ಕೊರಟಗೆರೆ:- ಕುಟುಂಬಸ್ಥರು ಮನೆಯಲ್ಲಿ ಇಲ್ಲದ ಸಮಯವನ್ನು ಗಮನಿಸಿಕೊಂಡ ಕಳ್ಳರು ಮನೆಯ ಬೀಗದ ಚಿಲಕ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣ ಕಳವು ಮಾಡಿರುವ ಘಟನೆ ಪಟ್ಟಣದ ವಿನಾಯಕ ನಗರದಲ್ಲಿ ಶನಿವಾರ ನಡೆದಿದೆ.
ವಿನಾಯಕ ನಗರದ ನಿವಾಸಿ ಹಾಗೂ ಎಚ್ಡಿಎಫ್ಸಿ ಬ್ಯಾಂಕ್ ಉದ್ಯೋಗಿ ಹನುಮಂತರಾಜು ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಹನುಮಂತರಾಜು ಅವರು ಕೆಲಸಕ್ಕೆ ತೆರಳಿದ್ದ ವೇಳೆ, ಅವರ ಪತ್ನಿ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು ಶಾಲೆಗೆ ತೆರಳಿದ್ದರು. ಮಕ್ಕಳು ಸಹ ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆಯ ಬೀಗದ ಚಿಲಕ ಮುರಿದು ಒಳನುಗ್ಗಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿದ್ದ 106 ಗ್ರಾಂ ಚಿನ್ನಾಭರಣ ಹಾಗೂ ಸುಮಾರು 1 ಕೆ.ಜಿ. ಬೆಳ್ಳಿ ಆಭರಣ ಕಳವಾಗಿರುವ ಕುರಿತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳತನವಾಗಿರುವ ಆಭರಣಗಳ ಒಟ್ಟು ಮೌಲ್ಯ ಲಕ್ಷಾಂತರ ರೂಪಾಯಿ ಎಂದು ತಿಳಿದುಬಂದಿದೆ.
*ಹಗಲಲ್ಲೇ ಕಳ್ಳತನ; ಸಾರ್ವಜನಿಕರಲ್ಲಿ ಆತಂಕ*
ಕೊರಟಗೆರೆ ಪಟ್ಟಣದ ಪ್ರಮುಖ ಪ್ರದೇಶವಾಗಿರುವ ವಿನಾಯಕ ನಗರದಲ್ಲಿ ಜನ ಸಂಚಾರವಿರುವ ವೇಳೆಯಲ್ಲೇ ಕಳ್ಳತನ ನಡೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕುಟುಂಬಸ್ಥರು ಎಂದಿನಂತೆ ತಮ್ಮ ಕೆಲಸ ಹಾಗೂ ಶಾಲೆಗೆ ತೆರಳಿದ ನಂತರ ಮನೆ ಖಾಲಿಯಾಗಿರುವುದನ್ನು ಬಳಸಿಕೊಂಡು ಕಳ್ಳರು ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ.
ಮನೆಯ ಬಾಗಿಲಿನ ಬೀಗದ ಚಿಲಕ ಮುರಿದಿರುವುದು ಕಂಡುಬಂದ ಬಳಿಕ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ಭೇಟಿ
ಕಳ್ಳತನದ ಮಾಹಿತಿ ತಿಳಿದ ಕೂಡಲೇ ಕೊರಟಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಪಿಐ ಪುರುಷೋತ್ತಮ ಹಾಗೂ ಪಿಎಸ್ಐ ತೀರ್ಥೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮನೆಯಲ್ಲಿನ ವಸ್ತುಗಳ ಸ್ಥಿತಿ ಹಾಗೂ ಕಳ್ಳರು ಒಳನುಗ್ಗಿದ ಮತ್ತು ಹೊರಹೋದ ಸಾಧ್ಯತೆಗಳ ಕುರಿತು ಮಾಹಿತಿ ಸಂಗ್ರಹಿಸಿದರು.
ತನಿಖೆಯ ಭಾಗವಾಗಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಲಾಯಿತು. ಮನೆಯೊಳಗೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ದೊರೆತಿರುವ ಸುಳಿವುಗಳನ್ನು ಸಂಗ್ರಹಿಸಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪಟ್ಟಣದ ಜನವಸತಿ ಪ್ರದೇಶದಲ್ಲೇ ಹಗಲು ವೇಳೆಯಲ್ಲಿ ಕಳ್ಳತನ ನಡೆದಿರುವ ಹಿನ್ನೆಲೆಯಲ್ಲಿ, ಪೊಲೀಸರು ಕಳ್ಳರ ಚಲನವಲನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಪುರುಷೋತ್ತಮ್ ಹಾಗೂ ಪಿಎಸ್ಐ ತೀರ್ಥೇಶ್ ಸ್ಥಳ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
- ಶ್ರೀನಿವಾಸ್ ಕೊರಟಗೆರೆ.
