ತುಮಕೂರು: ನಗರದ ಶ್ರೀ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದಲ್ಲಿ 17ನೇ ಪದವಿ ಪ್ರಧಾನ ಸಮಾರಂಭವನ್ನು ಸೆ. 12 ರಂದು ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.
ಶ್ರೀ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸುವರು, ಮಾರ್ವೆಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಉಪಾಧ್ಯಕ್ಷರು ಹಾಗೂ ಇಂಡಿಯಾ ಕಂಟ್ರಿ ಮ್ಯಾನೇಜರ್ ನವೀನ್ ಬಿಷ್ಟೋಯ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪದಕ ವಿತರಣೆ ಮತ್ತು ಪದವಿ ಪ್ರದಾನ ಸಮಾರಂಭದ ಭಾಷಣ ಮಾಡಲಿದ್ದಾರೆ ಎಂದು ಎಸ್ಐಟಿ ಸಿಇಓ ಡಾ.ಶಿವಕುಮಾರಯ್ಯ ಹಾಗೂ ಪ್ರಾಂಶುಪಾಲರಾದ ಪ್ರೊ.ಎಸ್.ವಿ.ದಿನೇಶ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ, ಅಕಾಡೆಮಿಕ್ ಕೌನ್ಸಿಲ್ನ ಸದಸ್ಯರು ಮತ್ತು ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ಆಹ್ವಾನಿತರು, ವಿದ್ಯಾರ್ಥಿಗಳು ಮತ್ತು ಪದವೀಧರರ ಪೋಷಕರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಈ ಸಮಾರಂಭದಲ್ಲಿ ಎಂಬಿಎ 175 ಅಭ್ಯರ್ಥಿಗಳು, ಎಂಸಿಎ 107 ಅಭ್ಯರ್ಥಿಗಳು (2024-25 ಮತ್ತು 2025-26 ಬ್ಯಾಚ್), ಎಂ.ಟೆಕ್ 48 ಅಭ್ಯರ್ಥಿಗಳು, ಬಿ.ಇ. ವಿಭಾಗಗಳ 1053 ಅಭ್ಯರ್ಥಿಗಳು, ಬಿ.ಆರ್ಕಿಟೆಕ್ 17 ಅಭ್ಯರ್ಥಿಗಳು ಪದವಿ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ ಎಂದರು.
ಲಕ್ಷ್ಮೀಪತಿ ಆರ್. ಬಿಇ(ಸಿಎಸ್) ಅವರು ಸಿ.ಜಿ.ಪಿ.ಎ. 9.76 ಗಳಿಸಿ ಅಗ್ರಸ್ಥಾನ ಪಡೆದಿದ್ದು. ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಚಿನ್ನದ ಪದಕವನ್ನು ಸ್ವೀಕರಿಸಲಿದ್ದಾರೆ.ಜೊತೆಯಲ್ಲಿ ಇನ್ನೂ ನಾಲ್ಕು ಚಿನ್ನದ ಪದಕಗಳಿಗೆ ಆಯ್ಕೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಜಾಗತಿಕ ಆರ್ಥಿಕ ಮಂದಗತಿ ಮತ್ತು ಕೃತಕ ಬುದ್ಧಿಮತ್ತೆಯ (ಎಐ) ಕ್ಷಿಪ್ರ ಬೆಳವಣಿಗೆಯ ಹೊರತಾಗಿಯೂ, ಎಸ್ಐಟಿ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಗಾಗಿ 230ಕ್ಕೂ ಹೆಚ್ಚು ಕಂಪೆನಿಗಳನ್ನು ಯಶಸ್ವಿಯಾಗಿ ಆಕರ್ಷಿಸಿದೆ. ಇದರ ಪರಿಣಾಮ 2025-26ರ ಬ್ಯಾಚ್ನ ವಿದ್ಯಾರ್ಥಿಗಳಿಗೆ 1200ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭಿಸಿವೆ. 180ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಾರ್ಷಿಕ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವೇತನ ಪ್ಯಾಕೇಜ್ಗಳನ್ನು ಪಡೆಯುತ್ತಿದ್ದಾರೆ. 500ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ವಾರ್ಷಿಕ 6 ಲಕ್ಷಕ್ಕಿಂತ ಹೆಚ್ಚಿನ ವೇತನವನ್ನು ಹೊಂದಿದ್ದವು. ಜತೆಗೆ, 450 ವಿದ್ಯಾರ್ಥಿಗಳು ಪ್ರತಿಷ್ಠಿತ ಸಂಸ್ಥೆಗಳಿಂದ ವೇತನ ಸಹಿತ ಇಂಟರ್ನ್ ಶಿಪ್ ಅವಕಾಶಗಳನ್ನು ಪಡೆದಿದ್ದು, 15,000 ದಿಂದ 1 ಲಕ್ಷದವರೆಗಿನ ಭತ್ಯೆ (ಸ್ಟೈಫಂಡ್) ನೀಡಲಾಗಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉದ್ಯೋಗ ನಿಯೋಜನಾಧಿಕಾರಿ ಮತ್ತು ಡೀನ್ ಡಾ||ಚೌಧರಿ ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
