ (ಎಂಡಿಸಿಸಿ) ಬ್ಯಾಂಕ್ ನಿರ್ದೇಶಕ ಎಸ್.ಅಂಬರೀಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀರುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಸಹಕಾರ ಸಂಘಗಳು ದೇಶದ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ರೈತರಿಗೆ ಬೇಕಾದ ಬೆಳೆ ಸಾಲ, ಮಧ್ಯಮಾವಧಿ, ದೀರ್ಘಾವಧಿ ಸಾಲ ಸೌಲಭ್ಯಗಳನ್ನು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಒದಗಿಸುವ ಮೂಲಕ ರೈತರನ್ನು ಸಾಲದ ಸುಳಿಯಿಂದ ಪಾರು ಮಾಡುವ ಕೆಲಸ ಸಹಕಾರ ಸಂಘಗಳು ಮಾಡುತ್ತಿವೆ. ಬೀರುವಳ್ಳಿ ಸೊಸೈಟಿ ಇದಕ್ಕೆ ಉತ್ತಮ ಉದಾಹರಣೆ. ಈ ಸಂಘವು ಸ್ವ-ಸಹಾಯ ಸಂಘಗಳ ಮೂಲಕ ಸುಮಾರು 61 ಲಕ್ಷ ರೂ.ಗಳ ಸಾಲವನ್ನು ಚೆಕ್ ಮೂಲಕ ವಿತರಿಸಿ ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದೆ.

ಸಹಕಾರ ಸಂಘಗಳು ಸದಸ್ಯರ ಹಿತಾಸಕ್ತಿಯನ್ನು ಕಾಪಾಡುವುದರ ಜೊತೆಗೆ ರೈತರಿಗೆ ಅಗತ್ಯವಾದ ಕೃಷಿ ಪರಿಕರ, ಬೀಜ, ಗೊಬ್ಬರ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮೀಣ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುತ್ತಿವೆ. ಸಂಘದ ಸದಸ್ಯರು ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ದೇವೇಗೌಡ ಅವರು, ಕಳೆದ ಸಾಲಿನಲ್ಲಿ ಸಂಘವು ಕೈಗೊಂಡ ಆಡಳಿತಾತ್ಮಕ ಸುಧಾರಣೆಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ವಿವರವಾಗಿ ಮಾಹಿತಿ ನೀಡಿದ ಅವರು ಸದಸ್ಯರು ಪಡೆದ ಸಾಲವನ್ನು ಸೂಕ್ತ ಸಮಯಕ್ಕೆ ಮರುಪಾವತಿ ಮಾಡಿದರೆ ಮಾತ್ರ ಸಂಘ ಮತ್ತಷ್ಟು ಬೆಳೆಯಲು ಸಾಧ್ಯ. ಎಲ್ಲಾ ಸದಸ್ಯರು ಸಹಕಾರ ಮನೋಭಾವದಿಂದ ನಡೆದುಕೊಂಡು ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಎಸ್.ಕೆ.ಸತೀಶ್ ಅವರು ಸಂಘದ ವಾರ್ಷಿಕ ಲೆಕ್ಕಪತ್ರಗಳು, ಲಾಭ-ನಷ್ಟದ ವಿವರ, ಆದಾಯ-ವೆಚ್ಚ, ಸಾಲ ವಿತರಣೆ, ವಸೂಲಾತಿ ಹಾಗೂ ಸಂಘದ ಮುಂದಿನ ಕಾರ್ಯಯೋಜನೆಗಳ ಕುರಿತು ಸಭೆಗೆ ವಿವರವಾಗಿ ಮಂಡಿಸಿದರು.ಇದೇ ವೇಳೆ ಸಂಘದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಸ್ಮರಣಿಕೆ, ಪ್ರಮಾಣ ಪತ್ರ ಹಾಗೂ ಬಹುಮಾನ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಜವರಮ್ಮ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಜಲೇಂದ್ರ, ಸಂಘದ ಕಾರ್ಯದರ್ಶಿ ಎಸ್.ಕೆ.ಸತೀಶ್, ಸೋಮನಹಳ್ಳಿ ಸೊಸೈಟಿ ಕಾರ್ಯದರ್ಶಿ ಮಂಜುನಾಥ್,ನಿರ್ದೇಶಕರಾದ ನಾಗರಾಜೇಗೌಡ,ನಟೇಶ್,ಜಗದೀಶ್, ಕುಮಾರ್,ಮಾಜಿ ಅಧ್ಯಕ್ಷ ಅನಿಲ್ ಕುಮಾರ್,ಕುಮಾರ,ಜಯಮ್ಮ, ಇಂದ್ರೇಶ್,ಜವರಯ್ಯ,ಅಶ್ವಿನ್ ಕುಮಾರ್,ಮಂಜುನಾಥ, ಕಾರ್ತಿಕ್ ಸೇರಿದಂತೆ ನೂರಾರು ಸದಸ್ಯರು, ರೈತರು ಹಾಜರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ
