ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಸೆಪ್ಟೆಂಬರ್ 20ರಂದು ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ರಾಜ್ಯಮಟ್ಟದ 16ನೇ ಕನ್ನಡ ಸಾಹಿತ್ಯ–ಸಂಸ್ಕೃತಿ ಸಮ್ಮೇಳನ ಆಯೋಜಿಸಲಾಗಿದೆ.
ಬೆಳಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿರುವ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಹಿರಿಯ ಸಾಹಿತಿ ಹಾಗೂ ನಿವೃತ್ತ ತಹಶೀಲ್ದಾರ್ ಕೆ.ಎಂ. ರೇವಣ್ಣ ವಹಿಸಲಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಅವರು ‘ಆನು ಒಲಿದಂತೆ ಹಾಡುವೆ’ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು 80ನೇ ವಸಂತಕ್ಕೆ ಕಾಲಿಟ್ಟಿರುವ ಕೆ.ಎಂ. ರೇವಣ್ಣ ಅವರಿಗೆ ‘ಕುವೆಂಪು ಸಾಹಿತ್ಯ ಶ್ರೀ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ. ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ. ಬೈರಮಂಗಲ ರಾಮೇಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಪದ್ಮಶ್ರೀ ಪುರಸ್ಕೃತ ಹಿರಿಯರಾದ ಸುಮಂಗಲಿ ಸೇವಾಶ್ರಮದ ಡಾ. ಎಸ್.ಜಿ. ಸುಶೀಲಮ್ಮ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಂಸ್ಥೆಯ ಅಧ್ಯಕ್ಷ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ) ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣ, ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಲೇಖಕಿ ಇಂದಿರಾ ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಅನಿಕೇತನ ಮಾಯಣ್ಣ, ಎಂ. ತಿಮ್ಮಯ್ಯ, ಅಂಬುಜಾ ಪ್ರಕಾಶ್, ವಿ. ರೇಣುಕಾ ಪ್ರಸನ್ನ, ರಾಂ.ಕೆ. ಹನುಮಂತಯ್ಯ, ಬಿ. ಶೃಂಗೇಶ್ವರ್, ಶಾಂತಿ ವಾಸು ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಗೀತಗಾಯನ ಹಾಗೂ ನೃತ್ಯ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಸಾಹಿತ್ಯ–ಸಂಸ್ಕೃತಿ ಪ್ರಿಯರು ಆಗಮಿಸುವಂತೆ ಸಂಸ್ಥೆಯ ಕಾರ್ಯದರ್ಶಿ ಸಿ. ಹೇಮಾವತಿ ಹಾಗೂ ಸಂಚಾಲಕ ಡಾ. ಆರ್. ವಾದಿರಾಜ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
