ಶ್ಲೋಕ – 09
ಕಟ್ವಮ್ಲಲವಣಾತ್ಯುಷ್ಣತೀಕ್ಷ್ಣರೂಕ್ಷವಿದಾಹಿನಃ ।
ಆಹಾರಾ ರಾಜಸಸ್ಯೇಷ್ಟಾ ದುಃಖಶೋಕಾಮಯಪ್ರದಾಃ ॥೯॥
–ಇವು ರಾಜಸರಿಗೆ ಮೆಚ್ಚಿಕೆಯಾದ ತಿನಿಸುಗಳು: ಅತಿಯಾದ ಖಾರ, ಹುಳಿ, ಉಪ್ಪು, ತುಂಬ ಬಿಸಿ, ಬಿರುಸು, ನೀರಸ ಮತ್ತು ಉರಿಬರಿಸುವಂಥವು; ದುಃಖ-ದುಮ್ಮಾನ ಮತ್ತು ಖಾಯಿಲೆ ಬರಿಸುವಂಥವು.
ಇಲ್ಲಿ ರಾಜಸ ಆಹಾರದ ವಿವರಣೆಯನ್ನು ಕೃಷ್ಣ ಕೊಟ್ಟಿದ್ದಾನೆ. ವಿಪರೀತ ಖಾರ, ವಿಪರೀತ ಹುಳಿ, ಅತಿ ಉಪ್ಪು, ರಾಜಸ ಆಹಾರವೆನಿಸುತ್ತದೆ. ಅತಿಯಾದ ಬಿಸಿಯನ್ನು ಕುಡಿಯುವುದು; ಬಿರುಸು ಮತ್ತು ನೀರಸವಾದ ಆಹಾರವನ್ನು ಸೇವಿಸುವುದು; ಎದೆ ಸುಡುವ ಆಹಾರ ಸೇವನೆ-ಇವು ರಾಜಸರ ಲಕ್ಷಣವಾಗಿರುತ್ತದೆ. ಈ ಆಹಾರ ಸೇವನೆಯಿಂದ ಮಾನಸಿಕ ಮತ್ತು ದೈಹಿಕ ವೇದನೆ ಹೆಚ್ಚುತ್ತದೆ. ಇದು ಖಾಯಿಲೆಯನ್ನು ತರಬಲ್ಲ ಆಹಾರ.
ಹಸಿಮೆಣಸಿನ ಕಾಯಿಯನ್ನು ನೇರವಾಗಿ ತಿನ್ನುವುದು, ಹುಣಸೇ ಹಣ್ಣನ್ನು ಅತಿಯಾಗಿ ತಿನ್ನುವುದು, ಯಾವಾಗಲೂ ಹೆಚ್ಚು ಉಪ್ಪನ್ನು ಬಳಸುವುದು, ಗಂಟಲು ಸುಡುವ ಕಾಫಿ ಕುಡಿಯುವುದು, ಅತಿಯಾಗಿ ಸಾಸಿವೆ ಮತ್ತು ಮಸಾಲೆ ಬಳಸುವುದು, ರಸವಿಲ್ಲದ ಆಹಾರ(Ex:Chewing gum) ಸೇವನೆ; ಇತ್ಯಾದಿ ರಾಜಸರ ಆಹಾರ ಕ್ರಮಕ್ಕೆ ಕೆಲವು ಉದಾಹರಣೆಗಳು.[ಒಂದು ವೇಳೆ ಇಲ್ಲಿ ಹೇಳಿದ ಈ ಆಹಾರವನ್ನು ರೋಗ ಪರಿಹಾರಕ್ಕಾಗಿ ವೈದ್ಯರು ಸೂಚಿಸಿದ್ದರೆ ಅದು ಸಾತ್ವಿಕ ಆಹಾರವೆನಿಸುತ್ತದೆ].
