ಶ್ಲೋಕ – 07
ಆಹಾರಸ್ತ್ವಪಿ ಸರ್ವಸ್ಯ ತ್ರಿವಿಧೋ ಭವತಿ ಪ್ರಿಯಃ ।
ಯಜ್ಞಸ್ತಪಸ್ತಥಾ ದಾನಂ ತೇಷಾಂ ಭೇದಮಿಮಂ ಶೃಣು ॥೭॥
ಆಹಾರಃ ತು ಅಪಿ ಸರ್ವಸ್ಯ ತ್ರಿವಿಧಃ ಭವತಿ ಪ್ರಿಯಃ ।
ಯಜ್ಞ ತಪಃ ತಥಾ ದಾನಂ ತೇಷಾಂ ಭೇದಮ್ ಇಮಮ್ ಶೃಣು
–ಎಲ್ಲರೂ ಉಣ್ಣುವ ಆಹಾರವೂ ಮೂರು ತೆರನಾಗಿ ಮೆಚ್ಚಿಗೆಯಾಗುತ್ತದೆ. ಯಜ್ಞ, ತಪಸ್ಸು, ದಾನ ಕೂಡ. ಅವುಗಳ ಈ ಬಗೆಯನ್ನಾಲಿಸು.
ನಾವು ತಿನ್ನುವ ಆಹಾರ ಕೂಡ ಮೂರು ತೆರನಾಗಿರುತ್ತದೆ. ಸಾತ್ವಿಕ, ರಾಜಸ ಮತ್ತು ತಾಮಸ ಆಹಾರ. “ಅನ್ನಂ ಅಷಿತಂ ತ್ರೇಧಾ ವಿಧ್ಯತೆ” (ಛಾಂದೋಗ್ಯೋಪನಿಷತ್-೫-೧) ಎನ್ನುವಂತೆ ನಾವು ಸೇವಿಸುವ ಆಹಾರವನ್ನು ನಮ್ಮೊಳಗಿರುವ ಪ್ರಾಣ ಮತ್ತು ವೈಶ್ವಾನರರು ಮೂರು ಬಗೆಯನ್ನಾಗಿ(ಸೂಕ್ಷ್ಮ, ಸ್ಥೂಲ ಮತ್ತು ಸ್ಥೂಲ) ವಿಂಗಡಿಸಿ ಅದನ್ನು ದೇಹದ ವಿವಿಧ ಭಾಗಗಳಿಗೆ ಸರಬರಾಜು ಮಾಡುತ್ತಾರೆ. ನಮ್ಮ ಆಹಾರಕ್ಕೂ ಮನಸ್ಸಿಗೂ ನೇರ ಸಂಬಂಧವಿದೆ. ಇದನ್ನು ನಮ್ಮ ಪ್ರಾಚೀನರು ಅರಿತಿದ್ದರು. ಅದಕ್ಕಾಗಿ ಮನಸ್ಸಿನ ಮೇಲೆ ಪ್ರಭಾವ ಬೀರುವ ಆಹಾರವನ್ನು ಅವರು ನಿಷೇಧಿಸಿದರು. ಉದಾಹರಣೆಗೆ ಬೆಳ್ಳುಳ್ಳಿ. ಇದು ಔಷಧೀಯ ವಸ್ತು. ಆದರೆ ಇದನ್ನು ನಿತ್ಯ ಆಹಾರದಲ್ಲಿ ಬಳಸುವುದನ್ನು ನಿಷೇಧಿಸಿದ್ದಾರೆ. ಏಕೆಂದರೆ ಇದು ನಮ್ಮ ಬುದ್ಧಿ ಬೆಳವಣಿಗೆಗೆ ಪೂರಕವಲ್ಲ. ಇದೇ ರೀತಿ ನುಗ್ಗೆಕಾಯಿ, ತೊಂಡೇಕಾಯಿ ಇತ್ಯಾದಿ. ಅಧ್ಯಯನ ಮಾಡುವವರಿಗೆ ಇದು ನಿಷಿದ್ಧ (ಔಷಧವಾಗಿ ಬಳಸಬಹುದು). ಹೀಗೆ ಮನುಷ್ಯನ ಬುದ್ಧಿಗೆ ಯಾವ ವಿಧದ ಆಹಾರ ಸೂಕ್ತ ಎನ್ನುವುದನ್ನು ಮೊತ್ತ ಮೊದಲ ಬಾರಿಗೆ ಕೃಷ್ಣ ಜಗತ್ತಿಗೆ ಕೊಟ್ಟ.
ಆಹಾರದ ಜೊತೆಗೆ ನಾವು ಮಾಡುವ ದೇವರ ಪೂಜೆ, ತಪಃ, ನಮ್ಮ ಚಿಂತನಾ ಕ್ರಮ, ದಾನ, ಜೀವನದ ನಡೆ, ಮಾತು ಎಲ್ಲವುದರಲ್ಲೂ ಈ ಮೂರು ವಿಧವನ್ನು ಗುರುತಿಸಬಹುದು. ಕೃಷ್ಣ ಮುಂದಿನ ಶ್ಲೋಕಗಳಲ್ಲಿ ಆಹಾರ, ಯಜ್ಞ, ತಪಸ್ಸು ಮತ್ತು ದಾನದಲ್ಲಿ ಈ ಮೂರು ಬಗೆಯನ್ನು ಗುರುತಿಸುವುದು ಹೇಗೆ ಎನ್ನುವುದನ್ನು ವಿವರಿಸುತ್ತಾನೆ.
