ಚನ್ನರಾಯಪಟ್ಟಣ: ಮಹಾತ್ಮ ಗಾಂಧೀಜಿಯವರ ಕನಸಿನ ರಾಮರಾಜ್ಯ ಹಾಗೂ ಉತ್ತಮ ಸಮಾಜ ನಿರ್ಮಾಣವಾಗಬೇಕು ಎಂದು ಗದಗ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ.ಆರ್. ಪಾಟೀಲ್ ಹೇಳಿದರು.
ತಾಲ್ಲೂಕಿನ ಹಿರಿಸಾವೆ ಹೋಬಳಿಯ ದಿಡಗ ಗ್ರಾಮದ ಸುವರ್ಣ ಭವನದಲ್ಲಿ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಗಾಂಧಿ ತತ್ವ ಪ್ರಣೀತ ಯುವಜನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಇಂದಿನ ಪರಿಸ್ಥಿತಿಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತಿದೆ. ಉತ್ತಮ ಸಂಸ್ಕೃತಿ ನಿರ್ಮಾಣವಾಗಬೇಕು. ಪ್ರತಿಯೊಬ್ಬರ ಬದುಕು ಹಾಗೂ ನಡೆ ಪರಿಣಾಮಕಾರಿಯಾಗಿರಬೇಕು. ಪ್ರತಿಭಾನ್ವಿತರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಯಾರೂ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಮಹಾತ್ಮ ಗಾಂಧೀಜಿಯವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ಆದರ್ಶ, ತತ್ವ ಹಾಗೂ ಸಂದೇಶಗಳು ಇಂದಿಗೂ ಜೀವಂತವಾಗಿವೆ. ಅವರ ಹೋರಾಟದ ಫಲವಾಗಿ ನಾವು ಸ್ವತಂತ್ರವಾಗಿ ಬದುಕುವಂತಾಗಿದೆ. ಭೂಮಿ ಹಾಗೂ ಪ್ರಪಂಚ ಇರುವವರೆಗೂ ಗಾಂಧೀಜಿಯವರ ಹೆಸರು ಶಾಶ್ವತವಾಗಿ ಉಳಿಯಲಿದೆ ಎಂದು ಹೇಳಿದರು.
ಯಶಸ್ಸಿನ ಮೆಟ್ಟಿಲು ಹತ್ತುವಾಗ ಹಿಂದಿರುಗಿ ನೋಡದೆ ಮುನ್ನಡೆಯಬೇಕು. ಆದರೆ ಯಶಸ್ಸು ಸಾಧಿಸಿದ ಬಳಿಕ ತಾನು ನಡೆದು ಬಂದ ದಾರಿಯನ್ನು ಮರೆಯಬಾರದು. ಉತ್ತಮ ಸ್ನೇಹಿತರು ಸಿಗದಿದ್ದರೆ ಪುಸ್ತಕಗಳನ್ನೇ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು. ಉತ್ತಮ ವಿಚಾರಧಾರೆಗಳು ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಮಾತನಾಡಿ, ಗಾಂಧೀಜಿಯವರ ದೇಹವನ್ನು ಕೊಲ್ಲಲು ಸಾಧ್ಯವಾಗಿರಬಹುದು. ಆದರೆ ಅವರ ಆದರ್ಶಗಳು, ತತ್ವಗಳು, ಸಂದೇಶಗಳು ಹಾಗೂ ವಿಚಾರಧಾರೆಗಳನ್ನು ಯಾರಿಂದಲೂ ಎಂದಿಗೂ ಕೊಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರಪಂಚದಲ್ಲಿ ಮಾನವೀಯತೆಯ ಮೌಲ್ಯಗಳು ಇರುವವರೆಗೂ ಹಾಗೂ ಗಾಂಧಿವಾದಿಗಳು ಬದುಕಿರುವವರೆಗೂ ಗಾಂಧೀಜಿಯವರ ಹೆಸರು ಮತ್ತು ವಿಚಾರಧಾರೆಗಳು ಉಳಿಯಲಿವೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಾತ್ಮ ಗಾಂಧೀಜಿಯವರ ಕುರಿತು ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವವರ ವಿರುದ್ಧ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಗಾಂಧಿ ಭವನದ ಸಲಹೆಗಾರ ಪ್ರೊ. ಜಿ.ಬಿ. ಶಿವರಾಜು ಗಣ್ಯರು ಹಾಗೂ ಶಿಬಿರಾರ್ಥಿಗಳನ್ನು ಸ್ವಾಗತಿಸಿ ಅಭಿನಂದಿಸಿದರು. ಶಿಬಿರದಲ್ಲಿ ಆರು ಜಿಲ್ಲೆಗಳ 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ ಕ್ಷೇತ್ರದ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಕೆ. ಚಂದ್ರು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪುಟ್ಟರಾಜು, ಎಂ.ಆರ್. ವಾಸು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಸತೀಶ್, ಇಸಿಓ ಅನಿಲ್ ಕುಮಾರ್, ದಿಡಗ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಆರ್. ಮಂಜುನಾಥ್ ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
