ಚನ್ನರಾಯಪಟ್ಟಣ: ಒಬ್ಬರಿಗೊಬ್ಬರು ಸಹಕಾರ ನೀಡುವುದರ ಮೂಲಕವೇ ಸಹಕಾರಿ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ. ಸಹಕಾರಿ ಸಂಸ್ಥೆಗಳಲ್ಲಿ ಪ್ರಾಮಾಣಿಕತೆ ಹಾಗೂ ಉತ್ತಮ ಭಾವನೆಯೊಂದಿಗೆ ಕಾರ್ಯನಿರ್ವಹಿಸಿದಾಗ ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲು ಸಾಧ್ಯ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರಿ ತತ್ವದಡಿ ಎಲ್ಲರೂ ಸಾಗಿದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು. ರೈತರ ಅಭ್ಯುದಯಕ್ಕಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವನ್ನು ಬೆಳೆಸಿದ್ದಾರೆ. ಒಂದು ಹಂತದಲ್ಲಿ ಜಿಲ್ಲೆಯ ಸಹಕಾರಿ ಕ್ಷೇತ್ರವು ನೌಕರರಿಗೆ ಸಂಬಳ ನೀಡಲೂ ಸಾಧ್ಯವಾಗದ ಸ್ಥಿತಿಯಲ್ಲಿತ್ತು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೂಪಿಸಿದ ಪೈಲಟ್ ಯೋಜನೆಯ ಫಲವಾಗಿ ಇಂದು ಜಿಲ್ಲೆಯ ಸಹಕಾರಿ ಕ್ಷೇತ್ರವು ಸುಮಾರು ₹2 ಸಾವಿರ ಕೋಟಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದೆ. ಜಿಲ್ಲೆಯಲ್ಲಿ ₹1,300 ಕೋಟಿಗೂ ಅಧಿಕ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ ನೀಡಲಾಗಿದೆ ಎಂದು ತಿಳಿಸಿದರು.
ಸ್ಥಳೀಯ ಟಿಎಪಿಸಿಎಂಎಸ್ ಕೂಡ ಒಂದು ಹಂತದಲ್ಲಿ ನಷ್ಟದಿಂದಾಗಿ ಬಾಗಿಲು ಮುಚ್ಚುವ ಸ್ಥಿತಿಯಲ್ಲಿತ್ತು. ಸಂಘದ ಮಾಜಿ ಅಧ್ಯಕ್ಷರ ಉತ್ತಮ ಆಡಳಿತದ ಫಲವಾಗಿ ಇದೀಗ ಹಂತಹಂತವಾಗಿ ಅಭಿವೃದ್ಧಿ ಸಾಧಿಸಿದ್ದು, ₹1 ಕೋಟಿ ದುಡಿಯುವ ಬಂಡವಾಳ ಹಾಗೂ ₹70 ಲಕ್ಷ ಠೇವಣಿ ಹೊಂದಿದೆ. ₹2 ಕೋಟಿಗೂ ಹೆಚ್ಚಿನ ಆಸ್ತಿ ಸೃಷ್ಟಿಸಿ ತಾಲೂಕಿನ ಸುಮಾರು 5 ಸಾವಿರ ರೈತ ಷೇರುದಾರರ ಹಿತ ಕಾಯುತ್ತಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಸಂಘವು ₹8.28 ಲಕ್ಷ ಲಾಭ ಗಳಿಸುವುದರ ಜೊತೆಗೆ ₹15 ಲಕ್ಷ ಠೇವಣಿ ಇಟ್ಟಿರುವುದಕ್ಕೆ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಹಾಗೂ ಸಹೋದರ ಸಿ.ಎನ್. ಪುಟ್ಟಸ್ವಾಮೀಗೌಡ ಅವರು ಮಹಾಮಂಡಳದ ನಿರ್ದೇಶಕರಾದ ಬಳಿಕ ತಾಲೂಕಿಗೆ ₹94 ಲಕ್ಷ ಅನುದಾನ ದೊರೆತಿದೆ. ಇದರಲ್ಲಿ ಟಿಎಪಿಸಿಎಂಎಸ್ ಕಟ್ಟಡಗಳಿಗೆ ₹44 ಲಕ್ಷ ಹಾಗೂ ತಾಲೂಕಿನ ವಿವಿಧ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ₹40 ಲಕ್ಷ ಸಹಾಯಧನ ನೀಡಲಾಗಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಹೈನುಗಾರಿಕೆ ಮೂಲಕ ವಾರ್ಷಿಕ ಸುಮಾರು ₹400 ಕೋಟಿ ಹಣ ರೈತರ ಕೈಸೇರುತ್ತಿದೆ. ರೈತರ ಆರ್ಥಿಕ ಮೂಲವಾಗಿರುವ ಹೈನುಗಾರಿಕೆಗೆ ಕಳೆದ 25 ವರ್ಷಗಳಿಂದ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದರು.
ಸಂಘದ ಮಾಜಿ ಅಧ್ಯಕ್ಷ ಎಂ.ಆರ್. ಅನಿಲ್ಕುಮಾರ್ ಸಂಘದ ಖರ್ಚು-ವೆಚ್ಚಗಳ ವಿವರವನ್ನು ಸಭೆಯಲ್ಲಿ ಮಂಡಿಸಿ, ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕಿನ ಹಿರಿಯ ಸಹಕಾರಿಗಳಾದ ಬಿ.ಎಚ್. ಶಿವಣ್ಣ, ವಿ.ಎನ್. ರಾಜಣ್ಣ ಹಾಗೂ ಟಿಎಪಿಸಿಎಂಎಸ್ನಿಂದ ಅತಿ ಹೆಚ್ಚು ಗೊಬ್ಬರ ಖರೀದಿಸಿದ ಮೂವರು ರೈತರನ್ನು ಸನ್ಮಾನಿಸಲಾಯಿತು.
– ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಚ್.ಆರ್. ವೆಂಕಟೇಶ್ಮೂರ್ತಿ ವಹಿಸಿದ್ದರು. ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮೀಗೌಡ, ಉಪಾಧ್ಯಕ್ಷೆ ತಾರಮಣಿ ಆನಂದ್, ನಿರ್ದೇಶಕರಾದ ಕುಂಬಾರಹಳ್ಳಿ ರಮೇಶ್, ತರಬೇನಹಳ್ಳಿ ನಂಜುಂಡೇಗೌಡ, ಎಂ.ಎನ್. ಬೋರೆಗೌಡ, ಮಮತ ಜಯಣ್ಣ, ಸಿ.ಜಿ. ಜಗದೀಶ್, ತೋಟಿ ನಾಗಣ್ಣ, ನೆಟ್ಟೆಕೆರೆ ನಾಗರಾಜು, ರವಿಕುಮಾರ್ ಕುಂಬಾರಹಳ್ಳಿ, ಉಮೇಶ್, ಕಾರ್ಯದರ್ಶಿ ಸಂಧ್ಯಾ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
