ಕೆ.ಆರ್.ಪೇಟೆ,ಸೆ.18: ಇದೇ ಸೆ.20ರಂದು ಛಲವಾದಿ ಮಹಾಸಭಾ ರಾಜ್ಯ ಸಮಿತಿಯಿಂದ ಬೆಂಗಳೂರಿನ ಕೆಂಗೇರಿಯ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಇರುವ ಛಲವಾದಿ ಭವನದಲ್ಲಿ ಬೆಳಿಗ್ಗೆ 11ಗಂಟೆಗೆ ರಾಜ್ಯ ಮಟ್ಟದ ಸರ್ವ ಸದಸ್ಯ ವಾರ್ಷಿಕ ಮಹಾಸಭೆ ಹಾಗೂ ಛಲವಾದಿ ಬಂಧುಗಳ ರಾಜ್ಯ ಸಮ್ಮೇಳನವು ಛಲವಾದಿ ಮಹಾಸಭಾ ರಾಜ್ಯ ಸಮಿತಿಯ ಅಧ್ಯಕ್ಷರಾದ ವಾಣಿ.ಕೆ.ಶಿವರಾಂ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಹಾಗಾಗಿ ತಾಲ್ಲೂಕಿನ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಛಲವಾದಿ ಮಹಾಸಭಾ ಸದಸ್ಯರು ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಛಲವಾದಿ ಮಹಾಸಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಡಿ.ಪ್ರೇಮಕುಮಾರ್ ತಿಳಿಸಿದ್ದಾರೆ.
ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲ್ಲೂಕು ಛಲವಾದಿ ಮಹಾಸಭಾ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ ಮನವಿ ಮಾಡಿದರು.
ಛಲವಾದಿ ಮಹಾಸಭಾ ಸಂಸ್ಥಾಪಕ ಅಧ್ಯಕ್ಷರಾದ ಕೆ.ಶಿವರಾಂ ಅವರ ಸ್ಮರಣೆಯೊಂದಿಗೆ ಅವರ ಧರ್ಮಪತ್ನಿ ವಾಣಿ.ಕೆ.ಶಿವರಾಂ ಅವರು ಮಹಾಸಭಾ ಚಟುವಟಿಕೆಗಳನ್ನು ಮುನ್ನಡೆಸುತ್ತಿದ್ದು ಛಲವಾದಿ ಬಂಧುಗಳು ರಾಜ್ಯಾದ್ಯಂತ 1ಲಕ್ಷಕ್ಕೂ ಹೆಚ್ಚು ಮಂದಿ ಸದಸ್ಯತ್ವವನ್ನು ಕೆ.ಶಿವರಾಂ ಅವರ ಅವಧಿಯಲ್ಲಿಯೇ ಪಡೆದುಕೊಂಡಿರುತ್ತಾರೆ.

ಛಲವಾದಿ ಬಂಧುಗಳು ಬೀದರ್ ನಿಂದ ಚಾಮರಾಜನಗರದ ವರೆಗೆ ಎಲ್ಲಾ ಕಡೆಯಿಂದಲೂ ವಾರ್ಷಿಕ ಮಹಾಸಭೆಗೆ ಆಗಮಿಸುತ್ತಿದ್ದಾರೆ. ಅದೇ ರೀತಿ ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಕನಿಷ್ಠ ಎರಡು ಸಾವಿರಕ್ಕೂ ಹೆಚ್ಚು ಮಂದಿ ಸದರಿ ಮಹಾಸಭೆ ಹಾಗೂ ಛಲವಾದಿ ಸಮ್ಮೇಳನದಲ್ಲಿ ಭಾಗವಹಿಸಬೇಕು ಈ ಮೂಲಕ ಎರಡೂ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿಕೊಡಬೇಕು ಎಂದು ಡಿ.ಪ್ರೇಮಕುಮಾರ್ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್, ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷ ಊಚನಹಳ್ಳಿ ನಟರಾಜು, ಹಾಸನ, ಮಂಡ್ಯ ಉಸ್ತುವಾರಿ ಮಾಂಬಹಳ್ಳಿ ಜಯರಾಂ, ಕಿಕ್ಕೇರಿ ಹೋಬಳಿ ಛಲವಾದಿ ಮಹಾಸಭಾ ಅಧ್ಯಕ್ಷ ಕಳ್ಳನಕೆರೆ ಕೆ.ಆರ್.ಶಂಕರ್, ಚೌಡೇನಹಳ್ಳಿ ದೇವರಾಜು, ಮುದುಗೆರೆ ಮಹೇಂದ್ರ, ಹರಿಹರಪುರ ನರಸಿಂಹ. ತೆಂಗಿನಘಟ್ಟ ಉಮೇಶ್, ರಾಮಕೃಷ್ಣ, ಐಪನಹಳ್ಳಿ ರವಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
