ಹಾಸನ: ಕೆಎಸ್ಆರ್ಟಿಸಿ ಬಸ್ವೊಂದು ಸ್ಕೂಟರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಗೃಹಿಣಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಹಾಸನ ನಗರದ ಎನ್.ಆರ್. ವೃತ್ತದಲ್ಲಿ ನಡೆದಿದೆ.
ಮೃತರನ್ನು ಹಾಸನ ತಾಲೂಕಿನ ದೊಡ್ಡಆಲದಹಳ್ಳಿ ಗ್ರಾಮದ ಅಪರ್ಣಾ ಡಿ.ಜೆ. (31) ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಪತಿ ಯೋಗೀಶ್ ಅವರೊಂದಿಗೆ ವಾಸವಾಗಿದ್ದ ಅಪರ್ಣಾ, ಗೌರಿ ಹಬ್ಬದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ತವರು ಮನೆಗೆ ಆಗಮಿಸಿದ್ದರು ಎನ್ನಲಾಗಿದೆ.
ಇಂದು ಸ್ನೇಹಿತೆ ರಕ್ಷಿತಾ ಅವರೊಂದಿಗೆ ಸ್ಕೂಟರ್ನಲ್ಲಿ ಆಸ್ಪತ್ರೆಗೆ ಬಂದಿದ್ದ ಅಪರ್ಣಾ, ಕೆಲಸ ಮುಗಿಸಿಕೊಂಡು ಊರಿಗೆ ವಾಪಸ್ ತೆರಳುತ್ತಿದ್ದ ವೇಳೆ ಎನ್.ಆರ್. ವೃತ್ತದ ಬಳಿ ಅಪಘಾತ ಸಂಭವಿಸಿದೆ.
ವೇಗವಾಗಿ ಬಂದ ಕೆಎಸ್ಆರ್ಟಿಸಿ ಬಸ್ ಸ್ಕೂಟರ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ ಅಪರ್ಣಾ ಹಾಗೂ ರಕ್ಷಿತಾ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಅಪರ್ಣಾ ಬಸ್ನ ಚಕ್ರಕ್ಕೆ ಸಿಲುಕಿಕೊಂಡಿದ್ದು, ಬಸ್ ಅವರನ್ನು ಕೆಲದೂರ ಎಳೆದೊಯ್ದಿದೆ ಎನ್ನಲಾಗಿದೆ.

ತಕ್ಷಣ ಸ್ಥಳದಲ್ಲಿದ್ದ ಆಟೋ ಚಾಲಕ ಕುಮಾರ್ ಅವರು ಅಪರ್ಣಾ ಅವರನ್ನು ಬಸ್ನ ಚಕ್ರದಿಂದ ಹೊರತೆಗೆದು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅಪರ್ಣಾ ಮೃತಪಟ್ಟಿದ್ದರು.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ಧಾವಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಪಘಾತದ ವೇಳೆ ಅಪರ್ಣಾ ಧರಿಸಿದ್ದ ಎರಡು ಎಳೆ ಚಿನ್ನದ ಮಾಂಗಲ್ಯ ಸರ ಕಳೆದುಹೋಗಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.
ಬಸ್ನ ಬ್ರೇಕ್ ಹಿಡಿಯದ ಕಾರಣ ಅಪಘಾತ ಸಂಭವಿಸಿದೆ ಎಂದು ಚಾಲಕ ಹೇಳಿರುವುದಾಗಿ ತಿಳಿದುಬಂದಿದೆ. ಈ ಕುರಿತು ಹಾಸನ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
