ಕೆ.ಆರ್.ಪೇಟೆ, ಸೆ.22: ದೇಶದ ಯಾವುದೇ ಸಂಘ-ಸಂಸ್ಥೆ ಅಥವಾ ಬ್ಯಾಂಕ್ಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ನೀಡುವ ಯೋಜನೆಗಳಿಲ್ಲ. ಆದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಂಡು ಖಾಸಗಿ ಸಾಲದಿಂದ ದೂರವಿರಬೇಕು ಎಂದು ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ ಬ್ಯಾಂಕ್) ನಿರ್ದೇಶಕ ಶೀಳನೆರೆ ಎಸ್.ಅಂಬರೀಶ್ ಹೇಳಿದರು.
ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ಕೃಷಿ ಚಟುವಟಿಕೆ ಹಾಗೂ ಹೈನುಗಾರಿಕೆಗೆ ಬಳಸಿಕೊಳ್ಳಬೇಕು. ಬೇರೆ ಉದ್ದೇಶಗಳಿಗೆ, ಅದರಲ್ಲೂ ಮದುವೆ ಸೇರಿದಂತೆ ವೈಯಕ್ತಿಕ ಖರ್ಚುಗಳಿಗೆ ಸಾಲ ಬಳಸುವುದು ಸೂಕ್ತವಲ್ಲ. ಪಡೆದ ಸಾಲವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಬೇಕು. ಸಕಾಲದಲ್ಲಿ ಸಾಲ ಮರುಪಾವತಿ ಮಾಡದಿದ್ದರೆ ಬಡ್ಡಿ ವಿಧಿಸಲಾಗುತ್ತದೆ. ಆದ್ದರಿಂದ ನಿಗದಿತ ಸಮಯದಲ್ಲಿ ಸಾಲ ತೀರಿಸಿ, ಅಗತ್ಯವಿದ್ದಲ್ಲಿ ಹೊಸ ಸಾಲ ಪಡೆಯುವ ಮೂಲಕ ಬಡ್ಡಿ ಭಾರ ತಪ್ಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಅಶೋಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಸಂಘದಲ್ಲಿಯೇ ಹೆಚ್ಚಿನ ವ್ಯವಹಾರ ನಡೆಸಬೇಕು. ಸಂಘದಲ್ಲಿ ಉಳಿತಾಯ ಖಾತೆ ಸೌಲಭ್ಯವಿದ್ದು, ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ರೈತರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್ ಮಾತನಾಡಿ, ಗ್ರಾಮೀಣ ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳು ಪ್ರಮುಖವಾಗಿ ನೆರವಾಗುತ್ತಿವೆ. ಈ ಸಹಕಾರ ಸಂಸ್ಥೆಗಳ ಅಭಿವೃದ್ಧಿಗೆ ರಾಜಕೀಯ ಭೇದಭಾವವಿಲ್ಲದೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಕೆ.ಜೆ.ರಾಮಸ್ವಾಮಿ 2025-26ನೇ ಸಾಲಿನ ಆಡಿಟ್ ವರದಿಯನ್ನು ಮಂಡಿಸಿ, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.
ಇದೇ ವೇಳೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಶೇರುದಾರರ ಮಕ್ಕಳಾದ ಚಿಲ್ಲದಹಳ್ಳಿ ಗೌತಮ್ ಹಾಗೂ ಎ.ಬಿ.ಹಳ್ಳಿ ತನುಜಾ ಅವರನ್ನು ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ನಗರೂರು ಕುಮಾರ್, ನಿರ್ದೇಶಕರಾದ ಅರೆಬೊಪ್ಪನಹಳ್ಳಿ ಅಶೋಕ್, ಎ.ಬಿ.ಮಹೇಂದ್ರ, ಎ.ಸಿ.ವೆಂಕಟೇಶ್ವರ್, ಚಂದ್ರೇಗೌಡ, ರಾಧಾಮಹೇಶ್, ಚಿಲ್ಲದಹಳ್ಳಿ ಮಣಿಯಮ್ಮ, ವಳಗೆರೆಮೆಣಸ ಜಯರಾಂ, ಚಿಕ್ಕೋಸಹಳ್ಳಿ ಸುರೇಶ್, ಪಾರ್ವತಮ್ಮ ಸೇರಿದಂತೆ ಸಂಘದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು, ಸಿಬ್ಬಂದಿ ಹಾಗೂ ನೂರಾರು ಶೇರುದಾರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
