ಹಾಸನ: ಮಾಣಿಕ್ಯ ಪ್ರಕಾಶನ(ರಿ.), ಹಾಸನ ವತಿಯಿಂದ ಅಕ್ಟೋಬರ್ 11ರಂದು ನಗರದ ಸಂಸ್ಕೃತ ಭವನದಲ್ಲಿ ಆಯೋಜಿಸಿರುವ ಮಾಣಿಕ್ಯ ಸಂಭ್ರಮ–2026 ಹಾಗೂ 11ನೇ ರಾಜ್ಯಮಟ್ಟದ ಕವಿ-ಕಾವ್ಯ ಸಂಭ್ರಮದ ಸರ್ವಾಧ್ಯಕ್ಷರಾಗಿ ಶಿವಮೊಗ್ಗದ ಹಿರಿಯ ಸಾಹಿತಿ, ಸಂಘಟಕಿ ಹಾಗೂ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಉಪನ್ಯಾಸಕಿ ಡಾ. ಎಚ್.ಕೆ. ಹಸೀನಾ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಈ ಕುರಿತು ಮಾಣಿಕ್ಯ ಪ್ರಕಾಶನದ ಪ್ರಕಾಶಕಿ ದೀಪಾ ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಎರಡು ದಶಕಗಳಿಂದ ಕನ್ನಡ ಸಾಹಿತ್ಯ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಡಾ. ಹಸೀನಾ ಅವರು ಸಾಹಿತಿ, ವಾಗ್ಮಿ, ಹಾಡುಗಾರ್ತಿ ಹಾಗೂ ಸಂಘಟಕಿಯಾಗಿ ಗುರುತಿಸಿಕೊಂಡಿದ್ದಾರೆ. ಕವನ, ಕಥೆ, ಲಲಿತ ಪ್ರಬಂಧ, ಸಂಶೋಧನಾ ಲೇಖನ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.
ಅವರ ಪ್ರಮುಖ ಕೃತಿಗಳಲ್ಲಿ ‘ಒಲವ ಗಂಧ’, ‘ಗುಲಾಬಿ ಮತ್ತು ಪ್ರೇಮ ಪತ್ರ’, ‘ಮುಸ್ಲಿಮರ ಹಬ್ಬಗಳು ಮತ್ತು ಉರುಸುಗಳು’, ‘ಅಕ್ಷರ ಅರಿವು ಮತ್ತು ಮಹಿಳೆ’, ‘ಹದಿಹರೆಯ–ಸವಾಲುಗಳು ಮತ್ತು ಮಾರ್ಗೋಪಾಯಗಳು’, ‘ಶಿವಮೊಗ್ಗ ಜಿಲ್ಲೆಯ ಸಾಮರಸ್ಯದ ತಾಣಗಳು’ ಹಾಗೂ ‘ತಟ್ಟೆಕೆರೆ ಗ್ರಾಮದ ಪ್ರಾಚ್ಯಾವಶೇಷಗಳು’ ಸೇರಿದಂತೆ ಹಲವು ಕೃತಿಗಳು ಸೇರಿವೆ.
ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದ ಸೇವೆಗಾಗಿ ಡಾ. ಹಸೀನಾ ಅವರಿಗೆ ಅಲ್ಲಮ ಸಾಹಿತ್ಯ ಪ್ರಶಸ್ತಿ, ಡಾ. ಅಬ್ದುಲ್ ಕಲಾಂ ರಾಷ್ಟ್ರ ಪ್ರಶಸ್ತಿ, ನಾಡೋಜ ಪಾಟೀಲ ಪುಟ್ಟಪ್ಪ ಸಾಹಿತ್ಯ ಪುರಸ್ಕಾರ, ಜನ್ನ ಕಾವ್ಯ ಪ್ರಶಸ್ತಿ, ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ, ಡಾ. ಎಂ.ಎಂ. ಕಲಬುರ್ಗಿ ಸಂಶೋಧನಾ ರಾಷ್ಟ್ರೀಯ ಪ್ರಶಸ್ತಿ, ಬಸವ ಕಾಯಕ ಪ್ರಶಸ್ತಿ, ಹೆಮ್ಮೆಯ ಕನ್ನಡತಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ರಾಷ್ಟ್ರೀಯ ಗಜಲ್ ರತ್ನ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.
ಮಾಣಿಕ್ಯ ಸಂಭ್ರಮದ ಸರ್ವಾಧ್ಯಕ್ಷರಾಗಿ ಡಾ. ಎಚ್.ಕೆ. ಹಸೀನಾ ಅವರ ಆಯ್ಕೆ ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
