ರಾಮನಾಥಪುರ- ಗುರುಗಳು ಶಿಷ್ಯರಿಗೆ ಜ್ಲಾನ, ಶಾಂತಿ, ಭಕ್ತಿ ಹಾಗೂ ಇಂತಹ ಪೂಜೆಯನ್ನು ಮಾಡಿ ಗುರುವನ್ನು ಪೂಜಿಸಬೇಕು ಅವರು ಹಾಕಿಕೊಟ್ಟ ಅವರ ತತ್ವ ಅದರ್ಶಗಳನ್ನು ಅಳವಡಿಸಿಕೊಂಡು ನಡೆಯಬೇಕು ಎಂದು ಪರಮಪೂಜ್ಯ ಜಗದ್ಗುರು ಶ್ರೀ ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯಮಹಾಸ್ವಾಮಿಜಿಯವರು ಹೇಳಿದರು.
ಸುತ್ತೂರು ರಸ್ತೆಯಲ್ಲಿರುವ ಶರಣ ಟಿ.ಟಿ. ಮಹೇಶ್ ಅವರ ತೋಟದ ನಿವಾಸದಲ್ಲಿ ಕಾಶಿ ಜಗದ್ಗುರುಗಳವರ ಪಾದಪೂಜೆ ಹಾಗೂ ರುದ್ರಾಭಿಷೇಕ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಅರ್ಶಿವಚನ ನೀಡಿದ ಕಾಶಿ ಜಗದ್ಗುರುಗಳು ನಮ್ಮ ಭಾರತೀಯ ಸಂಸ್ಕೃತಿ ಎನ್ನುವುದು, ಪುಣ್ಯಭೂಮಿಯಾದ ನಮ್ಮ ಭಾರತ ದೇಶದಲ್ಲಿ ಜನಿಸಿ, ವಿಕಾಸವಾದ ಸಂಸ್ಕೃತಿಯಾಗಿದೆ.

ಯಾರು ತಮ್ಮ ಸಂಪ್ರದಾಯದ ಮೂಲ ತಾಯಿಬೇರನ್ನು ಮತ್ತು ತಮ್ಮ ನಂಬಿಕೆಯ ಪ್ರಧಾನ ಶ್ರದ್ಧಾ ಕೇಂದ್ರವನ್ನು ಪುಣ್ಯಭೂಮಿಯಾದ ನಮ್ಮ ಭಾರತ ದೇಶದಲ್ಲಿ ಹೊಂದಿರುತ್ತಾರೋ ಅವರೆಲ್ಲರೂ ಸಹ ನಿಸ್ಸಂದೇಹವಾಗಿ ಭಾರತೀಯ ಸಂಸ್ಕೃತಿಗೆ ಸೇರಿದವರು ಅಗಿರುತ್ತಾರೆ. ಇಂತಹ ಭಾರತೀಯ ಸಂಸ್ಕೃತಿಯು ಏಕಂ ಸದ್ – ಜ್ಲಾನಿನಃ ಬಹುಧಾ ವದಂತಿ, ಸತ್ಯ ಒಂದೇ ಮಾರ್ಗಗಳು ಅನೇಕ, ಎನ್ನುವಂತೆ ಸದಾ ಜಗತ್ತಿಗೆ ವಿವಿಧತೆಯಲ್ಲಿ ಏಕತೆಯನ್ನೇ ಸಾರುತ್ತದೆ ಎಂದು ಜಗದ್ಗುರುಗಳು ತಿಳಿಸಿದರು.

ಈ ಸಂದರ್ಭದಲ್ಲಿ ಮೈಸೂರು ಜಪದಕಟ್ಟೆಮಠದ ಶ್ರೀಗಳು, ಕುದೇರುಮಠದ ಶ್ರೀಗಳು, ಸಮಾಜ ಸೇವಕರು ಟಿ.ಟಿ. ಮಹೇಶ್, ಸರ್ವಮಂಗಳಮಹೇಶ್, ಶರಣೆ ನಿಕೀತಚಂದ್ರಶೇಖರ, ಬಿ.ಎಂ. ಲತಾಚಂದನ್, ಅರಕಲಗೂಡು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಬಿ.ಅರ್. ಮಧುಕರ್ ಮುಂತಾದವರು ಉಪಸ್ಥಿರಿದ್ದರು.
– ಕುಮಾರಸ್ವಾಮಿ ಎಂ.ಎನ್.
