ರಾಮನಾಥಪುರ: ಜೀವನದಲ್ಲಿ ಎದುರಾಗುವ ಕಷ್ಟ-ಸಂಕಷ್ಟಗಳನ್ನು ದೈವಭಕ್ತಿ ಹಾಗೂ ನಂಬಿಕೆಯಿಂದ ಎದುರಿಸಬೇಕು. ಪರಮಾತ್ಮನನ್ನು ಅರಿಯದಿದ್ದರೆ ಜೀವನವೇ ವ್ಯರ್ಥವಾಗುತ್ತದೆ ಎಂದು ರಾಮನಾಥಪುರ ಶ್ರೀಮದ್ ಉತ್ತರಾಧಿ ರಾಘವೇಂದ್ರಸ್ವಾಮಿ ಮಠದ ವೇ. ಕನಕಾಚಾರ್ಯರು ಹೇಳಿದರು.
ರಾಮನಾಥಪುರದ ಶ್ರೀಮದ್ ಉತ್ತರಾಧಿ ರಾಘವೇಂದ್ರಸ್ವಾಮಿ ಮಠದಲ್ಲಿ ಗುರುವಾರ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಜೀವನದಲ್ಲಿ ಪಾಲಿಸಬೇಕಾದ ನೀತಿ ಸೂತ್ರಗಳ ಕುರಿತು ಭಕ್ತರಿಗೆ ತಿಳಿಸಿದರು.

ಲಂಚ ಗೌರವವನ್ನು ಹಾಳುಮಾಡುತ್ತದೆ, ಕ್ರೋಧ ಬುದ್ಧಿಯನ್ನು ನಾಶಪಡಿಸುತ್ತದೆ, ಚಿಂತೆ ಆಯುಷ್ಯವನ್ನು ಕುಗ್ಗಿಸುತ್ತದೆ, ಅಹಂಕಾರ ಜ್ಞಾನವನ್ನು ನಾಶಪಡಿಸುತ್ತದೆ, ಪ್ರಾಯಶ್ಚಿತ್ತ ಪಾಪವನ್ನು ಕಳೆಯುತ್ತದೆ ಹಾಗೂ ಮೋಹ ಮರ್ಯಾದೆಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಎಂದು ಹೇಳಿದರು.
ಗೌರವವಿಲ್ಲದಿದ್ದರೆ ರೂಪ ವ್ಯರ್ಥ, ಗುರಿಯಿಲ್ಲದಿದ್ದರೆ ಸಾಧನೆಗೆ ಅರ್ಥವಿಲ್ಲ, ನಮ್ರತೆ ಇಲ್ಲದಿದ್ದರೆ ಪ್ರತಿಭೆ ವ್ಯರ್ಥ, ಉಪಯೋಗಿಸದಿದ್ದರೆ ಧನ ವ್ಯರ್ಥ, ಹಸಿವಿಲ್ಲದಿದ್ದರೆ ಭೋಜನ ವ್ಯರ್ಥ. ಅದೇ ರೀತಿ ಪರಮಾತ್ಮನನ್ನು ಅರಿಯದಿದ್ದರೆ ಜೀವನವೇ ವ್ಯರ್ಥ ಎಂದು ಕನಕಾಚಾರ್ಯರು ತಿಳಿಸಿದರು.
ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಶ್ರೀಮಠದ ವತಿಯಿಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
– ಕುಮಾರಸ್ವಾಮಿ ಎಂ.ಎನ್.
