ಹಾಸನ: ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆಯ 345ನೇ ತಿಂಗಳ ಕಾರ್ಯಕ್ರಮವು ಹಾಸನ ಸೆಂಟ್ರಲ್ ಕಾಮರ್ಸ್ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕವಿ ರಾಜಣ್ಣ ರಾಶಿ ಅವರ ‘ಬಿಂಬ-ಪ್ರತಿಬಿಂಬ’ ಕವನ ಸಂಕಲನದ ಕುರಿತು ಸಾಹಿತಿ ಗೊರೂರು ಅನಂತರಾಜು ವಿಮರ್ಶೆ ನಡೆಸಿದರು.
ಕವಿ ತಾನು ಹುಟ್ಟಿ ಬೆಳೆದ ಪರಿಸರ ಹಾಗೂ ಕಂಡ ಬದುಕಿನ ಅನುಭವಗಳನ್ನೇ ಕಾವ್ಯದಲ್ಲಿ ಪರಿಣಾಮಕಾರಿಯಾಗಿ ಸೆರೆಹಿಡಿದಿದ್ದಾರೆ ಎಂದು ಗೊರೂರು ಅನಂತರಾಜು ಹೇಳಿದರು. ಮುಳ್ಳಯ್ಯನಗಿರಿಯ ಪ್ರಕೃತಿ ಸೌಂದರ್ಯವನ್ನು ವರ್ಣಿಸುವುದರೊಂದಿಗೆ, ಹೇಮಾವತಿ ನದಿಯನ್ನು ರೈತರ ಆಶ್ರಯದಾತೆಯಾಗಿ ಕಂಡು ಕವಿ ಕಾವ್ಯ ರಚಿಸಿದ್ದಾರೆ ಎಂದರು.
ಮಹಾರಾಷ್ಟ್ರದಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ ದಿನಗಳ ಅನುಭವ, ವರ್ಧಾ ನದಿ ಯೋಜನೆ ಹಾಗೂ ಪುನರ್ವಸತಿ ಕಾರ್ಯದಲ್ಲಿ ನಿರಾಶ್ರಿತರ ನೋವನ್ನು ಕಂಡ ಸಂದರ್ಭಗಳನ್ನೂ ಕವಿ ಕಾವ್ಯದ ಮೂಲಕ ದಾಖಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವಗಳು ಅವರ ಕಾವ್ಯಕ್ಕೆ ವಿಶಿಷ್ಟ ಆಯಾಮ ನೀಡಿವೆ ಎಂದು ತಿಳಿಸಿದರು.

ಇಂಗ್ಲಿಷ್ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿರುವ ಕವಿ, ಪ್ರವಾಸಿ ತಾಣಗಳು, ಗಿರಿಶಿಖರಗಳ ಸೌಂದರ್ಯ, ದೇವಾಲಯಗಳು, ತಂದೆ-ತಾಯಿ ಹಾಗೂ ಅತ್ತೆಯ ಮಮತೆ ಸೇರಿದಂತೆ ಬದುಕಿನ ಹಲವು ಅನುಭವಗಳನ್ನು ಕಾವ್ಯದ ವಸ್ತುವಾಗಿಸಿಕೊಂಡಿದ್ದಾರೆ. ಒಂದು ವಿಷಯವು ‘ಬಿಂಬ’ವಾಗಿದ್ದರೆ, ಅದರಿಂದ ಕವಿಯ ಮನಸ್ಸಿನಲ್ಲಿ ಮೂಡುವ ಹತ್ತಾರು ಭಾವನೆಗಳು ‘ಪ್ರತಿಬಿಂಬ’ವಾಗಿ ಕವಿತೆಗಳಲ್ಲಿ ವ್ಯಕ್ತವಾಗಿವೆ ಎಂದು ಅವರು ವಿಶ್ಲೇಷಿಸಿದರು.
ಕವಿತೆ ರಚನೆಯ ಸಂದರ್ಭದಲ್ಲಿ ಭಾಷೆ, ಛಂದಸ್ಸು ಹಾಗೂ ಪ್ರಾಸಬದ್ಧತೆಯ ಒತ್ತಡದಿಂದ ಹೊರಬಂದು ಸರಳ ಭಾಷೆಯನ್ನು ಕವಿ ತಮ್ಮದಾಗಿಸಿಕೊಂಡಿದ್ದಾರೆ. ಕೆಲವು ಕವಿತೆಗಳಲ್ಲಿ ಪ್ರಚಲಿತ ಜ್ವಲಂತ ಸಮಸ್ಯೆಗಳು ಪ್ರತಿಬಿಂಬಿತವಾಗಿದ್ದರೆ, ಇನ್ನು ಕೆಲವು ಕವಿತೆಗಳು ಕೋಮಲ ಮನಸ್ಸಿನ ನಿಷ್ಕಲ್ಮಶ ಪ್ರೇಮ ಮತ್ತು ಶೃಂಗಾರ ಭಾವನೆಗಳನ್ನು ಒಳಗೊಂಡಿವೆ ಎಂದು ಗೊರೂರು ಅನಂತರಾಜು ಹೇಳಿದರು.
ಕಾರ್ಯಕ್ರಮದಲ್ಲಿ ಸಿ.ಎನ್. ತಿಮ್ಮೇಗೌಡ, ಲಲಿತ ಎಸ್., ಭಾರತಿ ಹೆಚ್.ಎನ್., ಚಂದ್ರಕಾಂತ ಪಡೇಸೂರ, ಎನ್.ಎಲ್. ಚನ್ನೇಗೌಡ, ಟಿ. ಶಂಕರಪ್ಪ, ಗೊರೂರು ಅನಂತರಾಜು, ಕುಮಾರ್ ಛಲವಾದಿ, ಮಂಜುಳಾ ಪ್ರಸಾದ್ ಹಾಗೂ ಶೈಲಜಾ ಲೋಕೇಶ್ ಸ್ವರಚಿತ ಕವಿತೆ ಮತ್ತು ಹನಿಗವಿತೆಗಳನ್ನು ವಾಚಿಸಿದರು.
ಸುಂದರೇಶ್ ಉಡುವಾರೆ, ಗೊರೂರು ಶಿವೇಶ್ ಹಾಗೂ ರುದ್ರಪ್ಪಾಜಿರಾವ್ ಉಪಸ್ಥಿತರಿದ್ದರು. ಸಂಚಾಲಕಿ ಕಾಮಾಕ್ಷಮ್ಮ ಸ್ವಾಗತಿಸಿದರು. ಕುಮಾರ್ ಛಲವಾದಿ ನಿರೂಪಿಸಿದರು. ವಾಚನಗೊಂಡ ಕವಿತೆಗಳನ್ನು ಚಂದ್ರಕಾಂತ ಪಡೇಸೂರ ಹಾಗೂ ಎನ್.ಎಲ್. ಚನ್ನೇಗೌಡರು ವಿಮರ್ಶಿಸಿದರು.
