ಬೆಂಗಳೂರು: 2026ರ ಇಂಡಿಯನ್ ರೇಸಿಂಗ್ ಫೆಸ್ಟಿವಲ್ಗೆ ಅದ್ಧೂರಿ ಚಾಲನೆ- ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ಸೇರಿ 6 ತಂಡಗಳು ಕಣಕ್ಕೆ
ಬೆಂಗಳೂರು, ಸೆ.11: ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ (RPPL) ಆಯೋಜಿಸುತ್ತಿರುವ ಪ್ರತಿಷ್ಠಿತ ಇಂಡಿಯನ್ ರೇಸಿಂಗ್ ಫೆಸ್ಟಿವಲ್ (IRF) 2026ರ ಹೊಸ ಆವೃತ್ತಿಗೆ ಅದ್ಧೂರಿ ಚಾಲನೆ ದೊರೆಯಲಿದೆ.
ಫೆಸ್ಟಿವಲ್ನ ಭಾಗವಾಗಿ ನಡೆಯಲಿರುವ F4 ಇಂಡಿಯನ್ ಚಾಂಪಿಯನ್ಶಿಪ್ 2026ರ ಮೊದಲ ಸುತ್ತಿನ ಸ್ಪರ್ಧೆಗಳು ಸೆ.12 ಮತ್ತು 13ರಂದು ಕೊಯಮತ್ತೂರಿನ ಕಾರಿ ಮೋಟಾರ್ ಸ್ಪೀಡ್ವೇಯಲ್ಲಿ ನಡೆಯಲಿವೆ. ಈ ಋತುವಿನಲ್ಲಿ ದೇಶದ ಪ್ರಮುಖ ರೇಸಿಂಗ್ ಟ್ರ್ಯಾಕ್ಗಳಲ್ಲಿ F4 ಚಾಂಪಿಯನ್ಶಿಪ್ನ ಆರು ಸುತ್ತುಗಳು ಹಾಗೂ ಇಂಡಿಯನ್ ರೇಸಿಂಗ್ ಲೀಗ್ನ (IRL) ನಾಲ್ಕು ಸುತ್ತುಗಳು ನಡೆಯಲಿವೆ.

ಅಕ್ಟೋಬರ್ 24 ಮತ್ತು 25ರಂದು ಚೆನ್ನೈನ ಮದ್ರಾಸ್ ಇಂಟರ್ನ್ಯಾಷನಲ್ ಸರ್ಕ್ಯೂಟ್ನಲ್ಲಿ ಇಂಡಿಯನ್ ರೇಸಿಂಗ್ ಲೀಗ್ ಆರಂಭವಾಗಲಿದ್ದು, 2026ರ ಆವೃತ್ತಿಯಲ್ಲಿ ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಕಿಚ್ಚ ಸುದೀಪ್ ಮಾಲೀಕತ್ವದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು, ಜಾನ್ ಅಬ್ರಹಾಂ ಮಾಲೀಕತ್ವದ ಗೋವಾ ಏಸಸ್ ಜೆಎ ರೇಸಿಂಗ್, ಸೌರವ್ ಗಂಗೂಲಿ ನೇತೃತ್ವದ ಕೋಲ್ಕತ್ತಾ ರಾಯಲ್ ಟೈಗರ್ಸ್, ನಾಗ ಚೈತನ್ಯ ಮಾಲೀಕತ್ವದ ಹೈದರಾಬಾದ್ ಬ್ಲ್ಯಾಕ್ಬರ್ಡ್ಸ್, ಅರ್ಜುನ್ ಕಪೂರ್ ಬೆಂಬಲಿತ ಸ್ಪೀಡ್ ಡೀಮನ್ಸ್ ದೆಹಲಿ ಹಾಗೂ ಅಕಾರ್ಡ್ ಗ್ರೂಪ್ ಮಾಲೀಕತ್ವದ ಚೆನ್ನೈ ಟರ್ಬೋ ರೈಡರ್ಸ್ ತಂಡಗಳು ಕಣದಲ್ಲಿವೆ.
ಇದೇ ವೇಳೆ FIA ಪ್ರಮಾಣೀಕೃತ F4 ಇಂಡಿಯನ್ ಚಾಂಪಿಯನ್ಶಿಪ್ನಲ್ಲಿ ಎಂಟು ದೇಶಗಳ ಚಾಲಕರು ಎಂಟು ತಂಡಗಳ ಪರವಾಗಿ ಸ್ಪರ್ಧಿಸಲಿದ್ದಾರೆ. ಕಾರ್ಟಿಂಗ್ನಿಂದ ಸಿಂಗಲ್-ಸೀಟರ್ ರೇಸಿಂಗ್ಗೆ ಪ್ರವೇಶಿಸುವ ಯುವ ಚಾಲಕರಿಗೆ ಈ ಚಾಂಪಿಯನ್ಶಿಪ್ ಮಹತ್ವದ ವೇದಿಕೆಯಾಗಿದ್ದು, ಸ್ಪರ್ಧಾತ್ಮಕ ಅನುಭವದ ಜತೆಗೆ ಸೂಪರ್ ಲೈಸೆನ್ಸ್ ಅಂಕಗಳನ್ನು ಗಳಿಸಲು ಅವಕಾಶ ಕಲ್ಪಿಸಲಿದೆ.
ಈ ಕುರಿತು RPPL ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಖಿಲೇಶ್ ರೆಡ್ಡಿ ಮಾತನಾಡಿ, ಭಾರತದಲ್ಲಿ ಬಲಿಷ್ಠ ಮೋಟಾರ್ಸ್ಪೋರ್ಟ್ ಪರಿಸರ ವ್ಯವಸ್ಥೆ ನಿರ್ಮಿಸುವ ನಿಟ್ಟಿನಲ್ಲಿ 2026ರ ಇಂಡಿಯನ್ ರೇಸಿಂಗ್ ಫೆಸ್ಟಿವಲ್ ಪ್ರಮುಖ ಹೆಜ್ಜೆಯಾಗಿದೆ. F4 ಮೂಲಕ ಯುವ ಚಾಲಕರಿಗೆ ವೇದಿಕೆ ಕಲ್ಪಿಸುವುದು, IRL ಮೂಲಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರತಿಭೆಗಳನ್ನು ಒಂದೇ ವೇದಿಕೆಗೆ ತರುವುದು ಮತ್ತು ಹೊಸ ನಗರಗಳಿಗೆ ಮೋಟಾರ್ಸ್ಪೋರ್ಟ್ನ್ನು ಕೊಂಡೊಯ್ಯುವುದು ಉದ್ದೇಶವಾಗಿದೆ ಎಂದು ತಿಳಿಸಿದರು.

ಭಾರತದ ಯುವ ಚಾಲಕ ಭುವನ್ ಬೋನು ಮಾತನಾಡಿ, “ಇಂಡಿಯನ್ F4 ನನ್ನ ರೇಸಿಂಗ್ ಪಯಣದ ಮುಂದಿನ ಹೆಜ್ಜೆಯಾಗಿದ್ದು, F1 ತಲುಪುವ ಗುರಿಯತ್ತ ಸಾಗಲು ಇದು ಮಹತ್ವದ ಮೈಲಿಗಲ್ಲಾಗಿದೆ” ಎಂದು ಹೇಳಿದರು.
ಈ ಬಾರಿಯ ಫೆಸ್ಟಿವಲ್ನ ಮತ್ತೊಂದು ಪ್ರಮುಖ ಆಕರ್ಷಣೆ ನವಿ ಮುಂಬೈ ಸ್ಟ್ರೀಟ್ ಸರ್ಕ್ಯೂಟ್ ಆಗಿದೆ. ಡಿಸೆಂಬರ್ನಲ್ಲಿ ಇಲ್ಲಿ ಎರಡೂ ಚಾಂಪಿಯನ್ಶಿಪ್ಗಳ ಅಂತಿಮ ಸುತ್ತುಗಳು ನಡೆಯಲಿದ್ದು, ಭಾರತದ ಮೋಟಾರ್ಸ್ಪೋರ್ಟ್ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ.
ಇಂಡಿಯನ್ ರೇಸಿಂಗ್ ಫೆಸ್ಟಿವಲ್ನ ರೇಸ್ಗಳು STAR Sports KHEL, STAR Sports 2 Kannada ಹಾಗೂ STAR Sports 2 Tamilನಲ್ಲಿ ಪ್ರಸಾರವಾಗಲಿದ್ದು, JioHotstarನಲ್ಲಿ ವಿವಿಧ ಭಾಷೆಗಳಲ್ಲಿ ಲೈವ್ ಸ್ಟ್ರೀಮಿಂಗ್ ಲಭ್ಯವಿರಲಿದೆ. ಭಾರತ ಹೊರಗಿನ ವೀಕ್ಷಕರಿಗಾಗಿ STAR Sports YouTube ಚಾನೆಲ್ನಲ್ಲಿ ನೇರ ಪ್ರಸಾರ ವ್ಯವಸ್ಥೆ ಇರಲಿದೆ.
