ತುಮಕೂರು :ಒಬ್ಬರು ಹೇಳಿದ ವಿಷಯ ಮತ್ತೊಬ್ಬರಿಗೆ ತಲುಪುವಷ್ಟರಲ್ಲಿ ಅದರ ಮೂಲ ಸ್ವರೂಪವೇ ಬದಲಾಗಿ ಅಪಾರ್ಥಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ, ಯಾವುದೇ ವಿಷಯ ಅಥವಾ ಪ್ರಚೋದನೆಗಳನ್ನು ಕಣ್ಣುಮುಚ್ಚಿ ನಂಬದೆ, ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅತ್ಯಗತ್ಯ,ನಾವು ಸಾಮಾನ್ಯವಾಗಿ ಸಂತೋಷವನ್ನು ಬಾಹ್ಯ ವಸ್ತುಗಳಲ್ಲಿ ಅಥವಾ ಭವಿಷ್ಯದ ಘಟನೆಗಳಲ್ಲಿ (ಅಂಕಗಳು ಬಂದಾಗ, ವಸ್ತುಗಳನ್ನು ಪಡೆದಾಗ) ಹುಡುಕುತ್ತೇವೆ, ಭಗವದ್ಗೀತೆಯಲ್ಲಿ ತಿಳಿಸಿರುವಂತೆ ನೈಜ ಸಂತೋಷ ಮತ್ತು ಆನಂದವು ನಮ್ಮ ಆತ್ಮದ ಒಳಗಡೆಯೇ ಇದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಜಯಂತಕುಮಾರ್ ಅವರು ತಿಳಿಸಿದರು.
ನಗರದ ಗಂಗಸಂದ್ರದ ಶೇಷಾದ್ರಿಪುರಂ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಸಂಸ್ಥೆಯ ಜಂಟಿ ಆಶ್ರಯದಲ್ಲಿ “ಪೋಕ್ಸೋ ಕಾಯ್ದೆ ಮತ್ತು ಬಾಲ ನ್ಯಾಯ ಕಾಯ್ದೆ” ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಾಲಾ ಕಾಲೇಜು ಮಕ್ಕಳು ಅಪರಾಧಗಳ ಬಗ್ಗೆ ಪೋಲಿಸರಿಗೆ, ಪ್ರಾಂಶುಪಾಲರು ಅಥವಾ ಶಿಕ್ಷಕರಿಗೆ ಧೈರ್ಯವಾಗಿ ವರದಿ ಮಾಡಬೇಕು ಅಥವಾ ಪೋಲಿಸ್ ಠಾಣೆಗೆ ಹೋಗಲು ಹೆದರಿಕೆಯಿದ್ದರೆ 1098 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ದೂರು ನೀಡಿದವರ ಗುರುತನ್ನು ಗುಪ್ತವಾಗಿಡಲಾಗುತ್ತದೆ,ಸೆ.19ರಂದು ಲೋಕ್ ಅದಾಲತ್ ಇದ್ದು ಕಕ್ಷಿದಾರರು,ವಕೀಲರು ಎಲ್ಲರೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ರಾಜಿ ಆಗಿ ಕೇಸುಗಳನ್ನು ಮುಕ್ತಾಯಗೊಳಿಸಿಕೊಳ್ಳಿ ಎಂದು ಮನವಿ ಮಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಲೋಕೇಶಧನಪಾಲಹವಲೆ ಅವರು ಸುದೀರ್ಘವಾಗಿ ಮಾತನಾಡಿ “ನಮ್ಮ ದೇಶದಲ್ಲಿ ಯಾವುದೇ ಕಾಯ್ದೆ ಜಾರಿಗೆ ಬರಬೇಕಾದರೂ ಅದರ ಹಿಂದೆ ಒಂದು ಸದುದ್ದೇಶವಿರುತ್ತದೆ. ನಮ್ಮ ಸಂವಿಧಾನದ ಪರಿಚ್ಛೇದ 39ರ ಪ್ರಕಾರ, ಎಲ್ಲರಿಗೂ ಸಮಾನ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಭಾರತ ಸರ್ಕಾರ 1987ರಲ್ಲಿ ‘ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ’ಯನ್ನು ಜಾರಿಗೆ ತಂದಿದ್ದು ರಾಷ್ಟ್ರೀಯ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಾನೂನು ಸೇವೆಗಳ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ಹಣವಿದ್ದವರಿಗೆ ಮಾತ್ರ ಕೋರ್ಟ್-ನ್ಯಾಯ’ ಎಂಬ ತಪ್ಪು ಭಾವನೆಯನ್ನು ಹೋಗಲಾಡಿಸಿ, ಉಚಿತ ವಕೀಲರ ಸೇವೆ ಒದಗಿಸುವುದು, ಮಹಿಳೆಯರು, ಮಕ್ಕಳು, ಹಿಂದುಳಿದ ವರ್ಗದವರು, ಕಾರ್ಮಿಕರು, ಆಸಿಡ್ ದಾಳಿಗೆ ಒಳಗಾದವರು, ದೌರ್ಜನ್ಯ ಸಂತ್ರಸ್ತರು ಹಾಗೂ ವಾರ್ಷಿಕ ಆದಾಯ 3 ಲಕ್ಷ ರೂಪಾಯಿಗಿಂತ ಕಡಿಮೆ ಇರುವ ಪ್ರತಿಯೊಬ್ಬ ನಾಗರಿಕರು ಉಚಿತ ವಕೀಲರ ಸೇವೆ ಪಡೆದು ನ್ಯಾಯಾಲಯದಲ್ಲಿ ನ್ಯಾಯ ಪಡೆಯಬಹುದು
ಈ ಸಂದರ್ಭದಲ್ಲಿ 8ನೇ ಅಧಿಕ ನ್ಯಾಯಾಲಯದ ನ್ಯಾಯಾಧೀಶರಾದ ಅರ್ಪಿತಾ.ಕೆ.ವಿ., ಸಂಪನ್ಮೂಲ ವ್ಯಕ್ತಿ ಹಾಗೂ ಪ್ಯಾನಲ್ ವಕೀಲರಾದ ಶ್ರೀಮತಿಆಶಾ.ಕೆ.ಎಸ್., ಪಿಎಲ್ವಿ ಕೆ.ಎಂ. ರಾಮಕೃಷ್ಣಯ್ಯ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಮಹಾಂತೇಶ.ಹೆಚ್.ಬಿ., ಕಾಲೇಜಿನ ಪ್ರಾಧ್ಯಾಪಕ ವೃಂದ, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
