ತುಮಕೂರು: ವಿಶ್ವ ಹಿಂದೂ ಪರಿಷದ್ ಹಾಗೂ ಭಜರಂಗದಳದ 9ನೇ ವರ್ಷದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನಾ ಮಹೋತ್ಸವದ ವೈಭವದ ಸಿದ್ಧತೆ ನಡೆದಿದೆ. ಈ ಬಾರಿ ನಗರದ ಹಲವು ಸಂಘಗಳು ಪ್ರತಿಷ್ಠಾಪಿಸಿರುವ ಗಣಪತಿಗಳು ಒಳಗೊಂಡ ಸಾಮೂಹಿಕ ಗಣೇಶ ವಿಸರ್ಜನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಗತ ಸಮಿತಿ ಕಾರ್ಯದರ್ಶಿ ಬಿ.ಜಿ.ಪ್ರದೀಪ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ನಗರದ ಭದ್ರಮ್ಮ ವೃತ್ತದ ಬಳಿ ಸೋಮೆಕಟ್ಟೆ ಮಠದಆವರಣದಲ್ಲಿ ಈ ತಿಂಗಳ 14ರಂದು ಗಣಪತಿ ಪ್ರತಿಷ್ಠಾಪನೆ ನಡೆಯಲಿದೆ.
ಗಣಪತಿಯ ಪುರಪ್ರವೇಶ ಕಾರ್ಯಕ್ರಮವಾಗಿ 13ರಂದು ಮಧ್ಯಾಹ್ನ 12.30ಕ್ಕೆ ಕ್ಯಾತ್ಸಂದ್ರದ ಜಾಸ್ಟೋಲ್ಗೇಟ್ನಿಂದ ಬೈಕ್ರ್ಯಾಲಿ ಮೂಲಕ ಗಣಪತಿಯನ್ನು ಬರಮಾಡಿಕೊಳ್ಳಲಾಗುವುದು ಎಂದರು.
ಹಿಂದುತ್ವಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಅಶೋಕ್ ಸಿಂಘಾಲ್ ಅವರ ಜನ್ಮ ಶತಾಬ್ದಿ ಸ್ಮರಣಾರ್ಥ ಮುಖ್ಯ ಮಂಟಪಕ್ಕೆ ಅಶೋಕ್ ಸಿಂಘಾಲ್ ಜೀ ಮಂಟಪ ಎಂದು ನಾಮಕರಣ ಮಾಡಲಾಗಿದೆ.ವಂದೇಮಾತರಂ ಗೀತೆಯ 150ನೇ ವರ್ಷಾಚರಣೆ ಅಂಗವಾಗಿ ಕಾರ್ಯಕ್ರಮ ನಡೆಯುವ ವೇದಿಕೆಗೆ ವಂದೇಮಾತರಂ ವೇದಿಕೆ ಎಂದು ಹೆಸರಿಡಲಾಗಿದೆ.ಪ್ರಸಾದ ಮಂಟಪಕ್ಕೆ ತ್ರಿವಿಧ ದಾಸೋಹಿ ಡಾ.ಶಿವಕುಮಾರಸ್ವಾಮೀಜಿ ಪ್ರಸಾದ ಮಂಟಪ ಎಂದು ಹೆಸರಿಡಲಾಗಿದೆ ಎಂದು ಹೇಳಿದರು.
ಈ ತಿಂಗಳ 14ರಂದು ಹಿಂದೂ ಮಹಾ ಗಣಪತಿಯ ಪ್ರತಿಷ್ಠಾಪನೆ ನೆರವೇರಲಿದೆ.13 ದಿನಗಳ ಕಾಲ ಪ್ರತಿ ದಿನ ವಿವಿಧ ಸಾಂಸ್ಕೃತಿಕ, ಸಾಂಪ್ರದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಈ ತಿಂಗಳ 26ರಂದು ಗಣಪತಿ ವಿಸರ್ಜನಾ ಮಹೋತ್ಸವ ನಡೆಯಲಿದೆ. ಈ ಬಾರಿಯ ವಿಶೇಷವಾಗಿ ನಗರದ ವಿವಿಧೆಡೆ ಸಂಘ-ಸಂಸ್ಥೆಗಳು ಪ್ರತಿಷ್ಠಾಪಿಸಿರುವ ಗಣಪತಿಗಳನ್ನು ಒಟ್ಟುಗೂಡಿಸಿ ಸಾಮೂಹಿಕ ವಿಸರ್ಜನಾಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷ. ನಗರದ 25-30 ಗಣಪತಿ ಸಂಘಗಳು ಒಪ್ಪಿಗೆ ಸೂಚಿಸಿವೆ. ಸುಮಾರು 50 ವಿವಿಧ ಗಣಪತಿಗಳು ಬರಲಿದ್ದು ಒಂದು, ಮೂರು ದಿನ ಗಣಪತಿ ಪ್ರತಿಷ್ಠಾಪನೆ ಮಾಡುವವರು, ವಿಸರ್ಜನೆ ಮಾಡದೆ, ತಮ್ಮ ಆಚರಣೆ ಮುಗಿಸಿ ಗಣಪತಿಯನ್ನು ಇಲ್ಲಿ ನಿರ್ಮಿಸುವ ಪ್ರತ್ಯೇಕ ಮಂಟಪದಲ್ಲಿಇಡಬಹುದು. ಆ ಗಣಪತಿಗಳಿಗೆ ನಿತ್ಯ ಪೂಜೆ ವ್ಯವಸ್ಥೆ ಇರುತ್ತದೆ.ನಂತರ 26ರಂದು ಎಲ್ಲಾ ಗಣಪತಿ ಮಂಡಳಿಗಳು ಒಟ್ಟಿಗೆ ಸೇರಿ ಶೋಭಾಯಾತ್ರೆ ಮೂಲಕ ವಿಸರ್ಜಿಸಲಾಗುವುದು.ಅಂದು ಬೆಳಿಗ್ಗೆ 11 ಗಂಟೆಯಿಂದ ಅಲಂಕೃತ ಪಲ್ಲಕ್ಕಿಯಲ್ಲಿ ಗಣಪತಿ ಪ್ರತಿಷ್ಠಾಪಿಸಿ ನಂದಿಧ್ವಜ, ವೀರಗಾಸೆ, ನಾಸಿಕ್ ಡಓಲು, ಡಿ.ಜೆಸೆಟ್ನೊಂದಿಗೆ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಿ ಕೆ.ಎನ್.ಎಸ್.ಕಲ್ಯಾಣಿಯಲ್ಲಿ ಗಣಪತಿ ವಿಸರ್ಜನೆ ಮಾಡಲಾಗುವುದುಎಂದು ಬಿ.ಜಿ.ಪ್ರದೀಪ್ ಹೇಳಿದರು.
ಸ್ವಾಗತ ಸಮಿತಿ ಅಧ್ಯಕ್ಷ ಡಾ.ಲಕ್ಷ್ಮೀಕಾಂತ್ ಮಾತನಾಡಿ, ಈ ಬಾರಿಯ ಹಿಂದೂ ಮಹಾ ಗಣಪತಿ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ.ಗಣೇಶೋತ್ಸವ ಕಾರ್ಯಕ್ರಮವನ್ನು ಎಲ್ಲರೂ ಸಂಭ್ರಮಿಸಬೇಕು.ಸಾಮಾಜಿಕ ಸಾಮರಸ್ಯವನ್ನು ಎತ್ತಿಹಿಡಿಯಬೇಕು ಎಂದು ಹೇಳಿದರು.
ಕೋರಿಮಂಜುನಾಥ್,ವೈ.ಹೆಚ್.ಹುಚ್ಚಯ್ಯ, ಬಿ.ಎಸ್. ಮಂಜುನಾಥ್, ಜಿ.ಕೆ. ಶ್ರೀನಿವಾಸ್, ಕೆ.ವೇದಮೂರ್ತಿ, ಧರ್ಮಾಧಿಕಾರಿಸೋಮಣ್ಣ, ಸ್ವಚ್ಛಮಂಜುನಾಥ್, ಕುಮಾರ್, ವಾಸವಿ, ಮಧುಸೂದನ್, ಶರತ್, ಓಂಕಾರೇಶ್ವರಿ, ವಸಂತ, ವೆಂಕಟೇಶಾಚಾರ್, ಕಟ್ವೆಲ್ರಂಗನಾಥ್, ವೆಂಕಟೇಶ್ಜೋಯಿಸ್, ಅಶೋಕ್ಕುಮಾರ್, ಕುಮಾರ್, ಪ್ರಮೋದ್, ರವೀಶ್ ಸೇರಿದಂತೆ ವಿಶ್ವ ಹಿಂದೂ ಪರಿಷದ್, ಭಜರಂಗದಳದ ಹಲವಾರು ಮುಖಂಡರು ಹಾಜರಿದ್ದರು.
– ಚಂದ್ರಚೂಡ ಕೆ.ಬಿ.
