ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಬಿ. ಚೋಳೇನಹಳ್ಳಿ ಗ್ರಾಮದಲ್ಲಿ ಏಕದಂತ ಗೆಳೆಯರ ಬಳಗದ ವತಿಯಿಂದ ಗಣೇಶ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು.
ಬೆಂಗಳೂರಿನ ನಾಗರಬಾವಿಯ ಯೂನಿಟಿ ಲೈಫ್ಲೈನ್ ಆಸ್ಪತ್ರೆಯ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡು ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದರು. ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ದೇಹದ ವಿವಿಧ ಅಂಗಾಂಗಗಳ ತಪಾಸಣೆ ನಡೆಸಿ, ಸಣ್ಣಪುಟ್ಟ ಕಾಯಿಲೆಗಳಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಿ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು.
ಬೆಂಗಳೂರಿನ ಶ್ರೀ ಸಾಯಿ ನೇತ್ರಾಲಯ ಹಾಗೂ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವತಿಯಿಂದ ಉಚಿತ ಕಣ್ಣಿನ ತಪಾಸಣೆ ನಡೆಸಿ, ಅಗತ್ಯವಿದ್ದವರಿಗೆ ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಜೀವ ಸ್ವಯಂ ರಕ್ತನಿಧಿ ಕೇಂದ್ರದ ವತಿಯಿಂದ ಸಾರ್ವಜನಿಕರಿಗೆ ರಕ್ತದ ಗುಂಪು ಪರೀಕ್ಷೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮದ ಯುವಕರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.

ಯೂನಿಟಿ ಲೈಫ್ಲೈನ್ ಆಸ್ಪತ್ರೆಯ ಡಾ. ಮಂಜುನಾಥ್ ಮಾತನಾಡಿ, ಗ್ರಾಮೀಣ ಭಾಗದ ಬಡ ಜನರಿಗೆ ಅನುಕೂಲವಾಗುವಂತೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಶಸ್ತ್ರಚಿಕಿತ್ಸೆ ಸೇರಿದಂತೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಿದ್ದು, ಮುಂದಿನ ದಿನಗಳಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಆರೋಗ್ಯ ಶಿಬಿರಗಳನ್ನು ನಡೆಸಲಾಗುವುದು ಎಂದರು. ಗ್ರಾಮದ ವೇಣು ಅವರ ವಿಶೇಷ ಕಾಳಜಿಯಿಂದ ಈ ಶಿಬಿರವನ್ನು ಆಯೋಜಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಉತ್ತೇನಹಳ್ಳಿ ಸಾಗರ್ ಮಾತನಾಡಿ, ಶ್ರವಣಬೆಳಗೊಳ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ಜನರು ಇಂತಹ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು. ಉಚಿತ ಆರೋಗ್ಯ ಶಿಬಿರ ಆಯೋಜಿಸಿದ ಏಕದಂತ ಗೆಳೆಯರ ಬಳಗ ಹಾಗೂ ಯೂನಿಟಿ ಲೈಫ್ಲೈನ್ ಆಸ್ಪತ್ರೆಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ತಾಲೂಕಿನ ಇತರೆ ಗ್ರಾಮಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಯುವಕರಿಗೆ ಪ್ರೇರಣೆ ದೊರೆಯಲಿ ಎಂದು ಆಶಿಸಿದರು.
ಶಿಬಿರದಲ್ಲಿ ಡಾ. ಸಂಜಯ್, ಡಾ. ಶಶಿಕಾಂತ್, ಡಾ. ಮೇಘ, ಡಾ. ಡಿ.ಸಿ. ಚುಕ್ಕಿ, ಡಾ. ವಿಭಾಶ್ರೀ ಗೌಡ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಏಕದಂತ ಗೆಳೆಯರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
