ಕೆ.ಆರ್.ಪೇಟೆ,ಸೆ.18: ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಹಾಗೂ ನಾಗಮಂಗಲ ತಾಲ್ಲೂಕಿನ ರೈತರಿಗೆ ಅನುಕೂಲವಾಗುವ ಗೂಡೆಹೊಸಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಶಾಸಕ ಹೆಚ್.ಟಿ.ಮಂಜು ಅವರು ಅಧಿಕಾರಿಗಳ ತಂಡದೊಂದಿಗೆ ಹೇಮಾವತಿ ನದಿಯಿಂದ ಅಘಲಯ ಗ್ರಾಮದವರೆಗೆ ವೀಕ್ಷಣೆ ಮಾಡಿದರು.
ಶಾಸಕ ಹೆಚ್.ಟಿ.ಮಂಜು, ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಶ್ರೀನಿವಾಸ್, ಹೇಮಾವತಿ ಜಲಾಶಯ ಯೋಜನೆಯ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ ಸೇರಿದಂತೆ ಕಂದಾಯ ಇಲಾಖೆ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ತಂಡದೊಂದಿಗೆ ಗೂಡೇಹೊಸಹಳ್ಳಿ ಬಳಿ ಇರುವ ಏತನೀರಾವರಿ ಯೋಜನೆಯ ಆರಂಭದ ಸ್ಥಳದಿಂದ ಅಘಲಯ ಗ್ರಾಮದ ಕೆರೆಯವರೆಗೆ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ಅಲ್ಲಲ್ಲಿ ಕೆಲವು ರೈತರು ಪೈಪ್ಲೈನ್ ಅಳವಡಿಸಲು ಕೆಲವೊಂದು ಕಾರಣಗಳಿಂದ ಅವಕಾಶ ನೀಡಿರಲಿಲ್ಲ.
ಈ ಎಲ್ಲಾ ರೈತರನ್ನು ಬೇಟಿ ಮಾಡಿದ ಶಾಸಕ ಹೆಚ್.ಟಿ.ಮಂಜು ಅವರು ಕಾಮಗಾರಿಗೆ ಅಡ್ಡಿಪಡಿಸುತ್ತಿರುವುದಕ್ಕೆ ಕಾರಣಗಳನ್ನು ತಿಳಿದುಕೊಂಡು ಅವುಗಳನ್ನು ಬಗೆಹರಿಸಿಕೊಡುವ ಭರವಸೆ ನೀಡಿ ಪೈಪ್ಲೈನ್ ಅಳವಡಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಶಾಸಕರ ಮನವಿ ಸ್ಪಂಧಿಸಿದ ರೈತರು ನೀವು ಜವಾಬ್ದಾರಿ ತೆಗೆದುಕೊಂಡು ಆದಷ್ಟು ಬೇಗ ಸೂಕ್ತ ಪರಿಹಾರ ಕೊಡಿಸಲು ಭರವಸೆ ನೀಡಿದರೆ ನಮ್ಮದೇನು ಅಭ್ಯಂತರವಿಲ್ಲ ಎಂದು ರೈತರು ತಿಳಿಸಿದರು. ತೆಂಗಿನ ಮರಗಳಿಗೆ ಸೂಕ್ತ ಪರಿಹಾರ ನೀಡುವುದಕ್ಕೆ ಮೀನಾಮೇಷ ಎಣಿಸುತ್ತಿರುವ ಗುತ್ತಿಗೆದಾರರಿಗೆ ತಿಳುವಳಿಕೆ ನೀಡಿ ಪರಿಹಾರ ಕೊಡಿಸಿ ಕಾಮಗಾರಿ ಆರಂಭಿಸಬೇಕು. ಈಗಾಗಲೇ ಪೈಪ್ಲೈನ್ ಅಳವಡಿಸಲು ಅವಕಾಶ ನೀಡಿರುವ ರೈತರಿಗೆ ಪರಿಹಾರ ಕೊಡಿಸಲು ಕ್ರಮ ವಹಿಸಬೇಕು.

ಕಾಮಗಾರಿ ಮುಗಿದ ನಂತರ ನಾವು ಪರಿಹಾರಕ್ಕಾಗಿ ಯಾರನ್ನು ಹುಡಿಕಿಕೊಂಡ ಹೋಗಬೇಕು ಅದಕ್ಕಾಗಿ ಪರಿಹಾರ ನೀಡುವವರೆವಿಗೂ ಕಾಮಗಾರಿ ಆರಂಭಕ್ಕೆ ಅಡ್ಡಿಯಾಗುತ್ತಿದೆ ಎಂಬುದು ಶಾಸಕರಿಗೆ ಮನವರಿಕೆಯಾಯಿತು. ಕೆಲವೊಂದು ಕಡೆ ಜಮೀನು ಪೌತಿ ಆಗಿರುವ ಕುಟುಂಬದ ಹಿರಿಯರ ಹೆಸರಿನಲ್ಲಿದ್ದು ಪರಿಹಾರ ಪಡೆದುಕೊಳ್ಳಲು ಪೌತಿ ಖಾತೆಯನ್ನು ಮಾಡಿಕೊಡಲು ಅಧಿಕಾರಿಗಳು ತಡ ಮಾಡುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬಂದವು. ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಪಾಂಡವಪುರ ಉಪ ವಿಭಾಗಾಧಿಕಾರಿಗಳು ತಕ್ಷಣವೇ ರೈತರಿಂದ ಸ್ಥಳದಲ್ಲಿಯೇ ಅರ್ಜಿ ಪಡೆದು ಒಂದೆರಡು ವಾರದಲ್ಲಿ ರೈತರಿಗೆ ಪೌತಿ ಖಾತೆ, ಪಹಣಿ ದೋಷ ಸರಿಪಡಿಸುವುದು. ವಿಭಾಗದಂತೆ ಖಾತೆ ಮಾಡಿಕೊಡುವ ಮೂಲಕ ಪರಿಹಾರ ಪಡೆದುಕೊಳ್ಳಲು ಅಗತ್ಯವಿರುವ ರೆವಿನ್ಯೂ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಎ.ಸಿ.ಶ್ರೀನಿವಾಸ್ ಅವರು ತಿಳಿಸಿದರು.
ಗೂಡೇಹೊಸಹಳ್ಳಿ ಏತ ನೀರಾವರಿ ಯೋಜನೆಯನ್ನು ಆರಂಭಿಸಿ ಸಂತೇಬಾಚಹಳ್ಳಿ ಹೋಬಳಿಯ ಕೆರೆಕಟ್ಟೆಗಳಿಗೆ ನೀರು ತುಂಬಿಸಿ ಮಳೆಯಾಶ್ರಿತ ಹೋಬಳಿಗೆ ಹೇಮಾವತಿ ನೀರು ಹರಿಸಬೇಕು ಎಂಬುದು ಮಾಜಿ ಸ್ಪೀಕರ್ ಕೃಷ್ಣ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಅವರ ಕನಸಸಾಗಿತ್ತು. ಸದರಿ ಯೋಜನೆಗೆ ಮೊಟ್ಟ ಮೊದಲು 1999ರಲ್ಲಿ ಶಾಸಕರಾಗಿದ್ದ ಕೆ.ಬಿ.ಚಂದ್ರಶೇಖರ್ ಅವರು ಗಾಣದಹಳ್ಳಿ ಪಿಕಪ್ ಅಥವಾ ಜನಿವಾರ ಕೆರೆಯಿಂದ ಸಂತೇಬಾಚಹಳ್ಳಿ ಹೋಬಳಿಗೆ ಏತ ನೀರಾವರಿ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲು ನೀಲನಕ್ಷೆ ತಯಾರಿಸಿ ಸರ್ವೆ ಮಾಡಿಸಿ ಸರಕಾರಕ್ಕೆ ಕಳಿಸಿದರು. ಆದರೆ ಈ ಯೋಜನೆಗೆ ಫಲಪ್ರದವಾಗಲಿಲ್ಲ.
2004ರಲ್ಲಿ ಶಾಸಕರಾಗಿ ಆಯ್ಕೆಯಾದ ಕೆ.ಆರ್.ಪೇಟೆ ಕೃಷ್ಣ ಅವರು ಗೂಡೇಹೊಸಹಳ್ಳಿ ಬಳಿಯಿಂದ ಹೇಮಾವತಿ ನದಿ ಮೂಲಕ ಏತನೀರಾವರಿ ಯೋಜನೆಗೆ ಸೂಕ್ತ ಸ್ಥಳವೆಂದು ನಿರ್ಧರಿಸಿ ಸರ್ವೆ ಮಾಡಿಸಿ ನೀಲನಕ್ಷೆ ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಯಿತು. ಆದರೆ ಸದರಿ ಯೋಜನೆಗೆ 150ಕೋಟಿಗೂ ಹೆಚ್ಚು ಅನುಧಾನಬೇಕೆಂಬ ಕಾರಣದಿಂದ ಸದರಿ ಯೋಜನೆಯನ್ನು ಆರಂಭಿಸಲು ಸಾಧ್ಯವಾಗಲಿಲ್ಲ. ನಂತರ 2008ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾದ ಕೆ.ಬಿ.ಚಂದ್ರಶೇಖರ್ ಅವರು ಗೂಡೇಹೊಸಹಳ್ಳಿ ಏತನೀರಾವರಿ ಯೋಜನೆಗೆ ಅನುಧಾನ ನೀಡಬೇಕೆಂದು ನಮ್ಮ ತಾಲ್ಲೂಕಿನವರೇ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಬೇಡಿಕೆ ಇಟ್ಟರು. ಆಗ ಯಡಿಯೂರಪ್ಪ ಅವರು ನಮ್ಮ ಪಕ್ಕಕ್ಕೆ ಬಂದರೆ ಗೂಡೇಹೊಸಹಳ್ಳಿ ಯೋಜನೆಗೆ ಅನುಧಾನ ನೀಡುವುದಾಗಿ ತಿಳಿಸಿದಾಗ, ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿಗೆ ಹೋಗದ ಕಾರಣ ಸದರಿ ಏತ ನೀರಾವರಿ ಯೋಜನೆ ನೆನೆಗುದಿಗೆ ಬಿತ್ತು. ನಾನು ಬಿಜೆಪಿಗೆ ಹೋಗಿದ್ದರೆ 2008ರಲ್ಲೇ ಕಾಮಗಾರಿ ಮುಗಿದು ಉದ್ಘಾಟನೆಯು ಸಹ ನನ್ನ ಅವಧಿಯಲ್ಲಿಯೇ ಆಗುತ್ತಿತ್ತು ಎಂದು ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಅವರು ಯೋಜನೆ ಸಂಬಂಧ ತಮ್ಮ ಪ್ರತಿಕ್ರಿಯೆ ನೀಡಿದ್ದು ಇದರ ಕ್ರೆಡಿಟ್ ಯಾರಿಗಾದರೂ ಹೋಗಲಿ ಯೋಜನೆ ಉದ್ಘಾಟನೆ ಆದರೆ ಅಷ್ಟೇ ಸಾಕು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಂತರ 2018ರಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದ ಹೆಚ್.ಡಿ.ಕುಮಾರಸ್ವಾಮಿ ಅವರು ಅಂದಿನ ಶಾಸಕ ಕೆ.ಸಿ.ನಾರಾಯಣಗೌಡ ಒತ್ತಾಯದ ಮೇರೆಗೆ 2019ರಲ್ಲಿ ಹೇಮಾವತಿ ನದಿಯಿಂದ ನೀರು ಹರಿಸುವ ಗೂಡೆಹೊಸಹಳ್ಳಿ ಏತ ನೀರಾವರಿ ಯೋಜನೆಗೆ 212ಕೋಟಿ ರೂ ಅನುಧಾನ ನೀಡಿ ಯೋಜನೆ ಕಾಮಗಾರಿಗೆ ಚಾಲನೆ ನೀಡಿದರು.
ಈ ಯೋಜನೆಗಾಗಿ ಬಳ್ಳಾರಿಯ ಖಾಸಗಿ ಕಂಪನಿಗೆ 2019ರಲ್ಲಿ ಟೆಂಡರ್ ಮೂಲಕ ಗುತ್ತಿಗೆ ನೀಡಲಾಯಿತು. 2020ರ ಜೂನ್ ತಿಂಗಳಿನಲ್ಲಿ ಕೆಲಸ ಆರಂಭಿಸಲಾಗಿತ್ತು. ಆದರೆ ಕಾಮಗಾರಿ ಆರಂಭವಾಗಿ 6ವರ್ಷಗಳು ಕಳೆಯುತ್ತಾ ಬಂದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೆ.ಸಿ.ನಾರಾಯಣಗೌಡರು ಸಚಿವರಾಗಿ ಏತನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಪೂರ್ಣ ಸಹಕಾರ ಪಡೆದು ಈಗಾಗಲೇ ಯೋಜನೆಯನ್ನು ಪೂರ್ಣಗೊಳಿಸಲು ಸಹಕಾರ ನೀಡಿದರು. ಗುತ್ತಿಗೆದಾರರಿಗೆ ಸರ್ಕಾರವು ನೀಡಲಾಗಿದ್ದ ಕಾಲಮಿತಿಯನ್ನು 2022ರ ಅಂತ್ಯದವರೆಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಕಾಲಾವಕಾಶ ನೀಡಿದರು. ಆದರೂ ಸಹ ಗುತ್ತಿಗೆದಾರರು ಸಣ್ಣ ಸಣ್ಣ ಕಾರಣ ನೀಡಿ ಇಂದಿಗೂ ಕಾಮಗಾರಿ ಪೂರ್ಣಗೊಳಿಸದೇ ಇರುವುದು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ.
ಗುತ್ತಿಗೆದಾರರು ಈಗ ಮತ್ತೆ ಕಾಮಗಾರಿ ಪೂರ್ಣಗೊಳಿಸಲು ಕಾಲಾವಕಾಶ ಪಡೆದುಕೊಂಡು ಕಾಮಗಾರಿಯನ್ನು ಪುನರ್ ಆರಂಭಿಸಿದ್ದು, ಅಲ್ಲಲ್ಲಿ ಐದಾರು ಕಡೆ ರೈತರು ಸುಮಾರು 150ಮೀಟರ್ ಪೈಪ್ಲೈನ್ ಕಾಮಗಾರಿ ಮಾಡಲು ಅಡ್ಡಿ ಮಾಡುತ್ತಿದ್ದು ಇದನ್ನು ರೈತರ ಮನವೊಲಿಸಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು. ನಮ್ಮ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರೇ ಆದ ಎನ್.ಚೆಲುವರಾಯಸ್ವಾಮಿ ಅವರು ಭಾರೀ ನೀರಾವರಿ ಸಚಿವರಾಗಿರುವ ಕಾರಣ ಕಾಮಗಾರಿಗೆ ಪೂರ್ಣ ಸಹಕಾರವನ್ನು ನೀಡುವುದಾಗಿ ತಿಳಿಸಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಕಾಮಗಾರಿಗೆ ಇರುವ ಅಡೆತಡೆಗಳನ್ನು ನಿವಾರಣೆ ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಚಿವರೊಡಗೂಡಿ ಉದ್ಘಾಟನೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹೆಚ್.ಟಿ.ಮಂಜು ಅವರು ಕಾಮಗಾರಿ ವೀಕ್ಷಣೆ ವೇಳೆ ಪತ್ರಕರ್ತರಿಗೆ ತಿಳಿಸಿದರು.
ಸದರಿ ಗೂಡೆಹೊಸಹಳ್ಳಿ ಏತ ನೀರಾವರಿ ಯೋಜನೆ ಆರಂಭಗೊಂಡರೆ ಕೆ.ಆರ್.ಪೇಟೆ ತಾಲ್ಲೂಕಿನ ಅಘಲಯ, ಮಾಳಗೂರು, ದೊಡ್ಡಹಾರನಹಳ್ಳಿ, ನಾಗರಘಟ್ಟ, ನಾರಾಯಣಪುರ, ರಾಮನಕೊಪ್ಪಲು, ಸಂತೇಬಾಚಹಳ್ಳಿ, ಬಿಲ್ಲೇನಹಳ್ಳಿ, ಆದಿಹಳ್ಳಿ, ಹುಬ್ಬನಹಳ್ಳಿ, ಚಿಕ್ಕಸೋಮನಹಳ್ಳಿ, ಹುಬ್ಬನಹಳ್ಳಿ, ಲಕ್ಷ್ಮೀಪುರ, ನಾಯಕನಹಳ್ಳಿ, ಹನುಮನಹಳ್ಳಿ, ದೊಡ್ಡಕ್ಕಾತನಹಳ್ಳಿ, ಸೋಮೇನಹಳ್ಳಿ, ಬಿಕ್ಕಸಂದ್ರ, ಹರುಪನಹಳ್ಳಿ, ಬಿಲ್ಲೇನಹಳ್ಳಿ, ಅಪ್ಪನಹಳ್ಳಿ, ಹಲಗೆಹೊಸಹಳ್ಳಿ ಗ್ರಾಮಗಳಿಗೆ ಹಾಗೂ ಪಕ್ಕದ ನಾಗಮಂಗಲ ತಾಲ್ಲೂಕು ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ ಹಲವಾರು ಗ್ರಾಮಗಳ ನೂರಾರು ಕೆರೆಕಟ್ಟೆಗಳಿಗೆ ಹೇಮಾವತಿ ನೀರು ತುಂಬಿಸಲು ಅನುಕೂಲವಾಗಲಿದೆ.
ಇಂದಿನ ಏತ ನೀರಾವರಿ ಕಾಮಗಾರಿಯ ವೀಕ್ಷಣೆಯ ಸಂದರ್ಭದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಶ್ರೀನಿವಾಸ್, ಹೇಮಾವತಿ ಜಲಾಶಯ ಯೋಜನೆಯ ನಂ.03ರ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಮುಖಂಡರಾದ ಟಿಎಪಿಸಿಎಂಎಸ್ ಸಂಸ್ಥೆಯ ಅಧ್ಯಕ್ಷ ಮಲ್ಲೇನಹಳ್ಳಿ ಎಂ.ಮೋಹನ್, ನಿರ್ದೇಶಕರಾದ ನಾಗರಘಟ್ಟ ದಿಲೀಪ್ಕುಮಾರ್, ಕೆ.ಬಿ.ಮಧು, ಕೊರಟೀಕೆರೆ ದಿನೇಶ್, ಟಿಎಪಿಸಿಎಂಎಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಅಘಲಯ ಶ್ರೀಧರ್, ಶಿವನಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ಕಿಕ್ಕೇರಿ ಶೇಖರ್, ಸಾಮಿಲ್ ರವಿಕುಮಾರ್, ಹುಬ್ಬನಹಳ್ಳಿ ಬಲರಾಂ, ಕಡೆಹೆಮ್ಮಿಗೆ ವೆಂಕಟೇಶ್, ತಾ.ಪಂ.ಮಾಜಿ ಸದಸ್ಯರಾದ ಹುಲ್ಲೇಗೌಡ, ಐಕನಹಳ್ಳಿ ಕೃಷ್ಣೇಗೌಡ, ಚಿಕ್ಕಗಾಡಿಗನಹಳ್ಳಿ ಸೋಮಶೇಖರ್, ಶಿವನಂಜೇಗೌಡ, ಸಾರಂಗಿ ಸೊಸೈಟಿ ಅಧ್ಯಕ್ಷ ನಾಗೇಶ್, ಗ್ರಾ.ಪಂ.ಸದಸ್ಯ ರಮೇಶ್, ಅಘಲಯ ಹೋಬಳಿ ಲೋಕೇಶ್, ಡಿ.ಎಸ್.ನಾಗೇಂದ್ರ, ನಾಗರಘಟ್ಟ ಎನ್.ಎಸ್.ಮಂಜೇಗೌಡ, ಮಂಜೇಗೌಡ, ಯೋಗೇಶ್ ಸೇರಿದಂತೆ ನೂರಾರು ಮುಖಂಡರು ಹಾಗೂ ನೀರಾವರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.
