ಕೆ.ಆರ್.ಪೇಟೆ,ಆ.18: ಪಟ್ಟಣದ ಎಸ್.ಎಂ.ಲಿಂಗಪ್ಪ ಸಮುದಾಯ ಭವನದ ಆವರಣದಲ್ಲಿ ತಾಲ್ಲೂಕು ಪಿ.ಎಲ್.ಡಿ. ಬ್ಯಾಂಕಿನ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಅಧ್ಯಕ್ಷ ಎ.ಆರ್.ರಾಜಾನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಶೇರುದಾರರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಎ.ಆರ್.ರಾಜಾನಾಯಕ್ ಅವರು ಬ್ಯಾಂಕಿನ ಸದಸ್ಯರು ಬ್ಯಾಂಕಿನಿAದ ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರ ನೀಡಬೇಕು. ಸಾಲ ಮರು ಪಾವತಿ ಆದರೆ ಬೇರೆ ಸದಸ್ಯರಿಗೆ ಸಾಲವನ್ನು ನೀಡಲು ಸಹಕಾರಿಯಾಗುತ್ತದೆ. ಪಕ್ಕದ ಕೆ.ಆರ್.ನಗರ ತಾಲ್ಲೂಕಿನಲ್ಲಿ ಶೇ.80ರಷ್ಟು ಸಾಲವನ್ನು ರೈತರು ಮರುಪಾವತಿ ಮಾಡಿದ್ದಾರೆ. ಇದರಿಂದ ಸುಮಾರು 10ಕೋಟಿಗೂ ಹೆಚ್ಚು ಸಾಲವನ್ನು ಮತ್ತೆ ರೈತರಿಗೆ ನೀಡಿದ್ದಾರೆ. ಆದರೆ ನಮ್ಮ ತಾಲ್ಲೂಕಿನಲ್ಲಿ ರೈತರು ಬರಗಾಲದ ನೆಪವೊಡ್ಡಿ ಸಾಲವನ್ನು ಮರು ಪಾವತಿ ಮಾಡುತ್ತಿಲ್ಲ ಇದರಿಂದ ಹೊಸ ಸದಸ್ಯರಿಗೆ ಸಾಲ ನೀಡಲು ಸಾಧ್ಯವಾಗುತ್ತಿಲ್ಲ. ಆದರೂ ಸುಮಾರು 75ಲಕ್ಷ ಸಾಲವನ್ನು ಸದಸ್ಯರಿಗೆ ವಿತರಣೆ ಮಾಡಿದ್ದೇವೆ ಎಂದು ಸಭೆಗೆ ಮಾಹಿತಿ ನೀಡಿದರು.

ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರಾದ ಕಬ್ಬಲಗೆರೆಪುರ ಪುಟ್ಟಸ್ವಾಮೀಗೌಡ ಶೇರುದಾರರ ಪ್ರಶ್ನೆಗೆ ಉತ್ತರಿಸುತ್ತಾ ಬ್ಯಾಂಕಿಗೆ 2008ರಿಂದ 2026ವರೆಗೆ 617ಮಂದಿಯಿಂದ ಒಟ್ಟು ಸುಮಾರು 8ಕೋಟಿ ರೂ ಬಾಕಿ ಇದೆ. ಈ ಬಾಕಿ ವಸೂಲಿಗೆ ನ್ಯಾಯಾಲಯದಲ್ಲಿ ದಾವೆ ಹಾಕಲಾಗಿದೆ ಈ ಮೂಲಕ ವಸೂಲಾತಿಗೆ ಬ್ಯಾಂಕ್ ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ ಬ್ಯಾಂಕಿಗೆ 8ಕೋಟಿ ಬಾಕಿ ಇರುವ ಕಾರಣ ಬ್ಯಾಂಕ್ ಆಧಾಯ ಗಳಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕಿನಿಂದ ಕಳೆದ ಆಡಳಿತ ಮಂಡಳಿಯ ವತಿಯಿಂದ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ಹಣದಿಂದ ನೌಕರರಿಗೆ ವೇತನವನ್ನು ನೀಡಲಾಗುತ್ತಿದೆ ಇಲ್ಲದಿದ್ದರೆ ಇನ್ನೂ ತೊಂದರೆಯಾಗುತ್ತಿತ್ತು ಹಾಗಾಗಿ ರೈತರು ನಮ್ಮ ಪಿ.ಎಲ್.ಡಿ ಬ್ಯಾಂಕಿನಿಂದ ಪಡೆದ ಸಾಲವನ್ನು ಮರು ಪಾವತಿ ಮಾಡಿ ಬ್ಯಾಂಕ್ ಉಳಿಸಲು ಸಹಕಾರ ನೀಡಬೇಕು ಎಂದು ಪುಟ್ಟಸ್ವಾಮೀಗೌಡ ಮನವಿ ಮಾಡಿದರು.

ಹಿರಿಯ ಸಹಕಾರ ಬಂಧುಗಳಾದ ವಿಠಲಾಪುರ ಸುಬ್ಬೇಗೌಡ, ಮಾಕವಳ್ಳಿ ವಸಂತಕುಮಾರ್, ಹೆಮ್ಮಡಹಳ್ಳಿ ತಿಮ್ಮೇಗೌಡ, ಕರೀಗೌಡ ಮತ್ತಿತರರು ಸಭೆಯಲ್ಲಿ ಮಾತನಾಡಿ ಪಿ.ಎಲ್.ಡಿ. ಬ್ಯಾಂಕ್ ಚಿನ್ನಾಭರಣಗಳ ಸಾಲ ನೀಡಲು ಕ್ರಮ ವಹಿಸಬೇಕು. ವಾಣಿಜ್ಯ ಮಳಿಗೆಗಳಲ್ಲಿ ರೈತರಿಗೆ ಬೇಕಾದ ರಸಗೊಬ್ಬರ, ಬಿತ್ತನೆಬೀಜ, ಕೀಟನಾಶಕ ಮಾರಾಟ ಮಾಡುವ ಅಂಗಡಿಯನ್ನು ತೆರೆಯಬೇಕು. ಈ ಮೂಲಕ ಆಧಾಯ ಗಳಿಸಲು ಪ್ರಯತ್ನಿಸಬೇಕು. ತಾಲ್ಲೂಕು ಕಚೇರಿ ಬಳಿ ಇ.ಸ್ಟಾಂಪ್ ಮಾರಾಟದ ಶಾಖೆ ಆರಂಭಿಸಬೇಕು ಈ ಮೂಲಕ ಆಧಾಯ ಗಳಿಸುವ ಕಡೆಗೆ ಹೆಚ್ಚು ಗಮನ ಹರಿಸಬೇಕು. ಇಲ್ಲದಿದ್ದರೆ ಬ್ಯಾಂಕ್ ಸತತ ನಷ್ಟ ಅನುಭವಿಸಬೇಕಾಗುತ್ತದೆ. ಚಿನ್ನದ ಈಡಿನ ಮೇಲೆ ಬೇರೆ ಬ್ಯಾಂಕುಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ಗೋಲ್ಡ್ ಲೋನ್ ನೀಡುವ ಯೋಜನೆ ಜಾರಿಗೆ ತಂದರೆ ಪಿ.ಎಲ್.ಡಿ ಬ್ಯಾಂಕ್ ಉತ್ತಮ ಆಧಾಯ ಗಳಿಸುವುದು ಖಚಿತ ಎಂದು ಸದಸ್ಯರು ಸಲಹೆ ನೀಡಿದರು.

ವಾರ್ಷಿಕಾ ಮಹಾಸಭೆಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಲಕ್ಷ್ಮಿಪುರ ಚಂದ್ರೇಗೌಡ, ನಿರ್ದೇಶಕರುಗಳಾದ ಕಬ್ಬಲಗೆರೆಪುರ ಪುಟ್ಟಸ್ವಾಮೀಗೌಡ, ಅಣ್ಣೇಚಾಕನಹಳ್ಳಿ ಎ.ಬಿ.ನಾಗರಾಜು, ಸಿಮೆಂಟ್ ಎಂ.ಆರ್.ರಮೇಶ್, ಅರೆಬೊಪ್ಪನಹಳ್ಳಿ ಬಿ.ಎಸ್.ಸುನೀಲ್, ಬಂಡಿಹೊಳೆ ಬಿ.ಪಿ.ನಾಗೇಶ್, ಶೀಳನೆರೆ ಎಸ್.ಟಿ.ರಾಮೇಗೌಡ, ಹೊನ್ನೇನಹಳ್ಳಿ ಪಿ.ಜೆ.ಮಂಜುಳಾ ಕೃಷ್ಣೇಗೌಡ, ಬಣ್ಣೇನಹಳ್ಳಿ ಬಿ.ಜಿ.ಧನಂಜಯ, ಪೇಟೆಅರಳಕುಪ್ಪೆ ಎ.ಸಿ.ಮೋಹನ್, ನಾಟನಹಳ್ಳಿ ಎಸ್.ಎನ್.ಕವಿತಚಂದ್ರೇಗೌಡ, ಕೆ.ಟಿ.ಚಕ್ರಪಾಣಿ, ಎಂ.ಆರ್.ರಮೇಶ್, ಭಾರತೀಪುರ ಸುರೇಶ್ ಬಿ.ಎಸ್., ಮಾಳಗೂರು ಜಗದೀಶ್, ಬ್ಯಾಂಕ್ ವ್ಯವಸ್ಥಾಪಕ ಎಂ.ಆನಂದ್, ಕ್ಷೇತ್ರಾಧಿಕಾರಿ ಯೋಗೇಶ್ವರಿ, ಕ್ಷೇತ್ರಾಧಿಕಾರಿಗಳಾದ ಕೆ.ಜಿ.ಹರೀಶ್, ಕೆ.ಎಸ್.ರೂಪಾ, ಮಹಾದೇವೇಗೌಡ, ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಅಧಿಕ ಬ್ಯಾಂಕಿನ ಶೇರುದಾರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
