ಸಕಲೇಶಪುರ: ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸ್ನೇಹಿತರೊಂದಿಗೆ ಸಕಲೇಶಪುರಕ್ಕೆ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಮೂಲದ ಯುವತಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಯುವತಿ ಸಿಎ ವ್ಯಾಸಂಗ ಪೂರ್ಣಗೊಳಿಸಿ ಉದ್ಯೋಗದ ಹುಡುಕಾಟದಲ್ಲಿದ್ದರು ಎನ್ನಲಾಗಿದೆ. ಶುಕ್ರವಾರ ಮೂವರು ಸ್ನೇಹಿತೆಯರು ಹಾಗೂ ಇಬ್ಬರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುತ್ತಿರುವುದಾಗಿ ಯುವತಿ ತನ್ನ ತಂದೆ-ತಾಯಿಗೆ ಮಾಹಿತಿ ನೀಡಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಶನಿವಾರ, ಭಾನುವಾರ ಹಾಗೂ ಸೋಮವಾರ ಸಕಲೇಶಪುರದ ವಿವಿಧ ಪ್ರವಾಸಿ ತಾಣಗಳಿಗೆ ಸ್ನೇಹಿತರೊಂದಿಗೆ ತೆರಳಿದ್ದ ಯುವತಿ, ಪ್ರವಾಸದ ವೇಳೆ ತೆಗೆದ ಕೆಲವು ಫೋಟೋಗಳನ್ನು ತಾಯಿಗೆ ಹಂಚಿಕೊಂಡಿದ್ದರು ಎನ್ನಲಾಗಿದೆ.
ಪ್ರವಾಸದ ವೇಳೆ ಸಕಲೇಶಪುರ ಸಮೀಪದ ಲಾಡ್ಜ್ವೊಂದರಲ್ಲಿ ಮೂವರು ತಂಗಿದ್ದರು ಎಂದು ತಿಳಿದುಬಂದಿದೆ. ಆರು ಮಂದಿ ಕಾರಿನಲ್ಲಿ ಪ್ರವಾಸಕ್ಕೆ ತೆರಳುತ್ತಿರುವುದಾಗಿ ಯುವತಿ ಕುಟುಂಬದವರಿಗೆ ತಿಳಿಸಿದ್ದರು. ಆದರೆ ಬಳಿಕ ಮೂವರು ಸ್ನೇಹಿತರು ಆಟೊದಲ್ಲಿ ಬಂದಿರುವುದು ಕುಟುಂಬದವರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಎರಡು ದಿನಗಳ ಕಾಲ ಯುವತಿ ಫೋನ್ ಕರೆಗಳನ್ನು ಸ್ವೀಕರಿಸಿರಲಿಲ್ಲ ಎನ್ನಲಾಗಿದೆ. ಬಳಿಕ ‘ಆರಾಮವಾಗಿದ್ದೇನೆ, ಬೇಗ ವಾಪಸ್ ಬರುತ್ತೇನೆ’ ಎಂದು ಯುವತಿ ತಾಯಿಗೆ ಸಂದೇಶ ಕಳುಹಿಸಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಆದರೆ ಇದೀಗ ಯುವತಿ ಮೃತಪಟ್ಟಿರುವ ವಿಚಾರ ತಿಳಿದುಬಂದಿದ್ದು, ಮಗಳ ಸಾವಿಗೆ ನಿಖರವಾಗಿ ಏನಾಗಿದೆ ಎಂಬುದು ನಮಗೆ ತಿಳಿದಿಲ್ಲ ಎಂದು ತಾಯಿ ಕಣ್ಣೀರಿಟ್ಟಿದ್ದಾರೆ. ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡಿದ್ದೇವೆ ಎಂದು ಕುಟುಂಬದವರು ದುಃಖ ವ್ಯಕ್ತಪಡಿಸಿದ್ದಾರೆ.
ಯುವತಿಯ ಸಾವಿನ ಕುರಿತು ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಯುವತಿಯೊಂದಿಗೆ ಪ್ರವಾಸದಲ್ಲಿದ್ದರು ಎನ್ನಲಾಗುತ್ತಿರುವ ಇಬ್ಬರು ಯುವಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸಕಲೇಶಪುರ ಗ್ರಾಮಾಂತರ ಪೊಲೀಸರು ತನಿಖೆ ಮುಂದುವರಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ತನಿಖೆಯ ಬಳಿಕವೇ ಸಾವಿನ ನಿಖರ ಕಾರಣ ಸ್ಪಷ್ಟವಾಗಬೇಕಿದೆ.
