ಕೆ.ಆರ್.ಪೇಟೆ: ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳುವುದು ಅತ್ಯಂತ ಮುಖ್ಯ ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.
ತಾಲ್ಲೂಕಿನ ಬಳ್ಳೆಕೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಡೆದ ಬೂಕನಕೆರೆ ಹಾಗೂ ಅಕ್ಕಿಹೆಬ್ಬಾಳು ಹೋಬಳಿ ಮಟ್ಟದ ಸರ್ಕಾರಿ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟಕ್ಕೆ ವಾಲಿಬಾಲ್ ಸರ್ವ್ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಮಹತ್ವ ನೀಡಬೇಕು. ಕ್ರೀಡೆಯಿಂದ ದೈಹಿಕ ಸದೃಢತೆಯ ಜೊತೆಗೆ ಮಾನಸಿಕ ಸ್ಥೈರ್ಯ, ಶಿಸ್ತು, ಆತ್ಮವಿಶ್ವಾಸ ಹಾಗೂ ತಂಡದ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ. ಅದರಲ್ಲೂ ಚಿಕ್ಕ ವಯಸ್ಸಿನಿಂದಲೇ ಮಕ್ಕಳು ಕ್ರೀಡಾಕೂಟಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಸೋತಾಗ ನಿರಾಶರಾಗದೆ, ಗೆದ್ದಾಗ ಅಹಂಕಾರಪಡದೆ ಕ್ರೀಡಾ ಮನೋಭಾವದಿಂದ ಮುನ್ನಡೆಯಬೇಕು. ಇಂತಹ ಗುಣಗಳು ಜೀವನದಲ್ಲಿಯೂ ಯಶಸ್ಸು ಸಾಧಿಸಲು ಸಹಕಾರಿಯಾಗುತ್ತವೆ. ಕ್ರೀಡೆಯ ಮೂಲಕ ಉತ್ತಮ ಆರೋಗ್ಯದ ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಗ್ರಾಮೀಣ ಭಾಗದ ಮಕ್ಕಳಲ್ಲಿ ಅಪಾರ ಪ್ರತಿಭೆಯಿದೆ. ಅಂತಹ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಹಾಗೂ ಪ್ರೋತ್ಸಾಹ ದೊರೆತರೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ತಮ್ಮ ತಾಲ್ಲೂಕಿಗೆ ಕೀರ್ತಿ ತರಲು ಸಾಧ್ಯ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ರೀಡಾಕೂಟದ ಆಯೋಜಕರು ಹಾಗೂ ಶಾಲೆಯ ಮುಖ್ಯಸ್ಥರು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ಅವರ ಸಮಾಜ ಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಬಳ್ಳೆಕೆರೆ ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಬಿ.ಆರ್. ವೆಂಕಟೇಶ್, ಪ್ರಭಾರಿ ಮುಖ್ಯ ಶಿಕ್ಷಕ ಗಿರೀಶ್ ಆರ್.ಎಚ್., ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್ ಎಚ್.ಸಿ., ಶಿಕ್ಷಕರಾದ ಶಿವಮೂರ್ತಿ ಎಸ್., ಅಣ್ಣಪ್ಪಗೌಡ ಎಚ್.ಡಿ., ದೇವರಾಜು ಬಿ.ಡಿ., ಶಿವಕುಮಾರ್ ಬಿ., ಪ್ರೀತಿ ಜಿ.ಎಂ., ಬೂಕನಕೆರೆ ಹಾಗೂ ಅಕ್ಕಿಹೆಬ್ಬಾಳು ಹೋಬಳಿಗಳ ವಿವಿಧ ಸರ್ಕಾರಿ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ಮುಖ್ಯ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು, ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ : ಮನು ಮಾಕವಳ್ಳಿ, ಕೆ.ಆರ್.ಪೇಟೆ
