ಚನ್ನರಾಯಪಟ್ಟಣ: ಭಾರತವು ಪ್ರಜಾಪ್ರಭುತ್ವದ ತೊಟ್ಟಿಲಾಗಿದ್ದು, ದೇಶದ ಪ್ರಜಾಪ್ರಭುತ್ವದ ತತ್ವಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದು ಸರ್ಕಾರಿ ಅಲ್ಪಸಂಖ್ಯಾತ ಮುರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಜೆ. ರತ್ನಾಕರ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಪ್ರಜಾಪ್ರಭುತ್ವವು ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವದ ತತ್ವಗಳ ಆಧಾರದ ಮೇಲೆ ರೂಪುಗೊಂಡಿದೆ. ಈ ತತ್ವಗಳನ್ನು ಫ್ರೆಂಚ್ ಕ್ರಾಂತಿಯೊಂದಿಗೆ ಸಂಪರ್ಕಿಸಲಾಗುತ್ತದೆಯಾದರೂ, ಭಾರತದಲ್ಲಿ ಕ್ರಿಸ್ತಪೂರ್ವ ಕಾಲದಲ್ಲಿಯೇ ಪ್ರಜಾಪ್ರಭುತ್ವ ಮಾದರಿಯ ವ್ಯವಸ್ಥೆಗಳಿದ್ದವು ಎಂಬುದನ್ನು ಇತಿಹಾಸದ ಉಲ್ಲೇಖಗಳು ತಿಳಿಸುತ್ತವೆ ಎಂದರು.
ಭಗವಾನ್ ಬುದ್ಧರ ಕಾಲಘಟ್ಟದಲ್ಲಿಯೇ ಕೆಲವು ಸಂಸ್ಥಾನಗಳಲ್ಲಿ ಪ್ರಜಾಪ್ರಭುತ್ವದ ತತ್ವಗಳು ನೆಲೆಗೊಂಡಿದ್ದವು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಂಬಿ ಒಗ್ಗಟ್ಟಿನಿಂದ ಬದುಕುವ ಸಮಾಜವನ್ನು ಸುಲಭವಾಗಿ ನಾಶಪಡಿಸಲು ಸಾಧ್ಯವಿಲ್ಲ ಎಂಬ ವಿಚಾರವನ್ನು ಬುದ್ಧರ ಜೀವನದ ಘಟನೆಗಳ ಮೂಲಕ ತಿಳಿಯಬಹುದು. ಈ ವಿಚಾರಗಳನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ‘ಬುದ್ಧ ಮತ್ತು ಆತನ ಧಮ್ಮ’ ಕೃತಿಯಲ್ಲಿಯೂ ದಾಖಲಿಸಿದ್ದಾರೆ ಎಂದು ಹೇಳಿದರು.

ಭಾರತದ ಸಂವಿಧಾನ ಜಾರಿಯಾದ ಬಳಿಕ ಕಟ್ಟಕಡೆಯ ಪ್ರಜೆಗೂ ಪ್ರಜಾಪ್ರಭುತ್ವ ಆಡಳಿತದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿದೆ. ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕು, ಸ್ವಾಭಿಮಾನದಿಂದ ಬದುಕುವ ಅವಕಾಶದ ಜೊತೆಗೆ ಇತರರ ಗೌರವಕ್ಕೂ ಧಕ್ಕೆ ಬಾರದಂತೆ ನಡೆದುಕೊಳ್ಳುವುದು ಪ್ರಜಾಪ್ರಭುತ್ವದ ನಿಜವಾದ ಆಶಯವಾಗಿದೆ ಎಂದರು.
ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಅರಿತು ಜಾಗೃತರಾಗಬೇಕು. ಪ್ರಜಾಪ್ರಭುತ್ವದ ಉಳಿವಿಗೆ ನೈತಿಕ ಮೌಲ್ಯಗಳು ಹಾಗೂ ಪರಿಣಾಮಕಾರಿ ವಿರೋಧ ಪಕ್ಷವೂ ಅಗತ್ಯ ಎಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಆದ್ದರಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಎಂ.ಜೆ. ರತ್ನಾಕರ್ ಹೇಳಿದರು.
ಕಾರ್ಯಕ್ರಮವನ್ನು ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟಿಸಿ ಮಾತನಾಡಿ, ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ್ದು, ಶ್ರೇಷ್ಠ ಸಂವಿಧಾನದ ಮೂಲಕ ದೇಶವು ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಆರ್ಸಿ ಅನಿಲ್ ಕುಮಾರ್ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ತ್ಯಾಗರಾಜು, ವ್ಯವಸ್ಥಾಪಕ ಮೋಹನ್, ಸಹಾಯಕ ಪ್ರಾಧ್ಯಾಪಕ ಶಿವಕುಮಾರ್, ತಾಲೂಕು ಕಚೇರಿಯ ಪವನ್, ರೈತ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ, ವಕೀಲ ಅನಿಲ್, ಪಿಎಸ್ಐ ಮಲ್ಲಪ್ಪ ಕುಂಬಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
