ಕೊರಟಗೆರೆ: ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅರಿತು, ಸರ್ಕಾರದ ಸೇವೆಗಳನ್ನು ಜನರ ಬಳಿಗೆ ಕೊಂಡೊಯ್ಯುವ ಉದ್ದೇಶದಿಂದ ಪ್ರಜಾ ಸೇವಾ ಅಭಿಯಾನ ಆರಂಭಿಸಲಾಗಿದೆ. ಸಾರ್ವಜನಿಕರಿಂದ ಸ್ವೀಕರಿಸುವ ಅರ್ಜಿಗಳಲ್ಲಿ ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ತಿಳಿಸಿದರು.
ಕೊರಟಗೆರೆ ತಾಲ್ಲೂಕಿನ ಕೋಳಾಲ ಗ್ರಾಮದ ಪಾರ್ವತಿ ಪರಮೇಶ್ವರ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಆಯೋಜಿಸಿದ್ದ ಪ್ರಜಾ ಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.

ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಅವರ ಮಾರ್ಗದರ್ಶನದಲ್ಲಿ ಕೋಳಾಲದಲ್ಲಿ ಪ್ರಜಾ ಸೇವಾ ಅಭಿಯಾನ ಆಯೋಜಿಸಲಾಗಿದ್ದು, ಸಾರ್ವಜನಿಕರಿಂದ 150ಕ್ಕೂ ಹೆಚ್ಚು ಅರ್ಜಿಗಳು ಸ್ವೀಕರಿಸಲಾಗಿದೆ. ಮುಖ್ಯವಾಗಿ ಭೂಮಾಪನ ಇಲಾಖೆಗೆ ಸಂಬಂಧಿಸಿದ ತತ್ಕಾಲ್ ಪೋಡಿ, ದುರಸ್ತಿ, ತಿದ್ದುಪಡಿ ಹಾಗೂ ಆರ್ಆರ್ಟಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಸಾರ್ವಜನಿಕರು ಮನವಿ ಸಲ್ಲಿಸಿದ್ದಾರೆ. ಕಳೆದ ಮೂರು–ನಾಲ್ಕು ತಿಂಗಳಿಂದ ರೈತರಿಗೆ ದಿನಕ್ಕೆ ಸುಮಾರು ಏಳು ಗಂಟೆಗಳಷ್ಟೇ ಪಂಪ್ಸೆಟ್ ವಿದ್ಯುತ್ ಪೂರೈಕೆಯಾಗುತ್ತಿದ್ದು, ಹೆಚ್ಚಿನ ಅವಧಿಗೆ ವಿದ್ಯುತ್ ನೀಡುವಂತೆ ರೈತರು ಮನವಿ ಮಾಡಿದ್ದಾರೆ ಎಂದರು.
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದರೆ ಜನರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಲು ಸಾಧ್ಯವಾಗುತ್ತದೆ. ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಮೂಲಕ ಐತಿಹಾಸಿಕವಾಗಿ ಸುಮಾರು 25 ಸಾವಿರ ಬಡ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ ವಿತರಿಸಲಾಗಿದೆ. 6 ಸಾವಿರ ಬಡ ಕುಟುಂಬಗಳ ಪೋಡಿ ಕಾರ್ಯ ಪೂರ್ಣಗೊಂಡಿದ್ದು, ಕಂದಾಯ ಹಾಗೂ ಭೂಮಾಪನ ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಪಡಿತರ ಚೀಟಿಯ ಇ-ಕೆವೈಸಿಗೆ ಸಂಬಂಧಿಸಿದಂತೆ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ವಾರದೊಳಗೆ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ
ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.25ರಷ್ಟು ಮಳೆ ಕಡಿಮೆಯಾಗಿದ್ದು, ಜಿಲ್ಲೆಯ 10 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಕುಡಿಯುವ ನೀರು ಸೇರಿದಂತೆ ವಿವಿಧ ಕಾಮಗಾರಿಗಳಿಗೆ ₹15 ಕೋಟಿ ಅನುದಾನ ಬಿಡುಗಡೆಯಾಗಿದೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲೆಗೆ ₹5 ಕೋಟಿ ನೀಡಿದ್ದು, ಅದನ್ನು ಕುಡಿಯುವ ನೀರಿನ ನಿರ್ವಹಣೆಗೆ ಬಳಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ತುಮುಲ್ ವತಿಯಿಂದ ರೈತರಿಗೆ ಮಿನಿ ಕಿಟ್ಗಳನ್ನು ವಿತರಿಸಲಾಗುತ್ತಿದ್ದು, ಪಶುಸಂಗೋಪನಾ ಇಲಾಖೆಯಿಂದಲೂ ರಾಜ್ಯಾದ್ಯಂತ ಹಸುಗಳಿಗೆ ಮಿನಿ ಕಿಟ್ಗಳನ್ನು ವಿತರಿಸಲಾಗುತ್ತಿದೆ ಎಂದರು.
ಕೋಳಾಲಕ್ಕೆ 100 ಹಾಸಿಗೆ ಆಸ್ಪತ್ರೆ ಬೇಡಿಕೆ
ಕೋಳಾಲ ಹೋಬಳಿ ವ್ಯಾಪ್ತಿಯಲ್ಲಿ ನೂರಾರು ಗ್ರಾಮಗಳು ಇರುವ ಹಿನ್ನೆಲೆಯಲ್ಲಿ ಹೋಬಳಿ ಕೇಂದ್ರದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು. ಇದರೊಂದಿಗೆ ರೈತರಿಗೆ ವಿದ್ಯುತ್ ಸಮಸ್ಯೆ, ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಎದುರಾಗುತ್ತಿರುವ ಸರ್ವರ್ ಸಮಸ್ಯೆ, ಗೋಶಾಲೆ ಆರಂಭ, ತತ್ಕಾಲ್ ಪೋಡಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ 150ಕ್ಕೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದರು.
ಎಡಿಎಲ್ಆರ್ಗೆ ಜಿಲ್ಲಾಧಿಕಾರಿ ತರಾಟೆ
ಸಂಕೇನಹಳ್ಳಿ ಗ್ರಾಮದ ಸರ್ವೇ ನಂ.5/3ರಲ್ಲಿ ತತ್ಕಾಲ್ ಪೋಡಿ ಮಾಡಿಕೊಡುವಂತೆ ರೈತ ನರಸಿಂಹರಾಜು ಅವರು 2022ರ ಜುಲೈ 7ರಂದು ಭೂಮಾಪನ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ನಾಲ್ಕು ವರ್ಷ ಕಳೆದರೂ ಸಮಸ್ಯೆ ಬಗೆಹರಿಯದೆ ರೈತರನ್ನು ಕಚೇರಿಗೆ ಅಲೆದಾಡಿಸಿರುವುದು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಎಡಿಎಲ್ಆರ್ ಭುವನ್ ಸುಂದರ್ ಅವರನ್ನು ತರಾಟೆಗೆ ತೆಗೆದುಕೊಂಡು, ಪ್ರಕರಣವನ್ನು ಶೀಘ್ರವಾಗಿ ಬಗೆಹರಿಸುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಬಿ.ವಿ. ಆಶ್ವಿಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ತಹಶೀಲ್ದಾರ್ ಮಂಜುನಾಥ್, ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶ್ ಮೂರ್ತಿ, ತಾಲ್ಲೂಕು ಪಂಚಾಯಿತಿ ಇಒ ಅಪೂರ್ವ, ಗಿರೀಶ್, ಕೆಂಪಣ್ಣ, ಮಾಜಿ ಅಧ್ಯಕ್ಷ ಗಿರೀಶ್, ಭದ್ರಣ್ಣ, ಚಂದ್ರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ವಿಧವಾ ವೇತನ ಮಂಜೂರು ಪತ್ರಗಳನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್ ವಿತರಿಸಿದರು.
ವರದಿ: ನರಸಿಂಹಯ್ಯ ಹೊಸಕೋಟೆ
