ಶಿವಮೊಗ್ಗ: ಸಕ್ರೆಬೈಲು ಆನೆ ಶಿಬಿರದಲ್ಲಿರುವ ಆನೆಗಳ ಆರೋಗ್ಯ ಮತ್ತು ವೈದ್ಯಕೀಯ ಆರೈಕೆಯ ಕುರಿತು ಸರ್ಕಾರ ತಕ್ಷಣ ಗಮನಹರಿಸಬೇಕು ಎಂದು ಬೇರು ಭೂಮಿ ಪರಿಸರ ಸಂರಕ್ಷಣಾ ಸಂಸ್ಥೆ ಆಗ್ರಹಿಸಿದೆ.
ಸಕ್ರೆಬೈಲು ಶಿಬಿರದಲ್ಲಿರುವ ಬಾಲಣ್ಣ, ಅಡಕ ಬಡಕ, ವಿಕ್ರಾಂತ್ ಹಾಗೂ ಶೌರ್ಯ ಸೇರಿದಂತೆ ಕೆಲವು ಆನೆಗಳು ವಿವಿಧ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ವಿಶೇಷವಾಗಿ ಶೌರ್ಯ ಆನೆಯ ದೇಹ ಮತ್ತು ಕಾಲಿನಲ್ಲಿ ಕಾಣಿಸಿಕೊಂಡಿರುವ ಗಾಯ ಹಾಗೂ ಊತದ ಬಗ್ಗೆ ತಜ್ಞ ವನ್ಯಜೀವಿ ಪಶುವೈದ್ಯರಿಂದ ಸಮಗ್ರ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.
ಆನೆಗಳಂತಹ ವನ್ಯಜೀವಿಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯ ಪಶುವೈದ್ಯಕೀಯ ಸೇವೆಯ ಜೊತೆಗೆ ವನ್ಯಜೀವಿ ಚಿಕಿತ್ಸೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ತಜ್ಞ ಪಶುವೈದ್ಯರ ಅಗತ್ಯವಿದೆ. ಸಕ್ರೆಬೈಲು ಸೇರಿದಂತೆ ರಾಜ್ಯದ ಎಲ್ಲಾ ಆನೆ ಶಿಬಿರಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳು, ತುರ್ತು ಚಿಕಿತ್ಸಾ ವ್ಯವಸ್ಥೆ ಹಾಗೂ ನಿಯಮಿತ ಆರೋಗ್ಯ ತಪಾಸಣೆಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಸ್ಥೆ ತಿಳಿಸಿದೆ.

ಕುಮ್ಮಿ ಆನೆಗಳ ತರಬೇತಿ ಸೇರಿದಂತೆ ಶಿಬಿರಗಳಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳು ಆನೆಗಳ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ವೈಜ್ಞಾನಿಕ ಹಾಗೂ ಮಾನವೀಯ ರೀತಿಯಲ್ಲಿ ನಡೆಯಬೇಕು. ಗಾಯಗೊಂಡ ಅಥವಾ ಅನಾರೋಗ್ಯಕ್ಕೊಳಗಾದ ಆನೆಗಳಿಗೆ ಯಾವುದೇ ವಿಳಂಬವಿಲ್ಲದೆ ಸೂಕ್ತ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಆಗ್ರಹಿಸಲಾಗಿದೆ.
ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ತಕ್ಷಣ ಗಮನಹರಿಸಿ ಸಕ್ರೆಬೈಲು ಸೇರಿದಂತೆ ರಾಜ್ಯದ ಎಲ್ಲಾ ಆನೆ ಶಿಬಿರಗಳ ವೈದ್ಯಕೀಯ ವ್ಯವಸ್ಥೆಯನ್ನು ಪರಿಶೀಲಿಸಿ, ಅಗತ್ಯವಿರುವ ಕಡೆ ತಜ್ಞ ವನ್ಯಜೀವಿ ಪಶುವೈದ್ಯರನ್ನು ನೇಮಿಸಬೇಕು ಎಂದು *ಬೇರು ಭೂಮಿ ಪರಿಸರ ಸಂರಕ್ಷಣಾ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಬೇರು ಭೂಮಿ ಯಶಸ್* ಅವರು ಆಗ್ರಹಿಸಿದ್ದಾರೆ.
ಆನೆಗಳು ಕರ್ನಾಟಕದ ನೈಸರ್ಗಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದು, ಅವುಗಳ ಆರೋಗ್ಯ, ಸುರಕ್ಷತೆ ಮತ್ತು ಕಲ್ಯಾಣವನ್ನು ಖಚಿತಪಡಿಸುವುದು ಸರ್ಕಾರದ ಆದ್ಯತೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
- ಬೇರು ಭೂಮಿ ಪರಿಸರ ಸಂರಕ್ಷಣಾ ಸಂಸ್ಥೆ, ಕರ್ನಾಟಕ
