ಕೆ.ಆರ್.ಪೇಟೆ: ಗೌರಿ–ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ಕಚೇರಿಗೆ ಮೂರನೇ ದಿನವೂ ಗ್ರಾಮೀಣ ಭಾಗದ ಯುವಕರ ದಂಡೇ ಹರಿದುಬಂದಿತು.
ತಾಲೂಕಿನ ಕಸಬಾ, ಅಕ್ಕಿಹೆಬ್ಬಾಳು, ಶೀಳನೆರೆ, ಬೂಕನಕೆರೆ, ಸಂತೇಬಾಚಹಳ್ಳಿ ಹಾಗೂ ಕಿಕ್ಕೇರಿ ಹೋಬಳಿಗಳ ವಿವಿಧ ಗ್ರಾಮಗಳ ವಿಘ್ನ ವಿನಾಯಕ ಯುವಕ ಬಳಗದ ನೂರಾರು ಪದಾಧಿಕಾರಿಗಳು ಹಾಗೂ ಸಾವಿರಾರು ಯುವಕರು ತಮ್ಮ ಗ್ರಾಮಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ನೆರವು ಕೋರಿ ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ಆಗಮಿಸಿದ್ದರು. ಯುವಕರ ಸಂಖ್ಯೆಯಿಂದ ಟ್ರಸ್ಟ್ ಕಚೇರಿ ಆವರಣ ಜನಜಂಗುಳಿಯಿಂದ ತುಂಬಿ ತುಳುಕುತ್ತಿತ್ತು.

ಈ ಸಂದರ್ಭದಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರು ಯುವಕರನ್ನು ಆತ್ಮೀಯವಾಗಿ ಮಾತನಾಡಿಸಿ, ಗೌರಿ–ಗಣೇಶೋತ್ಸವ ಆಚರಣೆಗೆ ಆರ್ಥಿಕ ನೆರವು ವಿತರಿಸಿದರು.
ಗಣೇಶ ಹಬ್ಬವೆಂದರೆ ಕೇವಲ ಡಿಜೆ ಸಂಭ್ರಮಕ್ಕೆ ಸೀಮಿತವಾಗಬಾರದು. ಇದು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ. ಪರಿಸರಕ್ಕೆ ಹಾನಿಕಾರಕ ಪಿಒಪಿ ಗಣೇಶ ಮೂರ್ತಿಗಳನ್ನು ಬಳಸದೆ, ಮಣ್ಣಿನ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಯುವಕರಿಗೆ ಕರೆ ನೀಡಿದರು.
ಮೂರನೇ ದಿನವೂ ಬೆಳಗ್ಗೆಯಿಂದ ಸಂಜೆಯವರೆಗೆ ಸ್ಥಳದಲ್ಲೇ ಇದ್ದು ಪ್ರತಿಯೊಬ್ಬರಿಗೂ ನೆರವು ನೀಡಿದ ಮಲ್ಲಿಕಾರ್ಜುನ್ ಅವರ ಸರಳತೆ ಹಾಗೂ ಸೇವಾ ಮನೋಭಾವಕ್ಕೆ ಯುವಕರು ಮೆಚ್ಚುಗೆ ವ್ಯಕ್ತಪಡಿಸಿದರು.

ದೂರದ ಗ್ರಾಮಗಳಿಂದ ಆಗಮಿಸಿದ್ದ ಯುವಕರಿಗೆ ಬೆಳಗ್ಗೆ ಬಿಸಿ ತಿಂಡಿ, ಮಧ್ಯಾಹ್ನ ಊಟ ಹಾಗೂ ಸಂಜೆ ಟೀ–ತಿಂಡಿಯ ವ್ಯವಸ್ಥೆ ಮಾಡುವ ಮೂಲಕ ಅನ್ನದಾನದ ಮೂಲಕವೂ ಮಾನವೀಯತೆ ಮೆರೆದರು.
ಈ ಸಂದರ್ಭದಲ್ಲಿ ಶೀಳನೆರೆ, ಕಸಬಾ, ಅಕ್ಕಿಹೆಬ್ಬಾಳು, ಬೂಕನಕೆರೆ, ಕಿಕ್ಕೇರಿ ಹಾಗೂ ಕೆ.ಆರ್.ಪೇಟೆ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಶ್ರೀ ಗೌರಿ–ಗಣೇಶ ಯುವಕರ ಬಳಗದ ಪದಾಧಿಕಾರಿಗಳು, ಮುಖಂಡರು ಹಾಗೂ ನೂರಾರು ಯುವಕರು ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ: ಮನು ಮಾಕವಳ್ಳಿ, ಕೆ.ಆರ್.ಪೇಟೆ
