ಶ್ಲೋಕ – 19
ತಾನಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರಾಧಮಾನ್ ।
ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು ॥೧೯॥
ತಾನ್ ಅಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರ ಅಧಮಾನ್ ।
ಕ್ಷಿಪಾಮಿ ಅಜಸ್ರಮ್ ಅಶುಭಾನ್ ಆಸುರೀಷು ಏವ ಯೋನಿಷು –ಪರತತ್ವವನ್ನು ದ್ವೇಷಿಸುವ, ಕನಿಕರವಿಲ್ಲದ ಕೊಳಕಾದ ಅಂಥ ನೀಚ ಮನುಜರನ್ನು ನಾನು ನಿರಂತರವಾಗಿ ಬಾಳ ಬವಣೆಗಳಲ್ಲಿ, ಕೆಡುನಡೆಯ ಬಸಿರುಗಳಲ್ಲಿ ಕೆಡುವುತ್ತೇನೆ.
ಭಗವಂತ ಜೀವನನ್ನು ಸೃಷ್ಟಿಸುವುದಿಲ್ಲ; ಮೂಲವಾಗಿ ಜೀವ ಮತ್ತು ಜೀವ ಸ್ವಭಾವ ಅನಾಧಿನಿತ್ಯ ಎನ್ನುವುದನ್ನು ನಾವು ಹಿಂದೆ ತಿಳಿದಿದ್ದೇವೆ. ಆಸುರೀ ಸ್ವಭಾವ ಎನ್ನುವುದು ಮೂಲತಃ ಜೀವ ಸ್ವಭಾವ. ಹೇಗೆ ಹಾಗಲಕಾಯಿ ಕಹಿಯೋ ಹಾಗೆ ಈ ಆಸುರೀ ಜನರ ಜೀವಸ್ವಭಾವ ತಾಮಸ. ಅದನ್ನು ಭಗವಂತ ಬದಲಿಸುವುದಿಲ್ಲ. ಬದಲಿಗೆ ಆ ಜೀವದ ಸ್ವಭಾವಕ್ಕನುಗುಣವಾಗಿ ಜೀವದ ಗತಿ ನಿರ್ಮಾಣವಾಗುತ್ತದೆ. ಭಗವಂತನನ್ನು ದ್ವೇಷಿಸುವ, ಮನುಕುಲವನ್ನು ದ್ವೇಷಿಸುವ, ಪ್ರಪಂಚವನ್ನೇ ದ್ವೇಷಿಸುವ ಈ ಕ್ರೂರಿಗಳನ್ನು ಭಗವಂತ ನಿರಂತರ ಸಂಸಾರ ಸಾಗರದಲ್ಲಿ ಹಾಕುತ್ತಾನೆ. ಇದರಿಂದ ಅವರು ಮರಳಿಮರಳಿ ಹೀನ ಮನೆತನದಲ್ಲಿ ಹುಟ್ಟಿಬರುವಂತಾಗುತ್ತದೆ.
