ಹಾಸನ: ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಅಬಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಪ್ರತಿಕ್ರಿಯಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರನ್ನು ಗುರಿಯಾಗಿಸಿಕೊಂಡೇ ದುರುದ್ದೇಶಪೂರ್ವಕವಾಗಿ ದಾಳಿ ನಡೆಸಲಾಗಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ ಎಂದು ಶಿವಲಿಂಗೇಗೌಡ ತಿಳಿಸಿದ್ದಾರೆ.
ED ದಾಳಿಯಲ್ಲಿ ಹಣ ಪತ್ತೆಯಾಗಿರುವ ಕುರಿತು ಸತೀಶ್ ಜಾರಕಿಹೊಳಿ ಅವರೇ ಸ್ಪಷ್ಟನೆ ನೀಡಿದ್ದು, “ಅದು ನಮ್ಮದೇ ಹಣ, ಲೆಕ್ಕ ಕೊಡುತ್ತೇವೆ. ನಾವು ED ತನಿಖೆಯನ್ನು ಎದುರಿಸುತ್ತೇವೆ” ಎಂದು ಹೇಳಿದ್ದಾರೆ. ಹೀಗಾಗಿ ತನಿಖೆ ಎದುರಿಸಿ ಸತ್ಯಾಸತ್ಯತೆ ಹೊರಬರಬೇಕು ಎಂದು ಶಿವಲಿಂಗೇಗೌಡ ಹೇಳಿದ್ದಾರೆ.
ಸತೀಶ್ ಜಾರಕಿಹೊಳಿ ಅವರು ರಾಜ್ಯದಲ್ಲಿ ಉತ್ತಮ ಹೆಸರು ಗಳಿಸಿರುವ ರಾಜಕಾರಣಿಯಾಗಿದ್ದು, ಪರಿಶಿಷ್ಟ ಪಂಗಡದ ಸಮಾಜದಿಂದ ಸತತವಾಗಿ ಗೆದ್ದು ರಾಜಕೀಯವಾಗಿ ಬೆಳೆದಿದ್ದಾರೆ. ಅವರ ಹೆಸರಿಗೆ ಕಪ್ಪು ಮಸಿ ಬಳಿಯುವಂತಹ ಯಾವುದೇ ಕೆಲಸ ಆಗಬಾರದು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ED ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾಗಿದ್ದು, ಆಗಾಗ ದಾಳಿ ನಡೆಸುತ್ತಿದೆ. ಈ ಪ್ರಕರಣದಲ್ಲಿಯೂ ಸಮಗ್ರ ತನಿಖೆ ನಡೆಯಲಿ. ತನಿಖೆಯ ಮೂಲಕ ಸತ್ಯಾಸತ್ಯತೆ ಹೊರಬರಲಿ ಎಂದು ಶಿವಲಿಂಗೇಗೌಡ ತಿಳಿಸಿದ್ದಾರೆ.
