ಹಾಸನ: ಪುಸ್ತಕ ಓದುವ ಹವ್ಯಾಸವನ್ನು ಜನಮನಕ್ಕೆ ತಲುಪಿಸುವುದು ಹಾಗೂ ಪ್ರತಿಯೊಂದು ಮನೆಯಲ್ಲೂ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವುದು ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮದ ಆಶಯವಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ. ಕುಶಾಲ ಬರಗೂರು ತಿಳಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಹಾಸನ ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ ಹಾಸನದ ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್ ಅವರ ನಿವಾಸದಲ್ಲಿ ಆಯೋಜಿಸಿದ್ದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪುಸ್ತಕ ಓದುವ ಮೂಲಕ ಹೊಸ ತಲೆಮಾರಿನ ಯುವಕರಲ್ಲಿ ವ್ಯಕ್ತಿತ್ವ ವಿಕಸನವಾಗುವುದರ ಜೊತೆಗೆ ಉದ್ಯೋಗ, ಕೌಟುಂಬಿಕ, ಸಾಮಾಜಿಕ, ರಾಜಕೀಯ ಹಾಗೂ ರಾಷ್ಟ್ರೀಯ ಪ್ರಜ್ಞೆ ಜಾಗೃತಿಗೊಳ್ಳುತ್ತದೆ. ಪ್ರತಿಯೊಂದು ಮನೆಯಲ್ಲೂ ಪುಸ್ತಕ ಚರ್ಚೆ ನಡೆಯುವಂತಾಗಬೇಕು. ಆ ಮೂಲಕ ಜೀವನದಲ್ಲಿ ಧನಾತ್ಮಕ ಚಿಂತನೆಗಳನ್ನು ಬಿತ್ತಿ, ಶಿಕ್ಷಣ ಹಾಗೂ ಜಾಗೃತಿಯನ್ನು ಮೂಡಿಸುವುದು ಅಗತ್ಯವಾಗಿದೆ ಎಂದರು.
ಪುಸ್ತಕವು ಏಕಮುಖಿ ಜೀವನ ಪಾಠವನ್ನು ಬೋಧಿಸುವುದಿಲ್ಲ. ಬದಲಾಗಿ ಜೀವನದ ವಿವಿಧ ಆಯಾಮಗಳನ್ನು ಪರಿಚಯಿಸುವ ಬಹುಮುಖಿ ಪಾಠಗಳನ್ನು ನೀಡುತ್ತದೆ. ಆದ್ದರಿಂದ ಪುಸ್ತಕ ಓದುವ ಹಾಗೂ ಪುಸ್ತಕ ಪ್ರೀತಿಯ ಸಂಸ್ಕೃತಿಯನ್ನು ಜನಮನಕ್ಕೆ ತಲುಪಿಸುವುದು ‘ಮನೆಗೊಂದು ಗ್ರಂಥಾಲಯ’ದ ಮುಖ್ಯ ಆಶಯವಾಗಿದೆ ಎಂದು ಹೇಳಿದರು.

ಮನಸ್ಸನ್ನು ಅರಿಯುವುದು ಅಗತ್ಯ
‘ಮನಸ್ಸು’ ಕೃತಿಯ ಲೇಖಕಿ ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್ ಮಾತನಾಡಿ, ಈ ಭೂಮಿಯಲ್ಲಿ ಗಂಡು–ಹೆಣ್ಣು ಎಂಬ ಭೇದವಿಲ್ಲ. ಮನಸ್ಸಿನ ಸತ್ಯಾಸತ್ಯತೆಗಳನ್ನು ಅನಾವರಣಗೊಳಿಸುವ ಪರಿಪೂರ್ಣ ಕಾರ್ಯವನ್ನು ಸಾಹಿತ್ಯದ ಮೂಲಕ ಮಾಡಲು ಸಾಧ್ಯ ಎಂದರು.
ನಾವು ನಮ್ಮ ಮನಸ್ಸು ಮತ್ತು ಶರೀರವನ್ನು ಅರಿತುಕೊಂಡರೆ, ಮತ್ತೊಬ್ಬರ ದೃಷ್ಟಿಕೋನ ಹಾಗೂ ಉದ್ದೇಶಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಧ್ಯಾನದ ವಿಶೇಷತೆಯನ್ನು ತಿಳಿಸುವ ಲೇಖಕಿಯ ಅನುಭವಗಳು ಕೃತಿಯಲ್ಲಿ ವಿಶಿಷ್ಟವಾಗಿ ಮೂಡಿಬಂದಿವೆ. ಲೇಖಕಿ ತಮ್ಮ ಕುಟುಂಬದೊಂದಿಗೆ ಹಿಮಾಚಲ ಪ್ರದೇಶಕ್ಕೆ ಪ್ರವಾಸ ತೆರಳಿದ್ದ ಸಂದರ್ಭದಲ್ಲಿ ಮನಾಲಿಯ ಹಿಡಿಂಬಾ ದೇಗುಲದಿಂದ ರೋಹ್ತಾಂಗ್ ಪಾಸ್ನ ಪರ್ವತ ಪ್ರದೇಶದತ್ತ ತೆರಳುವಾಗ ಉಸಿರಾಟದ ತೊಂದರೆಗೆ ಸಿಲುಕಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆ ಸಂದರ್ಭದಲ್ಲಿ ಹಿಮಚ್ಛಾದಿತ ಬೆಟ್ಟಗಳ ಸೌಂದರ್ಯವನ್ನು ವೀಕ್ಷಿಸಿದ ಅನುಭವ ಆಶ್ಚರ್ಯ ಮೂಡಿಸುತ್ತದೆ ಎಂದು ಹೇಳಿದರು.

ಲೇಖಕಿ ಕೆ.ಟಿ. ಜಯಶ್ರೀ ಕೃತಿಯನ್ನು ವಿಮರ್ಶಿಸಿ, ಮನುಷ್ಯನ ಮನಸ್ಸಿನ ವ್ಯಾಪ್ತಿ ಬಹಳ ಆಳವಾದ ಮತ್ತು ವಿಶಾಲವಾದುದು. ನಾವು ಅಂತರ್ಮುಖಿಯಾಗಿ ನಮ್ಮೊಂದಿಗೆ ನಡೆಸಿಕೊಳ್ಳುವ ಸಂವಾದವನ್ನು ಕೃತಿ ವಿಶ್ಲೇಷಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕವಿ ಎನ್.ಎಲ್. ಚನ್ನೇಗೌಡ, ಅರಕಲಗೂಡು ಮಧುಸೂದನ್, ಯು.ಜೆ. ಮಲ್ಲಿಕಾರ್ಜುನ, ಸಮುದ್ರವಳ್ಳಿ ವಾಸು, ಧರ್ಮರಾಜ ಕಡಗ, ಕಾಳಮೈಸೂರು, ವಿವೇಕ್ ಪೊನ್ನಪ್ಪ, ಶಿವು, ವಿಪುಲ್ ಪೂವಯ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ರೀಮತಿ ಪದ್ಮಶ್ರೀ ಪ್ರಾರ್ಥಿಸಿದರು. ಹಾಸನ ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ಗೊರೂರು ಅನಂತರಾಜು ಸ್ವಾಗತಿಸಿದರು. ಸಮಿತಿ ಸದಸ್ಯೆ ಶ್ರೀಮತಿ ಸುವರ್ಣ ಸಿ. ವಂದಿಸಿದರು.
